ಧಾರವಾಡ: ಲಿಂಗಾಯತ ಮಠಾಧೀಶರ ಬಗ್ಗೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಸತ್ಯಕ್ಕ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ರುದ್ರಮ್ಮ ಎಂಬ ಇಬ್ಬರು ಮಹಿಳೆಯರು ಮಾತನಾಡಿಕೊಂಡಿರುವ ಆಡಿಯೊಗೆ ಒಂದ ಜೀವವೇ ಬಲಿಯಾಗಿದೆ ಎಂದು ಧಾರವಾಡ ತಾಲೂಕಿನ ಮನಗುಂಡಿ ಮಠದ ಗುರುಬಸವ ಮಹಾಮನೆ ಸ್ವಾಮೀಜಿ ಹೇಳಿದ್ದಾರೆ.
ನೇಗಿನ ಹಾಳ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ವೈರಲ್ ಆಗಿರುವ ಆಡಿಯೊದಲ್ಲಿ ತಮ್ಮ ಹೆಸರಿದೆ ಎಂಬ ಬೇಸರದಿಂದ ಪ್ರಾಣ ಕಳೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಈ ರೀತಿ ಸುಳ್ಳು ಆಪಾದನೆ ಮಾಡುವವರು ಮತ್ತು ಅದನ್ನು ಸತ್ಯಾಸತ್ಯತೆ ಪರಿಶೀಲಿಸದೆ ಹಂಚುವವರ ಮೇಲೆ ಕ್ರಮ ಕೈಗೊಳ್ಳೂವಂತಾಗಬೇಕು ಎಂದಿದ್ದಾರೆ. ನಿಜವೆಂದರೆ, ಈ ಆಡಿಯೊದಲ್ಲಿ ಸತ್ಯಕ್ಕ ಎಂಬವರು ಏಳು ಸ್ವಾಮೀಜಿಗಳ ಹೆಸರು ಹೇಳಿದ್ದು, ಅದರಲ್ಲಿ ಗುರು ಬಸವ ಸ್ವಾಮೀಜಿ ಕೂಡಾ ಒಬ್ಬರು.
ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಬೆನ್ನಿಗೇ ಈ ಆಡಿಯೊ ವೈರಲ್ ಆಗಿತ್ತು. ಸತ್ಯಕ್ಕ ಮತ್ತು ರುದ್ರಮ್ಮ ಎಂಬವರು ತುಂಬ ಆರಾಮವಾಗಿ ಮಾತನಾಡಿಕೊಂಡಿರುವ ಈ ಸಂಭಾಷಣೆಯಲ್ಲಿ ಹಲವಾರು ಲಿಂಗಾಯತ ಮಠದ ಸ್ವಾಮೀಜಿಗಳು ಇದೇ ರೀತಿಯ ನಡವಳಿಕೆ ಹೊಂದಿದ್ದಾರೆ, ಯಾರೂ ಸಾಚಾಗಳಲ್ಲ ಎಂದು ಸುಮಾರು ಏಳು ಮಂದಿಯ ಹೆಸರು ಉಲ್ಲೇಖಿಸಿದ್ದರು. ತಾನು ಕೆಲವು ಮಠಗಳಲ್ಲಿದ್ದು, ಸ್ಪಷ್ಟವಾದ ಚಿತ್ರಣವಿರುವುದಾಗಿ ಆಕೆ ಹೇಳಿಕೊಂಡಿದ್ದರು.
ನನಗೆ ಸತ್ಯಕ್ಕ ಗೊತ್ತು ಎಂದ ಸ್ವಾಮೀಜಿ
ʻʻವೈರಲ್ ಆದ ಆಡಿಯೊವನ್ನು ನಾನು ಕೂಡಾ ಕೇಳಿಸಿಕೊಂಡಿದ್ದೇನೆ. ಸತ್ಯಕ್ಕಾ ಏಳು ಜನ ಸ್ವಾಮೀಜಿಗಳ ಹೆಸರು ಹೇಳಿದ್ದಾರೆ. ನಾನು ಆಕೆಯನ್ನು ಆರನೇ ತರಗತಿಯಲ್ಲಿ ಇದ್ದಾಗಿನಿಂದ ನೋಡಿದ್ದೇನೆ. ಸತ್ಯಕ್ಕ ಇಲ್ಲೇ ಸಮೀಪ ಮನಗುಂಡಿಯವಳು. ಅವಳ ತಂದೆ ಒಬ್ಬ ಕುಡುಕ. ಈಗ ಆತ ಇದ್ದಾನೋ ಇಲ್ಲವೋ ಗೊತ್ತಿಲ್ಲʼʼ ಎಂದು ಸ್ವಾಮೀಜಿ ಹಳೆ ಕಥೆ ತೆರೆದಿಟ್ಟಿದ್ದಾರೆ.
ʻʻಆಕೆ ಮಠಕ್ಕೆ ಬಂದಾಗ ನಾನೇ ಇದ್ದೆ. ಆಕೆ ಏಳನೇ ತರಗತಿವರೆಗೆ ಶಾಲೆ ಕಲಿತ ನಂತರ ಆಕೆಯನ್ನು ಬೀದರ್‌ಗೆ ಕಳುಹಿಸಿದ್ದು ನಾವೇ. ಆಕೆಗೆ ಹಣದ ಸಹಾಯ ಆಡಿ ಶಾಲೆಗೆ ಕಳುಹಿಸಿದ್ದೇ ನಾವು. ಆಕೆ ಬೀದರ್‌ಗೆ ಹೋದ ಮೇಲೆ ನಾನಾಕೆಯನ್ನು ನೋಡಿರಲಿಲ್ಲ. ಹತ್ತು ವರ್ಷದಿಂದ ಯಾವುದೇ ಸಂಪರ್ಕ ಇಲ್ಲ. ೨೦೧೮ರಲ್ಲಿ ಆಕೆ ಮಠಕ್ಕೆ ಬಂದಿದ್ದಳಂತೆ. ಆಗ ನಾನು ಮಠದಲ್ಲಿ ಇರಲಿಲ್ಲʼʼ ಎಂದಿದ್ದಾರೆ ಸ್ವಾಮೀಜಿ.
ಆಕೆಗೆ ತಮಿಳುನಾಡಿನ ವ್ಯಕ್ತಿಯೊಬ್ಬನ ಜತೆ ಮದುವೆಯಾಗಿದೆ. ಎರಡು ಮಕ್ಕಳಿದ್ದಾರೆ. ಮಠಗಳಲ್ಲಿ ಭದ್ರತೆ ಇಲ್ಲ ಎಂಬ ಆಕೆಯ ಹೇಳಿಕೆ ಸರಿಯಲ್ಲ. ಆಕೆಯ ಜತೆ ಮಾತನಾಡಿರುವ ರುದ್ರಮ್ಮ ಕೂಡಾ ಒಬ್ಬ ಬೇಜವಾಬ್ದಾರಿಯ ಹೆಣ್ಮಗಳು. ಇಷ್ಟು ಜನರ ಹೆಸರನ್ನು ಹೇಳುವಾಗ ಅದು ಸರಿನಾ ಎಂದು ನೋಡಬೇಕು. ಸತ್ಯಕ್ಕನಿಗೆ ಗೊತ್ತಿಲ್ಲದ ಸ್ವಾಮೀಜಿ ಯಾರೂ ಇಲ್ಲ. ಅವರನ್ನು ಕೇಳಬಹುದಿತ್ತು. ಈಗ ತನ್ನ ಬೇಜವಾಬ್ದಾರಿಯ ಹೇಳಿಕೆಯಿಂದ ಒಂದು ಜೀವವನ್ನೇ ಬಲಿ ಪಡೆದಿದ್ದಾಳೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ ಸ್ವಾಮೀಜಿ.
ಸಿದ್ದಲಿಂಗ ಸ್ವಾಮೀಜಿ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರು. ನೂರಾರು ಯುವಕರನ್ನು ದುಶ್ಚಟಗಳಿಂದ ಮುಕ್ತಗೊಳಿಸಿದವರು ಅವರು. ಈಗ ವಿನಾಕಾರಣವಾಗಿ ಬಂದಿರುವ ಆರೋಪದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಇದನ್ನು ಗಮನಿಸಬೇಕು. ಈ ರೀತಿ ಸುಳ್ಳು ಮಾತುಗಳ ಮೂಲಕ ಜೀವನ ಅಂತ್ಯಕ್ಕೆ ಕಾರಣರಾಗುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು ಸ್ವಾಮೀಜಿ. ಅದೇ ಹೊತ್ತಿಗೆ ಇವುಗಳನ್ನು ಹಂಚಿಕೊಳ್ಳುವವರು ಕೂಡಾ ಒಂದಿಷ್ಟು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನೆಟ್ಟಿಗರು ಜವಾಬ್ದಾರಿಯಿಂದ ವರ್ತಿಸಬೇಕು. ಯಾರೋ ಆಪಾದನೆ ಮಾಡಿದರೆಂದು ವೈರಲ್ ಮಾಡುವುದು ಸರಿಯಲ್ಲ ಎಂದರು.
ಸಿದ್ದಲಿಂಗ ಸ್ವಾಮೀಜಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದು ಸರಿಯಲ್ಲ. ಇದ್ದು ಇವುಗಳನ್ನು ಎದುರಿಸಬೇಕಿತ್ತು ಎಂದಿರುವ ಅವರು, ಎಲ್ಲದಕ್ಕೂ ಕಾರಣವಾದ ಇಬ್ಬರು ಮಹಿಳೆಯರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಇದನ್ನೂ ಓದಿ |ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆಗೆ ವೈರಲ್ ಸಂಭಾಷಣೆಯೇ ಕಾರಣ, ಮಹಿಳೆಯರ ಮೇಲೆ ಕ್ರಮಕ್ಕೆ ಆಗ್ರಹ