ಉಡುಪಿ: ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಶಿಕ್ಷಕರ ಹಾಜರಾತಿ ಕಡ್ಡಾಯ ಎಂದು ಸುತ್ತೋಲೆ ಹೊರಡಿಸಿದ್ದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಬಿಇಒ ಹೊರಡಿಸಿದ್ದ ಸುತ್ತೊಲೆಗೆ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಕಾರ್ಯಕ್ರಮದ ಬೆನ್ನಲ್ಲೇ ಬಿಇಒ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಎಂ.ಜಿ.ಮಂಜುನಾಥ್ ಅಮಾನತುಗೊಂಡ ಬೈಂದೂರು ಬಿಇಒ. ನ.7ರಂದು ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ 1318 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಇದಕ್ಕೂ ಮುನ್ನಾ ಕಾರ್ಯಕ್ರಮಕ್ಕೆ ಶಿಕ್ಷಕರ ಹಾಜರಾತಿ ಕಡ್ಡಾಯ ಎಂದು ಬಿಇಒ ಆದೇಶ ಹೊರಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಎಲ್ಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಹಾಜರಾದರೆ ಮಕ್ಕಳಿಗೆ ಶಾಲೆಯಲ್ಲಿ ಪಾಠ ಹೇಳುವವರು ಯಾರು? ಎಂದು ಅಧಿಕಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಡಿಕಾರಿತ್ತು.
ಈ ಕುರಿತು ಮಾಧ್ಯಮಗಳಲ್ಲಿ ಸಿಎಂ ಜಿಲ್ಲೆಗೆ ಬಂದ ದಿನವೇ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಬೈಂದೂರು ಬಿಇಒ ಮಂಜುನಾಥ್‌ಗೆ ಅಮಾನತು ಶಿಕ್ಷೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Samskara Habba | ಹರಿಹರಪುರ ಶ್ರೀ ಮಠದಲ್ಲಿ ಸಂಸ್ಕಾರ ಹಬ್ಬ; ಏನಿದು ಕಾರ್ಯಕ್ರಮ?