ಮಂಗಳೂರು: ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ (Indescent behaviour) ಯುವಕನನ್ನು ತಂಡವೊಂದು ಕಂಬಕ್ಕೆ ಕಟ್ಟಿ ಹಾಕಿ ಗಂಭೀರವಾಗಿ ಹಲ್ಲೆ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಈ ಘಟನೆ ನಡೆದಿದೆ.
ಡಿಸೆಂಬರ್ 13ರಂದು ಕೆರೆಕಾಡು ಎಂಬಲ್ಲಿ ಬೈಕ್‌ನಲ್ಲಿ ಬಂದ ಯುವಕ ಬಾಲಕಿಯನ್ನು ಹಿಂಬಾಲಿಸುತ್ತಾ ಅಸಭ್ಯವಾಗಿ ವರ್ತಿಸಿದ್ದ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ಹೇಳಿದ್ದಳು. ಇದರಿಂದ ಕುಪಿತರಾದ ಮನೆಯವರು ಮತ್ತು ಬಂಧುಗಳು ಇನ್ನೊಮ್ಮೆ ಈ ರೀತಿ ಮಾಡಿದರೆ ಚೆನ್ನಾಗಿ ಪಾಠ ಕಲಿಸಬೇಕು ಎಂದು ನಿರ್ಧರಿಸಿದರು. ಜತೆಗೆ ಬಾಲಕಿಯನ್ನು ದೂರದಿಂದಲೇ ಗಮನಿಸಲು ಶುರು ಮಾಡಿದರು.
ಈ ನಡುವೆ ಅದೇ ಯುವಕ ಮತ್ತೆ ಕಿರುಕುಳ ನೀಡಲು ಮುಂದಾದ. ಆಗ ಪೋಷಕರು ಮತ್ತು ಅವರ ಜತೆಗಿದ್ದವರು ಯುವಕನನ್ನು ಹಿಡಿದು ಚೆನ್ನಾಗಿ ಥಳಿಸಿದರು. ಸಾಲದು ಎಂಬಂತೆ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಆರೋಪಿ ಕೇಸ್ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ಆರೋಪಿಯ ಹೇಳಿಕೆ ಆಧರಿಸಿ ಹಲ್ಲೆ ನಡೆಸಿದವರ ಮೇಲೂ ದೂರು ದಾಖಲಾಗಿದೆ.
ಇದನ್ನೂ ಓದಿ | Sexual Harrassment | ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಅಮಾನತು