ಮೈಸೂರು: ವಂಚನೆಯನ್ನು ವೃತ್ತಿ ಮಾಡಿಕೊಂಡವರಿಗೆ ಹಣಗಳಿಸಲು ನೂರೆಂಟು ಮಾರ್ಗಗಳು ಇರುತ್ತವೆ. ಹಾಗೇ, ಬೆಂಗಳೂರಿನ ಬನಶಂಕರಿ ಬಡಾವಣೆಯ ಮಹೇಶ್ (35) ಎಂಬಾತ ಕೂಡ ಕಾಲಕಾಲಕ್ಕೆ ಡಾಕ್ಟರ್, ಎಂಜಿನಿಯರ್, ಗುತ್ತಿಗೆದಾರ, ಉದ್ಯಮಿಯಾಗಿ ಬದಲಾಗಿ, ಬರೋಬ್ಬರಿ 15 ಮದುವೆಯಾಗಿ (Man Marries15 woman) ಲಕ್ಷಾಂತರ ರೂಪಾಯಿ ಹಣ ಮಾಡಿದ್ದಾನೆ. ವಂಚಕ ಮಹೇಶ್ನನ್ನು ಮೈಸೂರು ಪೊಲೀಸರು (Mysore Police) ಬಂಧಿಸಿ, ಅವನಿಂದ 2 ಲಕ್ಷ ರೂಪಾಯಿ ನಗದು, 2 ಕಾರು, 7ಮೊಬೈಲ್ಗಳು, ಒಂದು ಬ್ರೇಸ್ಲೆಟ್, ಒಂದು ಉಂಗುರ, 2 ಚಿನ್ನದ ಬಳೆ, ಒಂದು ನೆಕ್ಲೇಸ್ ವಶಪಡಿಸಿಕೊಂಡಿದ್ದಾರೆ.
ಮಹೇಶ್ ಬೆಂಗಳೂರಿನವನೇ ಆದರೂ ವಿವಿಧ ಜಿಲ್ಲೆಗಳ ಮಹಿಳೆಯರಿಗೆ ವಂಚಿಸಿ, ಮದುವೆಯಾಗಿದ್ದಾನೆ. ಈತನ ಮೋಸದ ಜಾಲಕ್ಕೆ ಬಿದ್ದ ಮೈಸೂರಿನ ನಿವಾಸಿ ಹೇಮಲತಾ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಕುವೆಂಪುನಗರ ಪೊಲೀಸರು ಮಹೇಶ್ನನ್ನು ಬಂಧಿಸಿದ್ದಾರೆ. ಶಾದಿ ಡಾಟ್ಕಾಂ ಮೂಲಕ ಈತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಅದರಲ್ಲೂ ವಿಧವೆಯವರು, ಡಿವೋರ್ಸ್ ಆದ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅವರನ್ನು ಸಂಪರ್ಕಿಸಿ ಭಯಂಕರ ಒಳ್ಳೆಯವನಂತೆ ನಾಟಕವಾಡುತ್ತಿದ್ದ. ಈತ ಯಾವ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದಾನೋ, ಅವರ ಆಸಕ್ತಿಯ ಆಧಾರದ ಮೇಲೆ ಸುಳ್ಳುಗಳನ್ನು ಹೇಳುತ್ತಿದ್ದ. ಒಬ್ಬರ ಬಳಿ ತಾನು ವೈದ್ಯ ಎಂದು ಹೇಳಿಕೊಂಡರೆ, ಮತ್ತೊಬ್ಬರ ಬಳಿ ತಾನೊಬ್ಬ ಎಂಜಿನಿಯರ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ.
ಅಂತೆಯೇ ಶಾದಿ ಡಾಟ್ ಕಾಂನಲ್ಲಿ ಹೇಮಲತಾ ಅವರ ಸಂಪರ್ಕಕ್ಕೆ ಬಂದಿದ್ದ ಮಹೇಶ್ ತಾನು ಡಾಕ್ಟರ್ ಎಂದು ಹೇಳಿಕೊಂಡಿದ್ದ. ಹೇಮಲತಾ ಸಹಜವಾಗಿಯೇ ಅವನನ್ನು ನಂಬಿದ್ದರು. ಇವರಿಬ್ಬರ ಮಧ್ಯೆ ಪರಿಚಯ ಬೆಳೆದು, ಮದುವೆಯ ತೀರ್ಮಾನವಾಯಿತು. ಹೇಮಲತಾ ಮತ್ತು ಮಹೇಶ್ ಇಬ್ಬರೂ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇದೇ ವರ್ಷ ಜನವರಿ 1ರಂದು ಮದುವೆಯಾಗಿದ್ದರು. ಅದಾದ ಮೇಲೆ ಮಹೇಶ್ ಅಸಲಿ ರೂಪ ಬಯಲಿಗೆ ಬಂತು.
ಇದನ್ನೂ ಓದಿ: Karnataka Budget 2023 : ನವ ವಧು-ವರರಿಗೆ ಗುಡ್‌ನ್ಯೂಸ್; ಇನ್ನು ಆನ್‌ಲೈನ್ ಮದುವೆ ನೋಂದಣಿ ಮಾಡಬಹುದು
ಮೊದಲು ಅವನು ಹೇಮಲತಾ ಬಳಿ 70 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ. ಕ್ಲಿನಿಕ್ ತೆರೆಯಬೇಕು ಹಣ ಕೊಡು ಎಂದು ಹೇಳಿದ. ಆದರೆ ಹೇಮಲತಾ ಅದಕ್ಕೆ ಒಪ್ಪಲಿಲ್ಲ. ಕೇಳಿದರೂ ಹೇಮಲತಾ ಹಣ ಕೊಡದೆ ಇದ್ದಾಗ ಸಿಟ್ಟಾದ ಮಹೇಶ್, ಆಕೆಯ ಹಣ, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ. ಬಳಿಕ ಹೇಮಲತಾ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇವನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅಷ್ಟೂ ಕೇಸ್ಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಮಹೇಶ್ ವಿರುದ್ಧ ಬೆಂಗಳೂರಲ್ಲಿ ದಿವ್ಯಾ ಎಂಬುವರೂ ದೂರು ದಾಖಲಿಸಿದ್ದು ಗೊತ್ತಾಗಿದೆ.