ರಾಯಚೂರು: ಸಿರವಾರ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ (Missing Case) ಸಿರವಾರ ನಿವಾಸಿ ತಾಯಣ್ಣ ಕೊನೆಗೂ ಪತ್ತೆಯಾಗಿದ್ದಾನೆ. ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆತ ಆರೋಪಿಸಿದ್ದ. ಕಳೆದ ಡಿಸೆಂಬರ್ ೩ರಂದು ಆತ ನಾಪತ್ತೆಯಾಗಿದ್ದು, ಆತ ಮೃತಪಟ್ಟಿರಬಹುದೇ ಎಂಬ ಸಂಶಯವೂ ಇತ್ತು. ಆದರೂ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ಆತ ಪತ್ತೆಯಾಗಿದ್ದು, ಪಿಎಸ್‌ಐ ಗೀತಾಂಜಲಿ ಅವರೇ ಆತನ ವಿಚಾರಣೆ ನಡೆಸಲಿದ್ದಾರೆ.
ರಾಯಚೂರಿನ ಸಿರವಾರದಿಂದ ನಾಪತ್ತೆಯಾಗಿದ್ದ ಆತ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ.
ಡೆತ್ ನೋಟ್‌ನಲ್ಲಿ ಮಾಡಿರುವ ಆರೋಪವೇನು?
ಗೀತಾಂಜಲಿ ಶಿಂಧೆ ಅವರು ತನಗೆ ಸಿಕ್ಕಾಪಟ್ಟೆ ಹಿಂಸೆ ನೀಡಿದ್ದಾರೆ ಎನ್ನುವುದು ತಾಯಣ್ಣ ಮಾಡಿರುವ ಪ್ರಮುಖ ಆರೋಪ.
– ನಮ್ಮ ಮನೆ ಜಾಗದ ವಿಚಾರವಾಗಿ ಪಿಎಸ್‌ಐ ಮಧ್ಯಪ್ರವೇಶ ಮಾಡಿದ್ದು, ಸುಖಾಸುಮ್ಮನೆ ನನ್ನನ್ನು ಠಾಣೆಗೆ ಕರೆಸಿಕೊಳ್ಳುತ್ತಿದ್ದಾರೆ.
– ನನ್ನನ್ನು ಕಂಡಲ್ಲಿ ನಿಲ್ಲಿಸಿ ಹೊಡೆಯುತ್ತಾರೆ. ನಾನು ರಸ್ತೆಯಲ್ಲಿ ಕಂಡಾಗಲೆಲ್ಲ ಹೀಗೆ ಮಾಡಿದ್ದಾರೆ. ಆದರೆ, ನಾನು ಇದನ್ನು ಯಾರಿಗೂ ಹೇಳಿರಲಿಲ್ಲ. ನನಗೆ ಇದರಿಂದ ಬಹಳ ನೋವಾಗಿದೆ.
– ನಿನ್ನೆ ರಾತ್ರಿ (ಡಿಸೆಂಬರ್ ೨) ಮಲ್ಲಣ್ಣ ಎಂಬ ಪೊಲೀಸರೊಬ್ಬರು ನನ್ನನ್ನು ಕರೆದು ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ಕರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಾನು ನನ್ನ ಮಾವನ ಮನೆಗೆ ಹೋಗುತ್ತಿದ್ದವನು ಠಾಣೆಗೆ ವಾಪಸ್ ಬಂದೆ. ಆದರೆ, ಬಂದ ಕೂಡಲೇ ಕಾರಣ ಹೇಳದೆ ನನ್ನನ್ನು ಲಾಕಪ್‌ನಲ್ಲಿ ವಿನಾಕಾರಣ ಕೂರಿಸಿದ್ದಾರೆ. ಬಳಿಕ ನನ್ನನ್ನು ಬಿಟ್ಟುಕಳುಹಿಸಿದ್ದಾರೆ. ಮತ್ತೆ ನನ್ನನ್ನು ಲಾಕಪ್ ಹಾಕುವ ಬೆದರಿಕೆಯನ್ನು ಒಡ್ಡಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ತಾಯಣ್ಣ ಪತ್ರದಲ್ಲಿ ಬರೆದುಕೊಂಡಿದ್ದರು.
– ನನ್ನ ಪಿತ್ರಾರ್ಜಿತ ಆಸ್ತಿ ಇರುವ ಜಾಗಕ್ಕೂ ನಾನು ಹೋಗುವಂತಿಲ್ಲ ಎಂದು ಪಿಎಸ್‌ಐ ಗೀತಾಂಜಲಿ ತಾಕೀತು ಮಾಡಿದ್ದಾರೆ. ಈ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ನನಗೆ ಗೀತಾಂಜಲಿ ಅವರು ಬಹಳವೇ ನೋವು ಕೊಟ್ಟಿದ್ದಾರೆ.
– ನನಗೆ ರೌಡಿಶೀಟರ್ ಕೇಸ್ ಹಾಕುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಹೀಗೆ ಬಹಳ ಸಲ ಹೇಳಿದ್ದಾರೆ. ಇದು ನನಗೆ ತುಂಬಾ ನೋವು ತಂದಿದೆ. ಇದರಿಂದ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
– ಅಮ್ಮ, ಅಪ್ಪ, ಅಣ್ಣಂದಿರೇ, ಅಕ್ಕಂದಿರೇ ನಿಮಗೆ ನಮಸ್ಕರಿಸುತ್ತಾ ನಾನು ಈ ಭೂಮಿ ಬಿಟ್ಟು ಹೋಗುತ್ತಿದ್ದೇನೆ. ಮುಂದಿನ ವರ್ಷ ನಾನು ಲಾಯರ್ ಆಗುತ್ತಿದ್ದೆ. ಆದರೆ, ನನ್ನ ಆ ಕನಸಿಗೆ ಈ ಪಿಎಸ್‌ಐ ಗೀತಾಂಜಲಿ ಕಪ್ಪು ಚುಕ್ಕೆ ಇಟ್ಟರು. ನನ್ನ ಈ ಆತ್ಮಹತ್ಯೆಯಿಂದ ರಾಜ್ಯದಲ್ಲಿ ಅಮಾಯಕರ ಮೇಲಿನ ದೌರ್ಜನ್ಯ ಕಡಿಮೆ ಆಗಬೇಕು ಎಂದೂ ತಾಯಣ್ಣ ಬರೆದುಕೊಂಡಿದ್ದರು.
ಈಗ ಗೀತಾಂಜಲಿ ಶಿಂಧೆ ಅವರೇ ಈ ಪ್ರಕರಣ ವಿಚಾರಣೆ ನಡೆಸಬೇಕಾಗಿದೆ. ಅವರು ನಿಜಕ್ಕೂ ಈ ರೀತಿ ಹಿಂಸೆ ನೀಡಿದ್ದಾರಾ? ತಾಯಣ್ಣ ನಿಜಕ್ಕೂ ಅಮಾಯಕನಾ ಎನ್ನುವುದರ ಹಿಂದೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ.
ಇದನ್ನೂ ಓದಿ | Missing Case | ಲೇಡಿ ಪಿಎಸ್‌ಐ ಕಿರುಕುಳ ಆರೋಪ; ಡೆತ್‌ನೋಟ್ ಬರೆದಿಟ್ಟವ ನಾಪತ್ತೆ