ಬೆಂಗಳೂರು: ಜಿಪಿಎಸ್ (Global Positioning System) ವ್ಯವಸ್ಥೆ ಅದೆಷ್ಟು ಉಪಕಾರಿಯಾಗಿದೆ ಎಂಬುದು ನಮಗೆಲ್ಲ ಗೊತ್ತು. ಈ ಜಿಪಿಎಸ್ನಿಂದಾಗಿ ನಾವು ಗೊತ್ತಿರದ/ಪರಿಚಯವೇ ಇಲ್ಲದ ಜಾಗಕ್ಕೂ ಆರಾಮಗಿ ಹೋಗಬಹುದು. ಈ ಜಿಪಿಎಸ್ನ್ನು ನಿಮ್ಮ ಮೊಬೈಲ್, ವಾಚ್, ಕಾರುಗಳಿಗೂ ಅಳವಡಿಸಿಕೊಳ್ಳುವಷ್ಟು ಸೌಲಭ್ಯ ಈಗಿದೆ. ಮನುಷ್ಯನ ಸಂಚಾರವನ್ನು ಜಿಪಿಎಸ್ ಸುಗಮಗೊಳಿಸಿದೆ. ಇದೇ ಜಿಪಿಎಸ್ ಈಗ ಬೆಂಗಳೂರಿನ ವ್ಯಕ್ತಿಗೆ ಆತನ ಹೆಂಡತಿಯಿಂದ ಆಗುತ್ತಿದ್ದ ವಂಚನೆಯನ್ನು ಪತ್ತೆ ಮಾಡಿ ತೋರಿಸಿದೆ. ತನ್ನ ಪತ್ನಿಗೆ ಇನ್ನೊಬ್ಬಾತನೊಂದಿಗೆ ಅಫೇರ್ ಇರುವುದನ್ನು ಆ ವ್ಯಕ್ತಿ ಜಿಪಿಎಸ್ನಿಂದ (GPS tracker) ಗೊತ್ತುಮಾಡಿಕೊಂಡಿದ್ದಾರೆ ಮತ್ತು ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವ್ಯಕ್ತಿಯ ಹೆಸರು ಬಹಿರಂಗವಾಗಿಲ್ಲ. ಜಿಪಿಎಸ್ನಿಂದಾಗಿ ಪತ್ನಿಯ ಅಕ್ರಮ ಸಂಬಂಧ ಹೇಗೆ ತನಗೆ ಗೊತ್ತಾಯಿತು ಎಂಬುದನ್ನು ಅವರು ಹೇಳಿಕೊಂಡಿದ್ದಾಗಿ, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಂದಹಾಗೇ, ಈ ಜೋಡಿಗೆ 2014ರಲ್ಲಿ ಮದುವೆಯಾಗಿ, 6ವರ್ಷದ ಮಗಳೂ ಇದ್ದಳು. ಆದರೆ ಆಕೆ ಪರಪುರುಷನ ತೆಕ್ಕೆಗೆ ಬಿದ್ದಿದ್ದಳು.
‘ನಾನು 2020ರಲ್ಲಿ ಕಾರು ಖರೀದಿ ಮಾಡಿದೆ. ಅದರಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಇದ್ದು, ಅದನ್ನು ನನ್ನ ಮೊಬೈಲ್ಗೆ ಕನೆಕ್ಟ್ ಮಾಡಿಟ್ಟುಕೊಂಡಿದ್ದೆ. ಹಾಗಂತ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಪತ್ನಿಗೂ ಹೇಳಿರಲಿಲ್ಲ. ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬಹುತೇಕ ರಾತ್ರಿಪಾಳಿಯಲ್ಲೇ ಕೆಲಸ ಮಾಡುತ್ತಿದ್ದೆ. ಹೀಗೆ ಇತ್ತೀಚೆಗೆ ಒಂದು ದಿನ ಎಂದಿನಂತೆ ರಾತ್ರಿ ಕೆಲಸ ಮಾಡುತ್ತಿದ್ದವನಿಗೆ, ನನ್ನ ಕಾರು ಮನೆಯಿಂದ ಹೊರಟಿದ್ದು ಗೊತ್ತಾಯಿತು. ಮೊಬೈಲ್ಗೆ ಕನೆಕ್ಟ್ ಆಗಿದ್ದರಿಂದ ಸಹಜವಾಗಿಯೇ ನನಗೆ ತಿಳಿಯಿತು. ನಾನು ನೋಡುತ್ತಿದ್ದೆ, ಈ ಮಧ್ಯರಾತ್ರಿ ನನ್ನ ಕಾರು ಎಲ್ಲಿ ಹೋಗುತ್ತಿದೆ ಎಂದು ನನಗೆ ಕುತೂಹಲವಾಯಿತು. ಹೀಗೆ ಹೋಗಿ ಹೋಟೆಲ್ ಒಂದರ ಎದುರು ನಿಂತಿತು. ಮುಂಜಾನೆ 5ಗಂಟೆವರೆಗೆ ಕಾರು ಅಲ್ಲೇ ಇತ್ತು ಮತ್ತು 5ಗಂಟೆ ಹೊತ್ತಿಗೆ ವಾಪಸ್ ಹೊರಟು ಮನೆ ತಲುಪಿತು. ನನಗೆ ಅನುಮಾನ ಬಂದು, ಆ ಹೋಟೆಲ್ಗೆ ಹೋಗಿ ವಿಚಾರಿಸಿದೆ. ಆಗಲೇ ನನ್ನ ಪತ್ನಿ ಇನ್ನೊಬ್ಬನೊಂದಿಗೆ ಆ ರೂಮ್ನಲ್ಲಿ ರಾತ್ರಿಯೆಲ್ಲ ತಂಗಿದ್ದಳು ಎಂಬ ವಿಷಯ ಗೊತ್ತಾಯಿತು. ಅವರಿಬ್ಬರೂ ತಮ್ಮ ವೋಟರ್ ಐಡಿ ಬಳಸಿ, ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು’ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Girl murdered : ತಾಯಿಯ ಅಕ್ರಮ ಸಂಬಂಧಕ್ಕೆ ಅಸಹನೆ ತೋರಿದ್ದಕ್ಕೆ ಹೆಣವಾದಳು ಬಾಲಕಿ, ಉಸಿರುಗಟ್ಟಿಸಿ ಕೊಂದ ಕಿರಾತಕ
ನನಗೆ ಈ ವಿಷಯ ಗೊತ್ತಾಗಿದೆ ಎಂದು ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಗೊತ್ತಾಗುತ್ತಿದ್ದಂತೆ ಅವರು ನನಗೆ ಬೆದರಿಕೆ ಹಾಕಿದರು ಎಂದೂ ವ್ಯಕ್ತಿ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದರ ಅನ್ವಯ ಪೊಲೀಸರು ಮಹಿಳೆ ಮತ್ತು ಆಕೆಯ ಸ್ನೇಹಿತನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಸದ್ಯ ಆ ಮಹಿಳೆಗೆ ನೋಟಿಸ್ ಕೊಡಲಾಗಿದ್ದು, ವಿಚಾರಣೆಗೆ ಕರೆಯಲಾಗಿದೆ.