ಬೆಳಗಾವಿ: ಹೆಂಡತಿಯ ಕಾಟಕ್ಕೆ ಮನನೊಂದು ನೆಮ್ಮದಿ ಅರಸಿ ಗೋವಾಕ್ಕೆ ಹೊರಟಿದ್ದ ಪತಿ ಮಹಾಶಯ, 26 ಲಕ್ಷ ರೂ.ಗಳೊಂದಿಗೆ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ನಗರದಲ್ಲಿ (Belagavi News) ಶನಿವಾರ ನಡೆದಿದೆ. ಮುಂಬೈ ಮೂಲದ ಗುತ್ತಿಗೆದಾರ ಎಂದು ಹೇಳಿಕೊಂಡಿರುವ ವ್ಯಕ್ತಿಯು ತನ್ನ ಕಾರಿನಲ್ಲಿ ಬರೋಬ್ಬರಿ 26 ಲಕ್ಷ ರೂ.ಗಳೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ವ್ಯಕ್ತಿ ಗೂಗಲ್ ಮ್ಯಾಪ್ ನೋಡಿ ವಾಹನ ಚಲಾವಣೆ ಮಾಡಿಕೊಂಡು ಗೋವಾಕ್ಕೆ ತೆರಳುತ್ತಿದ್ದರು. ಮ್ಯಾಪ್‌ನಲ್ಲಿದ್ದ ಮಾರ್ಗದಂತೆ ಬೆಳಗಾವಿ ಸಿಟಿ ಪ್ರವೇಶ ಮಾಡಿದ್ದಾರೆ. ಸಿಟಿಗೆ ಪ್ರವೇಶವಾಗುತ್ತಿದ್ದಂತೆ ಬೆಳಗಾವಿಯ ಕರ್ನಾಟಕ ಚೌಕ್ ಬಳಿ ಚಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಹಣ ಸಿಕ್ಕಿದೆ. ಅಷ್ಟೊಂದು ಹಣ ನೋಡಿ ಪೊಲೀಸರೂ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.
ಇದನ್ನೂ ಓದಿ | Karnataka Election 2023: ಶಿವಮೊಗ್ಗ ಒಂದರಲ್ಲೇ 4.5 ಕೋಟಿ ರೂ. ಮೌಲ್ಯದ ಸೀರೆ ಜಪ್ತಿ; ರಾಜ್ಯಾದ್ಯಂತ ವಶಕ್ಕೆ ಸಿಕ್ಕಿದ್ದೆಷ್ಟು?
ಭಾರಿ ಮೊತ್ತದ ಹಣ ಸಿಕ್ಕ ಕೂಡಲೇ ಪೊಲೀಸರು ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ವ್ಯಕ್ತಿಯು ಪೊಲೀಸರ ಮುಂದೆ ನಾನೊಬ್ಬ ಗುತ್ತಿಗೆದಾರ, ನನಗೆ ಹೆಂಡತಿ ಕಾಟ ಸಾಕಾಗಿದೆ. ನೆಮ್ಮದಿಯನ್ನು ಹುಡುಕಿಕೊಂಡು ಗೋವಾಕ್ಕೆ ಹೊರಟಿದ್ದೆ ಎಂದು ಉತ್ತರಿಸಿದ್ದಾನೆ. ಇಷ್ಟೊಂದು ಹಣವನ್ನು ಕಾರಿನಲ್ಲಿ ಯಾಕೆ ಸಾಗಿಸುತ್ತಿದ್ದೀರಾ? ಆನ್ ಲೈನ್ ಕ್ಯಾಷ್ ವಹಿವಾಟು ಮಾಡಬಹುದಿತ್ತಲ್ಲವೇ ಎಂದು ಪೊಲೀಸರು ಮರು ಪ್ರಶ್ನೆ ಮಾಡಿದಾಗ ವ್ಯಕ್ತಿಯು, ಆನ್ ಲೈನ್ ಟ್ರಾನ್ಸ್ಯಾಕ್ಷನ್ ಮಾಡಿದರೆ ಬ್ಯಾಂಕ್ ಟ್ರಾನ್ಸ್ಯಾಕ್ಷನ್ ಮೂಲಕ ನಾನೆಲ್ಲಿದೇನೆ ಎನ್ನುವುದು ನನ್ನ ಹೆಂಡತಿಗೆ ಗೊತ್ತಾಗುತ್ತದೆ. ಹೀಗಾಗಿ ಇಷ್ಟು ಹಣವನ್ನು ನಾನು ತೆಗೆದುಕೊಂಡು ಬಂದೆ ಎಂದು ಉತ್ತರಿಸಿದ್ದಾನೆ.
ಅಲ್ಲದೆ ನಾನು ತೆಗೆದುಕೊಂಡು ಹೋಗುತ್ತಿರುವ ಹಣಕ್ಕೆ ದಾಖಲೆ ಇದೆ ಎಂದು ಪೊಲೀಸರಿಗೆ ವ್ಯಕ್ತಿ ತಿಳಿಸಿದ್ದು, ಪೊಲೀಸರು ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದಾರೆ. ಐಟಿ ಅಧಿಕಾರಿಗಳು ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿನಲ್ಲಿ ಹೆಂಡತಿಯ ಕಾಟಕ್ಕೆ ಹೈರಾಣಾಗಿದ್ದ ಪತಿರಾಯ ಗೂಗಲ್ ಮ್ಯಾಪ್ ನೋಡಿ ಕಾರು ಚಲಾವಣೆ ಮಾಡಿ ಪೊಲೀಸರ ಅತಿಥಿ ಆಗಿದ್ದಷ್ಟೆ ಅಲ್ಲದೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೂ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ | Road Accident: ಸಪ್ತಪದಿ ತುಳಿದ ಹತ್ತೇ ದಿನಕ್ಕೆ ಮಸಣ ಸೇರಿದ ನವ ದಂಪತಿ; ಭೀಕರ ಅಪಘಾತದಲ್ಲಿ ಸಾವು
ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಜಪ್ತಿ
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೋಮಶೇಖರ ಮಾವಳ್ಳಿ ಎಂಬುವವರು ಜಮೀನಿನಲ್ಲಿ ಗಾಂಜಾ ಬೆಳೆದಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. 10 ಕೆಜಿ ಗಾಂಜಾ ಗಿಡಗಳನ್ನು ಕಲಘಟಗಿಯ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದೆ.