Site icon Vistara News

`ಬಾಹುಬಲಿ’ ರೀತಿ ಮಗುವನ್ನು ಎತ್ತಿ ಹಿಡಿದು ರಸ್ತೆ ಮಧ್ಯೆ ರಾದ್ಧಾಂತ ಮಾಡಿದ ವ್ಯಕ್ತಿ

ತೀರ್ಥಹಳ್ಳಿ: ಸುರಿಯುವ ಮಳೆಯ ನಡುವೆಯೂ ವ್ಯಕ್ತಿಯೋರ್ವ ತನ್ನ ಪುಟ್ಟ ಮಗುವನ್ನು ರಸ್ತೆ ಮಧ್ಯೆ ಇಟ್ಟು ತೀರ್ಥಹಳ್ಳಿ (Thirthahalli) ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಮಗುವನ್ನು ಎತ್ತಿ ಹಿಡಿದ ರೀತಿಯಲ್ಲಿ ತನ್ನ ಮಗುವನ್ನು ಮಳೆಯಲ್ಲಿ ನೆನೆಯುವಂತೆ ಎತ್ತಿಹಿಡಿದು, ಪೊಲೀಸರ ಎದುರು ಹುಚ್ಚಾಟ ನಡೆಸಿದ ವ್ಯಕ್ತಿಯನ್ನು ತೀರ್ಥಹಳ್ಳಿಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಸ್ತೆ ಮಧ್ಯದಲ್ಲಿ ವ್ಯಕ್ತಿಯ ರಂಪಾಟ!

ಮಾರ್ಕ್ ಮಿನೇಜಸ್ ಎಂಬ ವ್ಯಕ್ತಿ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ತೀರ್ಥಹಳ್ಳಿಯ ಗಾಂಧಿ ಚೌಕ್‌ನಲ್ಲಿದ್ದರು. ಕಾರಿನ ಮೇಲೆಲ್ಲ ಕ್ರೈಸ್ತ ಸಂದೇಶಗಳನ್ನು ಬರೆದುಕೊಂಡಿದ್ದು, ಕಾರಿನ ಮೇಲೆ ಡಬ್ಬಿಯೊಂದನ್ನಿಟ್ಟಿದ್ದು ವಿಚಿತ್ರಾಗಿ ಕಾಣಿಸುತ್ತಿತ್ತು. ಈ ರೀತಿ ಮಾಡುವುದು ಕಾನೂನು ಉಲ್ಲಂಘನೆ ಹಾಗೂ ಇದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗಬಹುದು ಎಂದು ಪೊಲೀಸರು ಎಚ್ಚರಿಕೆ ನೀಡಿದರು. ಹೀಗಾಗಿ ಕಾರನ್ನು ಸ್ಥಳದಿಂದ ತೆರವುಗೊಳಿಸಲು ಮಾರ್ಕ್‌ಗೆ ತಿಳಿಸಿದರು.

ಪೊಲೀಸರ ಮಾತಿಗೆ ಕೂಡಲೆ ಕೆಂಡಾಮಂಡಲನಾದ ವ್ಯಕ್ತಿ ರಸ್ತೆ ನಡುವೆಯೇ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪುಟ್ಟ ಮಗುವನ್ನು ಸುರಿವ ಮಳೆಯಲ್ಲಿ, ಬಾಹುಬಲಿ ಸಿನಿಮಾದಲ್ಲಿ ಮಗುವನ್ನು ಎತ್ತಿ ಹಿಡಿದ ರೀತಿಯಲ್ಲಿ ಈತ ತನ್ನ ಮಗುವನ್ನು ಎತ್ತಿ ಹಿಡಿದು ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಮಗು ಮಳೆಯಲ್ಲಿ ನೆನೆಯುತ್ತಿರುವುದನ್ನು ನೋಡಲಾಗದೆ ವೃದ್ಧೆಯೊಬ್ಬರು ತಮ್ಮ ಛತ್ರಿಯನ್ನು ಹಿಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಂತರ ಮಳೆಯ ನಡುವೆಯೇ ಪುಟ್ಟ ಮಗುವನ್ನು ನೆಲದಲ್ಲಿ ಮಲಗಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಆತನ ಜತೆಗೆ ಮಹಿಳೆಯೊಬ್ಬರೂ ಇದ್ದರು. ಮಳೆಯಲ್ಲಿ ನೆನಯುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೆ ಮಗುವಿಗೆ ಛತ್ರಿಯನ್ನು ಹಿಡಿದು ರಕ್ಷಿಸಿದ್ದಾರೆ. ರಸ್ತೆ ನಡುವೆ ಈ ರೀತಿ ವರ್ತಿಸಿದ ಮಾರ್ಕ್‌ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Rain News | ಮಳೆ ಆರ್ಭಟ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ 4 ದಿನ ರೆಡ್ ಅಲರ್ಟ್, ಸಂಚಾರಕ್ಕೆ ಕಂಟಕ

Exit mobile version