Site icon Vistara News

Rashmika Mandanna: ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವಿಡಿಯೊ ಹರಿಬಿಟ್ಟವನ ಬಂಧನ!

Rashmika Mandanna Deepfake Photo

Man Who Made Actor Rashmika Mandanna's Deepfake Arrested By Delhi Police

ಹೈದರಾಬಾದ್/ನವದೆಹಲಿ: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್‌ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ಪ್ರಕರಣದಲ್ಲಿ (Deepfake Video Case) ದೆಹಲಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಆಂಧ್ರಪ್ರದೇಶದಲ್ಲಿ (Andhra Pradesh) ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದಾದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿತ್ತು. ಪ್ರಮುಖ ಸೆಲೆಬ್ರಿಟಿಗಳು ಕೃತ್ಯವನ್ನು ಖಂಡಿಸಿದ್ದರ ಜತೆಗೆ ಕ್ರಮಕ್ಕೆ ಆಗ್ರಹಿಸಿದ್ದರು. ಇದಾದ ನಂತರ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 465 (ನಕಲು), 469 (ಗೌರವಕ್ಕೆ ಧಕ್ಕೆ), ಮಾಹಿತಿ ತಂತ್ರಜ್ಞಾನ ಕಾಯ್ದೆ (2000)ಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈಗ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಬಳಿಕ ಕತ್ರಿನಾ ಕೈಫ್‌, ಕಾಜೋಲ್‌, ಆಲಿಯಾ ಭಟ್‌, ಸಚಿನ್‌ ತೆಂಡೂಲ್ಕರ್‌ ಸೇರಿ ಹಲವರ ಡೀಪ್‌ಫೇಕ್‌ ವಿಡಿಯೊಗಳು ಸುದ್ದಿಯಾಗಿದ್ದವು.

ಏನಿದು ಪ್ರಕರಣ?

ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ವಿಡಿಯೊ ಕಳೆದ ವರ್ಷದ ನವೆಂಬರ್‌ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ರಶ್ಮಿಕಾ ಅವರ ಮುಖವನ್ನು ಹೊಂದಿರುವ, ಟೈಟ್‌ ಫಿಟ್ ಉಡುಪನ್ನು ಧರಿಸಿರುವ ಮಹಿಳೆ ಲಿಫ್ಟ್‌ ಹತ್ತುತ್ತಿರುವುದು ಕಂಡುಬಂದಿತ್ತು. ಬಳಿಕ ಈ ವಿಡಿಯೊ ಡೀಪ್‌ಫೇಕ್ ಎನ್ನುವುದು ತಿಳಿದುಬಂತು. ಸೂಪರ್ ಸ್ಟಾರ್ ಅಮಿತಾಭ್‌ ಬಚ್ಚನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ ನಂತರ ಇದು ಎಲ್ಲರ ಗಮನ ಸೆಳೆದಿತ್ತು. ಬಳಿಕ ಕಲಾವಿದರಾದ ನಾನಿ, ವಿಜಯ್ ದೇವರಕೊಂಡ, ನಾಗ ಚೈತನ್ಯ ಮತ್ತು ಮೃಣಾಲ್ ಠಾಕೂರ್ ಮತ್ತಿತರರು ಡೀಪ್‌ಫೇಕ್‌ ವಿಡಿಯೊ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಶ್ಮಿಕಾ ಮಂದಣ್ಣ ಕೂಡ ತಮ್ಮ ವೈರಲ್ ಡೀಪ್‌ಫೇಕ್ ವಿಡಿಯೊದಿಂದ ಆಘಾತಗೊಂಡಿದ್ದರು. ಇದನ್ನು ‘ಭಯಾನಕ’ ಎಂದು ಕರೆದಿದ್ದರು.

ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಚಿಂತನೆ

ಡೀಪ್‌ಫೇಕ್‌ ವಿಡಿಯೊಗಳು ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ವಿಡಿಯೊ ಪಸರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಡೀಪ್‌ಫೇಕ್‌ ಈಗ ಸಮಾಜಕ್ಕೆ ಮಾರಕವಾಗುತ್ತಿದೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಕ್ಷಿಪ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದರ ದಿಸೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಡೀಪ್‌ಫೇಕ್‌ ನಿಯಂತ್ರಣದ, ಕ್ರಮ ತೆಗೆದುಕೊಳ್ಳುವುದರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ಡಿಸೆಂಬರ್‌ನಲ್ಲಿ ಇದರ ಕುರಿತು ಮತ್ತಷ್ಟು ಚರ್ಚಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಇದಕ್ಕಾಗಿ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಸಚಿನ್ ಡೀಪ್‌ಫೇಕ್‌ ವಿಡಿಯೊ: ಎಫ್‌ಐಆರ್‌ ದಾಖಲಿಸಿದ ಮುಂಬೈ ಪೊಲೀಸರು

Exit mobile version