Site icon Vistara News

Domestic violence : ಮಕ್ಕಳ ಟಾರ್ಚರ್‌ ಸಹಿಸಲಾರದೆ ದೇವರನ್ನು ಹುಡುಕಿ ಬಂದ ವೃದ್ಧ ಅಪ್ಪ

Bhaktavatsala at subrahmanya

#image_title

ಪ್ರಕಾಶ್​ ಕಡಬ ವಿಸ್ತಾರ ನ್ಯೂಸ್‌ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ)

ವಯಸ್ಸಿನ ಕಾರಣ ಆ ದೇಹದಲ್ಲಿ ನಡೆಯುವ ಶಕ್ತಿ ಉಡುಗಿ ಹೋಗಿದೆಯಾದರೂ ಮನಸಿಗಾದ ನೋವು (Domestic violence) ಅವರನ್ನು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯದ (Bangalore to subrahmanya) ವರೆಗೂ ಕರೆತಂದಿದೆ. ನೋಡಲು ಅನುಕೂಲಸ್ಥರಂತೆ ಕಾಣುತ್ತಿರುವ ಇವರು ಕಳೆದ ಎಂಟು ದಿನದಿಂದ ಕುಕ್ಕೆ ಸುಬ್ರಹ್ಮಣ್ಯ (Kukke subrahmanya) ದೇವರ ಸನ್ನಿಧಿಯಲ್ಲಿ ಅದೇನೋ ಪ್ರಾರ್ಥನೆ ಮಾಡಿ ಅಲ್ಲೇ ಪ್ರಸಾದ ಸೇವಿಸಿ ಎಲ್ಲೋ ಮೂಲೆಯಲ್ಲಿ ಮಲಗುತ್ತಿದ್ದರು. ಸಾಮಾನ್ಯವಾಗಿ ಬರೋ ಭಕ್ತರು ಒಂದೆರಡು ದಿನ ಇರುತ್ತಾರಾದರೂ ಇವರ್ಯಾಕೆ ಇಷ್ಟೊಂದು ದಿನದಿಂದ ಇಲ್ಲೇ ಇದ್ದಾರೆ ಎಂದು ಸ್ಥಳೀಯರು ಗಮನಿಸಿ ಪೊಲೀಸರ ಗಮನಕ್ಕೆ ತಂದರು. ಆವಾಗಲೇ ಈ ವೃದ್ಧ ಜೀವ ಸುಬ್ರಹ್ಮಣ್ಯಕ್ಕೆ ಬಂದ ಕಥೆ ಬಿಚ್ಚಿಕೊಂಡಿದ್ದು.

1965ರಿಂದ 1969ರ ವರೆಗೆ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರ ಹೆಸರು ಭಕ್ತವತ್ಸಲ. 81 ವರ್ಷ ವಯಸ್ಸಿನ ಇವರು ಮೂಲತಃ ಬೆಂಗಳೂರಿನವರು. ಕಳೆದ ಎಂಟು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆವರಣವನ್ನೇ ಮನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಎಲ್ಲರೂ ಇದ್ದೂ ಎಲ್ಲವನ್ನೂ ಕಳೆದುಕೊಂಡಿದ್ದು ಅನ್ನೋದು ಭಕ್ತವತ್ಸಲ ಅವರ ನೋವಿನ ಮಾತುಗಳು.

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಸ್ವಂತ ಮನೆ ಇದೆ. ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆ ಸಂತಸದ ಜೀವನ ಕಳೆದಿದ್ದರು ಅವರು. ಆದರೆ ಕಳೆದ ವರ್ಷ ಇವರ ಪತ್ನಿ ಇಹಲೋಕ ತ್ಯಜಿಸಿದ ಬಳಿಕ ಮಕ್ಕಳು ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಹಾಗೆ ಆಸ್ತಿ ಬರೆಸಿಕೊಂಡ ಮೇಲೆ ಮದುವೆಯಾಗಿರುವ ಮಕ್ಕಳು ತಂದೆಯನ್ನೇ ಹೊರ ಹಾಕಿದ್ದಾರೆ. ಅದರಲ್ಲೂ ಎರಡನೇ ಮಗನ ಹೆಂಡತಿ ಟಾರ್ಚರ್ ತಡೆಯೋದಿಕ್ಕೆ ಆಗದೆ ಮನೆ ಬಿಟ್ಟು ಬಂದಿದ್ದೇನೆ ಅಂತಿದ್ದಾರೆ ಭಕ್ತವತ್ಸಲ. ಒಬ್ಬ ಮಗ ಪೌರೋಹಿತ್ಯ ಮಾಡಿಕೊಂಡಿದ್ದಾನೆ ಹಾಗೂ ಎರಡನೇ ಮಗ ಡ್ರೈವರ್ ಕೆಲಸ ಮಾಡ್ತಾ ಇದ್ದಾನಂತೆ. ಆದ್ರೆ ತಂದೆಯ ಆಸ್ತಿಯ ಪಾಲು ಪಡೆದ ಮೇಲೆ ಇಬ್ಬರಿಗೂ ತಂದೆ ಬೇಡವಾಗಿದ್ದಾರೆ.

ಮನೆಗೆ ಹೋಗೋದಿಲ್ಲ ಸತ್ರೆ ಇಲ್ಲೇ ಸಾಯ್ತೆನೆ…

ಎಂಟು ದಿನಗಳಿಂದ ಸುಬ್ರಹ್ಮಣ್ಯ ದೇವಸ್ಥಾನದ ಅಕ್ಕಪಕ್ಕದಲ್ಲೇ ಇದ್ದ ಭಕ್ತವತ್ಸಲ ಅವರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಬಂದ ಠಾಣಾಧಿಕಾರಿ ಮಂಜುನಾಥ್ ಹಾಗೂ ಸ್ಥಳೀಯ ಸಾಮಾಜಿಕ ಟ್ರಸ್ಟ್​ನ ರವಿ ಕಕ್ಕೆ ಪದವು ಭಕ್ತವತ್ಸಲ ಅವರಿಗೆ ರಕ್ಷಣೆ ಒದಗಿಸಿದ್ದಾರೆ. ಅವರನ್ನು ಟ್ರಸ್ಟ್​ ಕಚೇರಿಗೆ ಕರೆದೊಯ್ದು ಸಾಂತ್ವನ ಹೇಳಿ ಬಳಿಕ ವಿಚಾರಿಸಿದಾಗ ಎಲ್ಲಾ ಕಥೆಯನ್ನು ಭಕ್ತವತ್ಸಲ ಹೇಳಿಕೊಂಡಿದ್ದಾರೆ.

ಮನೆಯಲ್ಲಿ ಮಕ್ಕಳು ಎಲ್ಲದಕ್ಕೂ ವಿರೋಧ ಮಾಡ್ತಾರೆ.. ಅವರು ಹೇಳಿದಂತೆ ಕೇಳದೇ ಇದ್ದರೆ ನನಗೆ ತೊಂದರೆ ಮಾಡ್ತಾರೆ ಅಂತ ದೂರಿದ್ದಾರೆ. ಇನ್ನು ಮಕ್ಕಳಿಗೆ ಫೋನ್​ ಮಾಡಿ ವಿಚಾರಿಸಿದ್ರೆ ಅವರಿಗೆ ತಂದೆ ಎಲ್ಲಿ ಹೋಗಿದ್ದಾರೆ ಅನ್ನೋದೇ ಗೊತ್ತಿಲ್ಲ. ತಂದೆ ಕಾಣೆಯಾಗಿದ್ದಾರೆ ಅನ್ನೋ ಬಗ್ಗೆ ಒಂದು ದೂರು ಕೂಡಾ ದಾಖಲಿಸಿಲ್ಲ!

ಮಕ್ಕಳ ಬಳಿ ಕಳುಹಿಸಿ ಕೊಡ್ತೇವೆ ಅಂತ ಹೇಳಿದರೆ ಭಕ್ತವತ್ಸಲ ಅವರು ಒಪ್ಪುವುದಿಲ್ಲ. ಸತ್ತರೆ ಇಲ್ಲೇ ಸಾಯೋದು ಮನೆಗಂತೂ ವಾಪಾಸ್ ಹೋಗೋದಿಲ್ಲ ಅಂತ ಹಟ ಹಿಡಿದು ಕುಳಿತಿದ್ದಾರೆ.

ಭಕ್ತವತ್ಸಲ ಅವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯುತ್ತಿರುವುದು

ಸಮಾಜ ಸೇವಕ ರವಿ ಆಶ್ರಯದಲ್ಲಿ ಭಕ್ತವತ್ಸಲ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಮಾಜ ಸೇವಾ ಟ್ರಸ್ಟ್​ ನಡೆಸುತ್ತಿರುವ ರವಿ ಕಕ್ಕೆ ಪದವರು ಎಂಬವರ ಬಳಿ ಭಕ್ತವತ್ಸಲ ಈಗ ಸುರಕ್ಷಿತವಾಗಿದ್ದಾರೆ. ಹಾಗಂತ ಅವರನ್ನು ಹೆಚ್ಚು ದಿನ ಇಟ್ಟುಕೊಳ್ಳೋದು ಕೂಡಾ ಇವರಿಗೆ ಕಷ್ಟದ ಕೆಲಸ. ಹೀಗಾಗಿ ಭಕ್ತವತ್ಸಲ ಅವರಿಗೆ ತಿಳಿಸದೇ ಅವರ ಇಬ್ಬರೂ ಮಕ್ಕಳನ್ನು ಸುಬ್ರಹ್ಮಣ್ಯಕ್ಕೆ ಕರೆಯಿಸಿದ್ದಾರೆ. ಮಕ್ಕಳಿಗೆ ಒಂದಷ್ಟು ಬುದ್ಧಿ ಹೇಳಿ ಭಕ್ತ ವತ್ಸಲ ಅವರನ್ನು ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ.

ಈಗಾಗಲೆ ಮಕ್ಕಳಿಗೆ ಕರೆ ಮಾಡಿದ್ದು ಮಕ್ಕಳೂ ತಂದೆಯನ್ನು ಕರೆದುಕೊಂಡು ಹೋಗಲು ಸುಬ್ರಹ್ಮಣ್ಯಕ್ಕೆ ಬರ್ತಾ ಇದ್ದಾರೆ. ವಯಸ್ಸಾಗಿರೋ ಭಕ್ತವತ್ಸಲ ಅವರಿಗೆ ನಿಜವಾಗಿಯೂ ಮಕ್ಕಳು ಕಷ್ಟ ನೀಡಿದ್ದಾರಾ ಅಥವಾ ವಯಸ್ಸಿನ ಕಾರಣದಿಂದ ಮಕ್ಕಳು ಹೇಳುವ ಕೆಲವೊಂದು ವಿಚಾರಗಳು ಅವರಿಗೆ ಕಷ್ಟವಾಗಿ ಕಂಡಿದೆಯಾ? ಇದೆಲ್ಲದಕ್ಕೂ ಮಕ್ಕಳು ಬಂದ ಬಳಿಕ ಉತ್ತರ ಸಿಗಬೇಕಷ್ಟೆ.

ಆದರೆ ಎಂಟು ದಿನದಿಂದ ತಂದೆ ಕಾಣಿಸುತ್ತಿಲ್ಲ ಅಂದಾಗಲೂ ಪೊಲೀಸರಿಗೆ ದೂರು ನೀಡದ ಮಕ್ಕಳ ನಡೆ ಅನುಮಾನ ಹುಟ್ಟಿಸಿದೆ. ಏನೇ ಆಗಲಿ ಈ ವಯಸ್ಸಿನಲ್ಲಿ ದೇವರೇ ದಿಕ್ಕು ಎಂದು ಬಂದ ಭಕ್ತವತ್ಸಲ ಅವರಿಗೆ ದೇವರೇ ದಾರಿ ಕಾಣಿಸಿರಬೇಕು. ಸಾವಿರಾರು ಜನ ಬರೋ ಜಾಗದಲ್ಲಿ ಯಾರೂ ಯಾರನ್ನೂ ಗಮನಿಸೋದಿಲ್ಲ ಅಂತಹದ್ರಲ್ಲಿ ಯಾr ಇವರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಸದ್ಯ ಮತ್ತೆ ಮನೆ ಸೇರುವಂತಾಗಿದೆ.

ಇದನ್ನೂ ಓದಿ: Electricity bill: ಒಂದು ಹೊತ್ತಿನ ಊಟಕ್ಕೂ ಪರದಾಡುವ ಅಜ್ಜಿ ಮನೆಗೆ ಬಂತು ಒಂದು ಲಕ್ಷ ಕರೆಂಟ್‌ ಬಿಲ್!

Exit mobile version