ಮಂಡ್ಯ: ಮಂಡ್ಯದ ಪಾಂಡವಪುರದ ಬನಘಟ್ಟದ ವಿಸಿ ನಾಲೆಯಲ್ಲಿ (Drowned In Canal) ಮತ್ತೊಂದು ದುರಂತ ನಡೆದಿದೆ. ವಿಸಿ ನಾಲೆಗೆ ಶಿಫ್ಟ್ ಕಾರೊಂದು ಬಿದ್ದಿದ್ದು, ಕಾರಿನಲ್ಲಿ ನಾಲ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ (ನ.7) ಸಂಜೆ 4.45ರ ವೇಳೆಯಲ್ಲಿ ದುರಂತ ಜರುಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಯಿಸಿದ್ದಾರೆ. ವಿಸಿ ನಾಲೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಇಳಿದು ಪರಿಶೀಲನೆ ನಡೆಸುತ್ತಿದ್ದಾರೆ. ಸೋಮವಾರವಷ್ಟೇ ಕೆ.ಆರ್.ಎಸ್ ಡ್ಯಾಂನಿಂದ ವಿಸಿ ನಾಲೆಗೆ ನೀರು ಬಿಡಲಾಗಿತ್ತು. ತುಂಬಿ ಹರಿಯುತ್ತಿರುವ ಕಾಲುವೆಗೆ ಕಾರು ಬಿದ್ದಿದೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ನಾಲೆಗೆ ಉರುಳಿ ಬಿತ್ತು ಎಂದಿದ್ದಾರೆ. ನಾಲೆಗೆ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದವರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ನೀರಿನ ರಭಸಕ್ಕೆ ಕಾರು ಮುಳುಗಿದೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಸದ್ಯ ಕಾರನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪದೇಪದೆ ಇಂತಹ ದುರಂತಗಳು ನಡೆಯುತ್ತಿದ್ದರೂ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ನಾಲೆಗೆ ಸರಿಯಾದ ತಡೆಗೋಡೆ ನಿರ್ಮಿಸದೆ ಇರುವುದೇ ಈ ಅವಘಡಗಳಿಗೆ ಕಾರಣ ಎಂದಿದ್ದಾರೆ.
ಕಾರು ಎತ್ತಲು ಕ್ರೇನ್ ಬಳಕೆ
ಪಾಂಡವಪುರದಿಂದ ನಾಗಮಂಗಲ ಕಡೆಗೆ ಕಾರು ಹೋಗುವಾಗ ಈ ದುರಂತ ನಡೆದಿದೆ. ಕಳೆದ ಒಂದು ವಾರದ ಹಿಂದಷ್ಟೇ ಇದೇ ಸ್ಥಳದಲ್ಲಿ ಲಾರಿಯೊಂದು ಉರುಳಿತ್ತು. ಆಗ ನಾಲೆಯಲ್ಲಿ ನೀರು ಇರಲಿಲ್ಲ. ಹೀಗಾಗಿ ದುರಂತವೊಂದು ತಪ್ಪಿತ್ತು. ಇದೀಗ ಅದೇ ಸ್ಥಳದಲ್ಲಿ ಕಾರು ಉರುಳಿದೆ. ಸಂಜೆ ಆಗುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
20 ಅಡಿ ಆಳದಲ್ಲಿ ಕಾರು ಮುಳುಗಿದ್ದು, ಭಾರಿ ಗಾತ್ರದ ಹಗ್ಗ ಕಟ್ಟಿ ಮೇಲೆತ್ತಲು ಸಿಬ್ಬಂದಿ ಯತ್ನಿಸುತ್ತಿದ್ದಾರೆ. ಸತತ ಒಂದು ಗಂಟೆಯಿಂದಲೂ ಕಾರ್ಯಾಚರಣೆ ಮುಂದುವರಿದಿದ್ದು, ಕ್ರೇನ್ ಸಹಾಯದಿಂದ ಕಾರು ಮೇಲೆತ್ತುವಾಗ ಹಗ್ಗ ತುಂಡಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ