ಮಂಡ್ಯ: ಜಿಲ್ಲೆಯಲ್ಲೇ ಅತ್ಯಂತ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೆಸರಾಗಿರುವುದು ನಾಗಮಂಗಲ. ಅದರ ಕೇಂದ್ರ ಸ್ಥಾನವಾದ ನಾಗಮಂಗಲ ಪಟ್ಟಣ ಇತ್ತ ಹಳ್ಳಿಯೂ ಅಲ್ಲ, ಅತ್ತ ಪಟ್ಟಣವೂ ಅಲ್ಲದಂತಹ ಸ್ಥಿತಿಯಲ್ಲಿದೆ.
ಇಲ್ಲಿನ ಕಿಷ್ಕಿಂದೆಯಂತಹ ರಸ್ತೆಗಳು, ಪಾದಚಾರಿ ಮಾರ್ಗಗಳು ಒತ್ತುವರಿಯಾಗಿ ದೊಡ್ಡ ಮಟ್ಟದ ಕಿರಿಕಿರಿಗೆ ಕಾರಣವಾಗಿದ್ದವು. ರಸ್ತೆ, ಫುಟ್ ಪಾತ್ ತೆರವುಗೊಳಿಸಬೇಕೆನ್ನುವ ಕೂಗು ಅನೇಕ ಕಾಲದಿಂದ ಇತ್ತಾದರೂ ಇದೀಘ ಪುರಸಭೆ ಅಧಿಕಾರಿಯ ಧೈರ್ಯದ ಕಾರಣಕ್ಕೆ ಕಾರ್ಯ ಕೈಗೂಡಿದೆ.
ಜನರ ಕೂಗಿಗೆ ಇದೀಗ ಪುರಸಭೆ ಮುಖ್ಯಾಧಿಕಾರಿ ಅಮೃತ ಕಿವಿಗೊಟ್ಟು, ಜನಪ್ರತಿನಿಧಿಗಳ ಅಸಹಾಕಾರ ಮತ್ತು ವ್ಯಾಪಾರಿಗಳ ಪ್ರತಿರೋಧದ ನಡುವೆಯೂ ರಸ್ತೆ, ಫುಟ್ ಪಾತ್ ತೆರವು ಕಾರ್ಯಾಚರಣೆ ಯಶಸ್ವಿಗೊಳಿಸಿ, ಶಹಬ್ಬಾಶ್ ಗಿರಿ ಪಡೆದುಕೊಂಡಿದ್ದಾರೆ.
ಕೆಲಸಕ್ಕೆ ಕೈಜೋಡಿಸಲಿಲ್ಲ ಜನಪ್ರತಿನಿಧಿಗಳು
ನಾಗಮಂಗಲ ತಾಲೂಕಿನ ರಾಜಕಾರಣ ಮಂಡ್ಯ ಜಿಲ್ಲೆಯ ಉಳಿದೆಡೆಗಿಂತ ಮೊದಲಿಂದಲೂ ಭಿನ್ನವೇ. ಹಿಂದೆ ಅಲ್ಲಿ ಹೊಡಿ, ಬಡಿ ರಾಜಕಾರಣದ ಮೇಲಾಟ ಜೋರಾಗಿತ್ತು. ನಂತರದಲ್ಲಿ ಹಣ, ಹೆಂಡ, ತೋಳ್ಬಲದ ರಾಜಕಾರಣ ಮೇಳೈಸಿದೆ. ಇಲ್ಲಿ ಪ್ರತಿಯೊಂದು ವಿಷಯವೂ ಓಟಿನ ರಾಜಕಾರಣದಿಂದಲೇ ಕೂಡಿದೆ. ರಸ್ತೆ, ಫುಟ್‌ಪಾತ್ ಒತ್ತುವರಿ ತೆರವಿಗೆ ಖುದ್ದು ತಾವು ಮುಂದೆ ನಿಂತಲ್ಲಿ ವ್ಯಾಪಾರಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಭವಿಷ್ಯದಲ್ಲಿ ವೈಯಕ್ತಿಕವಾಗಿ ತಮಗೆ ಇಲ್ಲವೇ ತಮ್ಮ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಬಹುದೆಂದು ಹೆದರಿಯೇ ಇತ್ತ ಜೆಡಿಎಸ್, ಅತ್ತ ಕಾಂಗ್ರೆಸ್ ಪುರಪಿತೃಗಳು ತೆಪ್ಪಗಾದರು.
ಜೆಡಿಎಸ್ ಶಾಸಕ ಕೆ.ಸುರೇಶಗೌಡ, ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕೂಡ ಒತ್ತುವರಿ ತೆರವಿನ ಗೊಡವೆ ತಮಗೇಕೆ ಎಂದು ಮುಗುಮ್ಮಾಗಿದ್ದರು. ಏತನ್ಮಧ್ಯೆ, ಅಂದುಕೊಂಡಂತೆಯೇ ಅತಿಕ್ರಮಣದಾರ ವ್ಯಾಪಾರಿಗಳಿಂದ ಕಾರ್ಯಾಚರಣೆ ವೇಳೆ ಪ್ರಬಲ ಪ್ರತಿರೋಧವೇ ಎದುರಾಯಿತು.
ಸ್ವತಃ ನಿಂತ ಅಧಿಕಾರಿ
ಒತ್ತುವರಿ ತೆರವಿಗೆ ಜನರ ಪ್ರತಿರೋಧ ಬರಬಹುದೆಂದು ಊಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಅಮೃತ, ಯಾವ ಜನಪ್ರತಿನಿಧಿ ಸಹಕಾರವೂ ಇಲ್ಲದೆಯೇ ಪೊಲೀಸರ ನೆರವಿನೊಂದಿಗೆ ರಸ್ತೆ ಮತ್ತು ಫುಟ್‌ಪಾತ್ ಅತಿಕ್ರಮಣ ತೆರವಿಗೆ ಖುದ್ದು ನಿಂತೇಬಿಟ್ಟರು. ನಮಗೆ ಮೊದಲೇ ನೊಟೀಸ್ ನೀಡಬೇಕಿತ್ತು, ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು, ಈಗ ಏಕಾಏಕಿ ತೆರವು ಮಾಡಿದರೆ ಹೇಗೆ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಮೇಲೆ ಬಿದ್ದು ಹರಿಹಾಯಲು ಮುಂದಾದ ವ್ಯಾಪಾರಿಗಳಿಗೆ ಪುರಸಭೆ ಮುಖ್ಯಾಧಿಕಾರಿ ಖಡಕ್ ಉತ್ತರವನ್ನೇ ನೀಡಿದರು.
ನೀವೆಷ್ಟೇ ಪ್ರತಿರೋಧ, ಪ್ರತಿಭಟನೆ ವ್ಯಕ್ತಪಡಿಸಿದರೂ ಜಗ್ಗೋದಿಲ್ಲ. ಒತ್ತುವರಿ ತೆರವು ಮಾಡಿಯೇ ಮಾಡುತ್ತೇನೆ. ಸುಗಮ ಸಂಚಾರ, ಸಾರ್ವಜನಿಕರಿಗೆ ಅಡ್ಡಿ ನಿವಾರಣೆಯೇ ನನ್ನ ಗುರಿ ಎನ್ನುವ ಸಂದೇಶ ರವಾನಿಸಿದರು. ಬಂದೋಬಸ್ತ್‌ಗಾಗಿ ಆಗಮಿಸಿದ್ದ ಪೊಲೀಸರು ಕೂಡ ಕಾರ್ಯಾಚರಣೆಗೆ ಅಡೆತಡೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿದರು.
ಇದನ್ನೂ ಓದಿ | ಶೀಘ್ರದಲ್ಲೆ ಬೆಂಗಳೂರಿನ ರಾಜಕಾಲುವೆಗಳ ಒತ್ತುವರಿ ತೆರವು: ಸಿಎಂ ಬೊಮ್ಮಾಯಿ
ರಸ್ತೆ ಅತಿಕ್ರಮಣ ತೆರವು ವಿಚಾರದಲ್ಲಿ ತಾರತಮ್ಯ ಆಗಿದೆ ಎನ್ನುವ ದೂರು ಕಾರ್ಯಾಚರಣೆ ವೇಳೆ ಕೇಳಿ ಬಂದಿತು. ಕೆಲವರಿಗೆ ಮಾತ್ರ ಮೌಖಿಕವಾಗಿ ವಿಚಾರ ಮುಟ್ಟಿಸಿದ್ದು, ತಮಗೆ ಯಾವುದೇ ಮುನ್ಸೂಚನೆಯನ್ನೂ ನೀಡಿಲ್ಲ. ನೀವು ಏಕಪಕ್ಷೀಯವಾಗಿ ಕಾರ್ಯಾಚರಣೆ ಮಾಡುತ್ತಿದ್ದೀರಿ. ನಮಗೆ ಕಿರುಕುಳ ನೀಡುತ್ತಿದ್ದೀರಿ ಎಂದು ಕೆಲ ವ್ಯಾಪಾರಿಗಳು ಪೊಲೀಸರ ಸಮ್ಮುಖದಲ್ಲಿಯೇ ಪುರಸಭೆ ಮುಖ್ಯಾಧಿಕಾರಿ ಅಮೃತ ಮೇಲೆ ಹರಿಹಾಯ್ದರು.
ಇಲ್ಲಿ ಯಾವುದೇ ತಾರತಮ್ಯದ ಪ್ರಶ್ನೆಯೇ ಇಲ್ಲ. ಸಾರ್ವಜನಿಕ ಹಿತಾಸಕ್ತಿಯಷ್ಟೇ ತಮಗೆ ಮುಖ್ಯ. ಪ್ರತಿರೋಧ, ಪ್ರತಿಭಟನೆಗೆ ಲೆಕ್ಕಿಸುವುದಿಲ್ಲ ಎಂದು ಅಮೃತ ಖಡಕ್ ಸಂದೇಶ ನೀಡುತ್ತಿದ್ದಂತೆಯೇ ವ್ಯಾಪಾರಿಗಳು ವಿಚಲಿತರಾದರು. ಪ್ರತಿರೋಧ ಮುಂದುವರಿದಲ್ಲಿ ಪೊಲೀಸರ ಬಲ ಪ್ರಯೋಗ ಆದೀತು ಎನ್ನುವ ಭಯದೊಂದಿಗೆ ತೆಪ್ಪಗಾದರು.
ತಾವಿಲ್ಲಿ ಯಾರಿಗೋ ಅನಾನುಕೂಲ ಮಾಡಿ, ಇನ್ಯಾರಿಗೋ ಅನುಕೂಲ ಮಾಡಿಕೊಡುವುದಕ್ಕೆ ಬಂದಿಲ್ಲ. ನನ್ನ ಜವಬ್ದಾರಿ ನಿರ್ವಹಿಸಿ, ಸಾರ್ವಜನಿಕರ ಕೆಲಸ ಮಾಡುತ್ತಿದ್ದೇನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಹುಷಾರ್ ಎನ್ನುವ ಸಂದೇಶವನ್ನೂ ಪುರಸಭೆ ಮುಖ್ಯಾಧಿಕಾರಿ ಅಮೃತ ರವಾನಿಸಿದರು. ಇದೆಲ್ಲದರ ತರುವಾಯ ಪ್ರತಿಭಟನೆಯ ಸೊಲ್ಲು ಅಡಗಿತು. ಅತಿಕ್ರಮಣ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಇದನ್ನೂ ಓದಿ| ನಾಗಮಂಗಲದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಸ್ವಂತ ಮನೆ ಕಟ್ಟಿಸುತ್ತಿರುವ ಶಿವರಾಮೇಗೌಡ