ಬೀದರ್: ಜೈಪುರ- ಮುಂಬೈ ರೈಲು ಶೂಟೌಟ್ ಪ್ರಕರಣದಲ್ಲಿ ಹತ್ಯೆಯಾದ ನಾಲ್ವರ ಪೈಕಿ ಒಬ್ಬರು, ಬೀದರ್ ತಾಲೂಕಿನ ಅಮ್ಲಾಪೂರ್ ಗ್ರಾಮದ ನಿವಾಸಿ ಎಂಬುವುದು ತಿಳಿದುಬಂದಿದೆ. ಸೈಯದ್ ಸೈಫುದ್ದೀನ್ ಮೃತ ವ್ಯಕ್ತಿ. ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೆ ಸ್ಟೇಷನ್ ಬಳಿ ಸೋಮವಾರ ಮುಂಜಾನೆ ಚಲಿಸುತ್ತಿದ್ದ ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ ಪೇದೆ (RPF Firing) ಗುಂಡಿಟ್ಟು ನಾಲ್ವರನ್ನು ಹತ್ಯೆ ಮಾಡಿದ್ದ.
ಸೈಯದ್ ಸೈಫುದ್ದೀನ್ ಜೈಪುರದ ಅಜ್ಮೀರ ದರ್ಗಾಗೆ ಹೋಗಿ ಮುಂಬೈಗೆ ಬರುವಾಗ ಘಟನೆ ನಡೆದಿತ್ತು. ಜೈಪುರದಿಂದ ಮುಂಬೈ ಆಗಮಿಸುತ್ತಿದ್ದ ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಪೇದೆ ಚೇತನ್ ಸಿಂಗ್ ಎಂಬಾತ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಆರ್‌ಪಿಎಫ್ ಎಎಸ್‌ಐ ಹಾಗೂ ಮೂವರು ಪ್ರಯಾಣಿಕರು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಬೀದರ್ ಮೂಲದ ಸೈಯದ್ ಸೈಫುದ್ದೀನ್ ಒಬ್ಬರಾಗಿದ್ದಾರೆ. ಗುಂಡಿನ ದಾಳಿ ನಡೆಸಿದ ಆರ್‌ಪಿಎಫ್ ಪೇದೆಯನ್ನು ಮುಂಬೈ ರೈಲ್ವೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಇದನ್ನೂ ಓದಿ | Road Accident : ಬೈಕ್‌ಗೆ ಬಸ್ ಡಿಕ್ಕಿ; ದೇವರ ದರ್ಶನ ಮಾಡಿ ಬಂದ ಇಬ್ಬರು ಸವಾರರು ರಸ್ತೆಯಲ್ಲೇ ಬಿದ್ದು ಮೃತ್ಯು
ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಾಪಿ ರೈಲು ನಿಲ್ದಾಣ ಹಾಗೂ ಬೋರಿವಲಿ ರೈಲು ನಿಲ್ದಾಣದ ಮಧ್ಯೆ ರೈಲು ಸಂಚರಿಸುತ್ತಿದ್ದಾಗ ಆರ್‌ಪಿಎಫ್ ಪೇದೆಯು, ಎಎಸ್‌ಐ ಮೇಲೆ ಗುಂಡಿನ ದಾಳಿ ನಡೆಸಿದ್ದ. ಇದಾದ ಬಳಿಕ ಮೂವರು ಪ್ರಯಾಣಿಕರ ಮೇಲೂ ಆತ ಗುಂಡಿನ ದಾಳಿ ನಡೆಸಿದ್ದ. ಮೃತ ಎಎಸ್‌ಐ ಅವರನ್ನು ಟೀಕಾ ಶರ್ಮಾ ಎಂಬುದಾಗಿ ಗುರುತಿಸಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.