ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಕಾವೇರಿ ನಿಸರ್ಗ ಧಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪರಿಚಿತ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಜತೆಗಿದ್ದ ಇನ್ನೊಬ್ಬ ವಿದ್ಯಾರ್ಥಿಗೆ ಚೂರಿಯಿಂದ ಇರಿದಿದ್ದಾನೆ. ಇದೊಂದು ತ್ರಿಕೋನ ಪ್ರೇಮದ ಕಥೆ ಇರಬಹುದೇ ಎಂಬ ಸಂಶಯ ಉಂಟಾಗಿದೆ.
ಹಲ್ಲೆಗೆ ಒಳಗಾದ ಇಬ್ಬರು ಕುಶಾಲ ನಗರ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು. ಚೂರಿಯಿಂದ ಇರಿದವನು ಕುಶಾಲ ನಗರದ ಹೋಟೆಲ್ ಒಂದರಲ್ಲಿ ಸಪ್ಲಯರ್ ಆಗಿರುವ ಯುವಕ.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮ ನೋಡಲು ಬಂದಿದ್ದರು. ಮರಳಿ ಹೋಗುವಾಗ ಎದುರು ಬಂದ ಸಪ್ಲಯರ್ ಇಬ್ಬರಿಗೂ ಚೂರಿಯಿಂದ ಇರಿದಿದ್ದಾನೆ. ಕೂಡಲೇ ಅಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದೊಂದು ತ್ರಿಕೋನ ಪ್ರೇಮ ಇರಬಹುದು ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪ್ರೀತಿಸುತ್ತಿದ್ದರು. ಹಾಗಾಗಿಯೇ ಮಾತನಾಡಿಕೊಳ್ಳಲು ನಿಸರ್ಗಧಾಮಕ್ಕೆ ಬಂದಿದ್ದರು ಎನ್ನಲಾಗುತ್ತಿದೆ. ಈ ನಡುವೆ ಸಪ್ಲಯರ್ಗೂ ಈ ಹುಡುಗಿ ಮೇಲೆ ಪ್ರೀತಿ ಇದ್ದು ಆತ ಸಿಟ್ಟಿನಿಂದ ಈ ಕೃತ್ಯ ಮಾಡಿರುವ ಸಾಧ್ಯತೆ ಇದೆ. ಅಥವಾ ಇದು ಆತನ ಏಕಮುಖ ಪ್ರೇಮವಾಗಿರುವ ಸಾಧ್ಯತೆಯೂ ಇದೆ. ಈ ಎಲ್ಲ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಶಾಲನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.