Site icon Vistara News

Murder case | ಗುಟ್ಕಾ ಗಲಾಟೆ ಕೊಲೆಯಲ್ಲಿ ಅಂತ್ಯ: ಕುಡಿದ ಮತ್ತಿನಲ್ಲಿ ತಲೆಗೆ ಕಲ್ಲು ಎತ್ತಿ ಹಾಕಿ ಮರ್ಡರ್‌!

gutka murder hubballi

ಬೆಳಗಾವಿ: ಅವರಿಬ್ಬರು ಪರಿಚಿತರೆ. ಸ್ವಲ್ಪ ಮಟ್ಟಿಗೆ ಗೆಳೆಯರೂ ಹೌದು. ಜನವರಿ ಒಂದರಂದು ರಾತ್ರಿ ಒಟ್ಟಿಗೇ ಕುಡಿದಿದ್ದರೂ ಕೂಡಾ. ಆದರೆ ಆಮೇಲೆ ಆಗಿದ್ದೇ ಬೇರೆ. ಒಬ್ಬ ಇನ್ನೊಬ್ಬನನ್ನು ಕಲ್ಲು ಎತ್ತಿ ಹಾಕಿ ಕೊಲೆ (Murder case) ಮಾಡಿದ್ದಾನೆ. ಕಾರಣ ಬರೀ ಕ್ಷುಲ್ಲಕ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಮಂಜುನಾಥ ಸುಣಗಾರ (೪೫) ಎಂಬವರನ್ನು ಅಜಯ್‌ ಹಿರೇಮಠ ಎಂಬಾತ ಕೊಂದು ಪರಾರಿಯಾಗಿದ್ದಾನೆ.

ಇವರಿಬ್ಬರೂ ತಡರಾತ್ರಿ ಮದ್ಯಪಾನ ಮಾಡಿ ಪಾನ್ ಶಾಪ್ ಬಳಿ ನಿಂತಿದ್ದರು. ಆಗ ಗುಟಕಾ ತಿಂದು ಉಗಿದ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಯಾರು ಉಗಿದರು, ಯಾರು ಪ್ರಶ್ನಿಸಿದರು ಎನ್ನುವುದು ಸ್ಪಷ್ಟವಿಲ್ಲ. ಪರಸ್ಪರ ಜಗಳ ಶುರುವಾಗಿದೆ. ಕುಡಿದ ಮತ್ತು ಎಷ್ಟರವರೆಗೆ ಏರಿತ್ತೆಂದರೆ ಸಿಟ್ಟಿಗೆದ್ದ ಅಜಯ್‌ ಹಿರೇಮಠ ಮಂಜುನಾಥ ಅವರನ್ನು ಅಟ್ಟಾಡಿಸಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.

ಅಷ್ಟು ಹೊತ್ತಿಗೆ ಮತ್ತು ಸ್ವಲ್ಪ ಇಳಿದಿದೆ. ಮಂಜುನಾಥ ವಿಲವಿಲನೆ ಒದ್ದಾಡುತ್ತಿರುವಾಗಲೇ ಅಜಯ್‌ ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿ ಅಜಯ್ ಹಿರೇಮಠಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Youth drowned | ಹೊಸ ವರ್ಷದ ಮೊದಲ ದಿನ ತುಂಗಭದ್ರೆಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು

Exit mobile version