Site icon Vistara News

ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಹೆಂಡತಿಯನ್ನು ಬೆನ್ನಟ್ಟಿ ಹೋಗಿ ಕೊಚ್ಚಿ ಕೊಂದ ಪತಿ

Hasana murder

ಹಾಸನ: ಆ ದಂಪತಿಗಳು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಾ ಇದ್ದರು.‌ ಅವರ ಮಗನಿಗೂ ಮದುವೆಯಾಗಿ, ಮಗ-ಸೊಸೆ ಜೊತೆ ಒಟ್ಟಿಗೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಅವನು ಮಾತ್ರ ಸಣ್ಣಪುಟ್ಟ ವಿಷಯಕ್ಕೆಲ್ಲಾ ನಿತ್ಯವೂ ಗಂಡ ಕುಡಿದುಬಂದು ಗಲಾಟೆ ಮಾಡ್ತಾ ಇದ್ದ. ಹೀಗಾಗಿಯೇ ಒಂದೂವರೆ ತಿಂಗಳಿನಿಂದ ಇಬ್ಬರೂ ಮಾತಾಡುತ್ತಾ ಇರಲಿಲ್ಲ. ಇದರಿಮದದ ರೊಚ್ಚಿಗೆದ್ದ ಗಂಡ, ಹೆಂಡತಿ ಕೆಲಸಕ್ಕೆಂದು ಹೋಗುವಾಗ ಅಟ್ಟಿಸಿಕೊಂಡು ಬಂದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಚ್ಚಿನಿಂದ ಮನಸೋ‌ ಇಚ್ಛೆ ಕಡಿದು ಎಸ್ಕೇಪ್ ಆಗಿದ್ದಾನೆ.

ಕೊಲೆಗಾರ ಚಂದ್ರಯ್ಯ ಮತ್ತು ಕೊಲೆಯಾದ ಇಂದ್ರಮ್ಮ

ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದ ಸಮೀಪ. 48 ವರ್ಷದ ಇಂದ್ರಮ್ಮ ಎಂಬಾಕೆಯ ಭೀಕರ ಕೊಲೆಯಾಗಿದೆ. ತನ್ನ ಪತಿ ಚಂದ್ರಯ್ಯನೇ ಕೊಲೆಗಾರ. ಇಂದ್ರಮ್ಮ ಮಂಗಳವಾರ ಬೆಳಗ್ಗೆ ಕೇಶವಮೂರ್ತಿ ಎಂಬುವವರ ಕಾಫಿ ತೋಟದ ಕೆಲಸಕ್ಕೆಂದು ಹೋಗುತ್ತಿದ್ದಾಗ, ಬೆನ್ನಟ್ಟಿ ಬಂದ ದುರುಳ ಪತಿ ಏಕಾಏಕಿ ದಾಳಿ ನಡೆಸಿದ್ದಾನೆ. ಮಚ್ಚಿನಿಂದ ದಾಳಿಮಾಡಿ, ಮನಸೋ ಇಚ್ಛೆ ದಾಳಿ ಮಾಡಿ ಕೊಂದುಹಾಕಿದ್ದಾನೆ. ಇಂದ್ರಮ್ಮನನ್ನು ಕಾಪಾಡಲು ಬಂದ ಮಹಿಳೆಯೊಬ್ಬರ ಮೇಲೂ ಹಲ್ಲೆಗೆ ಮುಂದಾಗಿದ್ದನಂತೆ ಚಂದ್ರಯ್ಯ. ಆದರೆ, ಅವರು ನಮ್ಮನ್ನೂ ಕೊಂದು ಬಿಡ್ತಾನೆ ಎಂದು ಮೂವರು ಮಹಿಳೆಯರು ಅಲ್ಲಿಂದ ಓಡಿಹೋಗಿದ್ದಾರೆ. ಪತ್ನಿಯನ್ನು ಕೊಂದ ಬಳಿಕ ಚಂದ್ರಯ್ಯ ಎಸ್ಕೇಪ್ ಆಗಿದ್ದು, ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರೋ ಆರೋಪಿ ಚಂದ್ರಯ್ಯಗಾಗಿ ಪೊಲೀಸರು ಬಲೆ ಬೀಸಿದ್ದಾರೆ.‌

ʻʻಇಬ್ಬರೂ ನನ್ನ ತೋಟಕ್ಕೆ ಕೆಲಸಕ್ಕೆಂದು ಬರ್ತಾ ಇದ್ರು, ಗಂಡ ಬೆನ್ನು ನೋವು ಅಂತಾ ಮೂರು ವರ್ಷದಿಂದ ಕೆಲಸಕ್ಕೆ ಬರ್ತಾ ಇರಲಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಮನೆಯಲ್ಲಿ ಗಲಾಟೆ ಆಗುತ್ತಿತ್ತಂತೆ. ಹಿಂದೆಯೂ ಮಚ್ಚಿನಿಂದ ಹಲ್ಲೆ ಮಾಡೋದಕ್ಕೆ ಹೋಗಿದ್ದನಂತೆ. ಆದರೆ ಈಕೆ ಯಾರ ಬಳಿಯೂ ಹೇಳಿಕೊಂಡಿಲ್ಲ. ಆದ್ರೆ ಇವತ್ತು ಬೆಳಗ್ಗೆ ಕೆಲಸಕ್ಕೆಂದು ಬರೋ ವೇಳೆ ಹೊಂಚುಹಾಕಿ ಕೊಂದು ಎಸ್ಕೇಪ್ ಆಗಿದ್ದಾನೆʼʼ ಎಂದು ತೋಟದ ಮಾಲೀಕರಾದ ಕೇಶವಮೂರ್ತಿ ಹೇಳಿದ್ದಾರೆ.

ಕೊಲೆ ನಡೆದ ಜಾಗದಲ್ಲಿ ಪೊಲೀಸರಿಂದ ಮಹಜರು

ಚಂದ್ರಯ್ಯ ಹಾಗೂ ಇಂದ್ರಮ್ಮ ಗೆ ನಾಲ್ವರು ಮಕ್ಕಳಿದ್ದು, ಮೂರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ. ಮೂವರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಮಗನಿಗೂ ಮದುವೆ ಮಾಡಿ ಮಗ ಹಾಗೂ ಸೊಸೆ ಜೊತೆ ಸಂತೋಷದಿಂದಲೇ ಸಂಸಾರ ಮಾಡುತ್ತಿದ್ದರು. ಮಗ ಚೀಕನಹಳ್ಳಿ ಗ್ರಾಮಪಂಚಾಯಿತಿ ಸದಸ್ಯನೂ ಕೂಡಾ ಹೌದು.. ಆದರೆ ಗಂಡ ಹೆಂಡತಿಯ ನಡುವೆ ಸಣ್ಣ ಪುಟ್ಟ ಕಾರಣಗಳಿಗೆ ನಿತ್ಯವೂ ಜಗಳವಾಡುತ್ತಿದ್ದರಂತೆ. ಚಂದ್ರಯ್ಯ ಕುಡಿದು ಬಂದು ನಿತ್ಯವೂ ಗಲಾಟೆ ಮಾಡಿ, ಪತ್ನಿಗೆ ಹೊಡೆಯುತ್ತಿದ್ದನಂತೆ.‌

ʻʻಕಳೆದ ಒಂದೂವರೆ ತಿಂಗಳ ಹಿಂದೆ ಗಲಾಟೆ ಮಾಡಿ, ಮಚ್ಚಿನಿಂದ ಹಲ್ಲೆ ಮಾಡೋದಕ್ಕೆ ಮುಂದಾಗಿದ್ದರು, ಅವತ್ತಿನಿಂದ ಇಬ್ಬರೂ ಮಾತಾಡ್ತಾ ಇರಲಿಲ್ಲ. ನಮ್ಮ ಜೊತೆ ಇಬ್ಬರೂ ಚೆನ್ನಾಗಿದ್ದರು. ಆದರೆ ಇವತ್ತು ಹೀಗೆ ಮಾಡಿದ್ದಾರೆ. ಮೂರು ವರ್ಷದಿಂದ ಬೆನ್ನುನೋವು ಅಂತಾ ಕೆಲಸಕ್ಕೆ ಹೋಗ್ತಾ ಇರಲಿಲ್ಲ, ಲಕ್ಷಾಂತರ ಖರ್ಚು ಮಾಡಿ ನಾವೇ ಚಿಕಿತ್ಸೆ ಕೊಡುತ್ತಿದ್ದೋ.. ನಿತ್ಯವೂ ಊಟವನ್ನೂ ನಾವೇ ಹಾಕ್ತಿದ್ದೋ ಆದ್ರೆ ತಿಂದ ಮನೆಗೆ ದ್ರೋಹ ಮಾಡಿಬಿಟ್ಟ ನಮ್ಮ ಅಪ್ಪʼʼ ಎಂದು ಗ್ರಾಪ ಪಂಚಾಯಿತಿ ಸದಸ್ಯರೂ ಆಗಿರುವ ಮಗ ಪ್ರದೀಪ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇದನ್ನೂ ಓದಿ | Murder | ಯುವಕನ ಕೊಲೆಯಲ್ಲಿ ಅಂತ್ಯವಾದ ಅನೈತಿಕ ಸಂಬಂಧ; ಬಡಿಗೆಯಿಂದ ಬಡಿದು ಕೊಂದ!

Exit mobile version