Site icon Vistara News

Hanuman Flag: ಕೆರಗೋಡು ಹನುಮ ಧ್ವಜ ಕಿಚ್ಚು ಫೆ.7ಕ್ಕೆ ಮಂಡ್ಯ ನಗರ ಬಂದ್‌!

Keragodu Hanuman flag controversy called for a mandya bandh

ಮಂಡ್ಯ: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿವಾದ (Hanuman Flag) ನಡೆಯುತ್ತಿರುವ ಬೆನ್ನಲ್ಲೇ ಮಂಡ್ಯದ ಸಮಾನಮನಸ್ಕ ವೇದಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸಿ, ಫೆ.7ಕ್ಕೆ ಮಂಡ್ಯ ಬಂದ್‌ಗೆ (mandya bandh) ಕರೆ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಸಿಐಟಿಯು, ಡಿಎಸ್‌ಎಸ್, ಕರ್ನಾಟಕ ಸ್ವಾಭಿಮಾನ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಒಕ್ಕೂಟದಿಂದ ಬಂದ್‌ಗೆ ಕರೆ ಕೊಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಸಂಘದ ಸದಸ್ಯ ಲಕ್ಷ್ಮಣ್‌, ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲೆಯ ಸೌಹಾರ್ದತೆ, ಪರಂಪರೆಗೆ ಮಸಿ ಬಳಿದು ಶಾಂತಿ ಕೆಡವಲು ಯತ್ನಿಸಲಾಗುತ್ತಿದೆ. ಜನರ ಭಾವನೆಯನ್ನು ಮುಂದಿಟ್ಟುಕೊಂಡು ಯಾವುದೇ ರಾಜಕೀಯ ಪಕ್ಷಗಳು ರಾಜಕೀಯ ಮಾಡಿದರೂ ಖಂಡಿಸುತ್ತೇವೆ. ಬಾವುಟದ ವಿಚಾರವನ್ನು ಮುಂದಿಟ್ಟುಕೊಂಡು ಇಡೀ ಬಿಜೆಪಿ ಪಟಲಂ ಕೊರಗೋಡಲ್ಲಿ ರಾಜಕೀಯ ವೇದಿಕೆ ಮಾಡಿಕೊಳ್ಳುವುದು ಸರಿಯಲ್ಲ.

ಬರ ಪರಿಹಾರ, ಮೈಶುಗರ್ ಸಕ್ಕರೆ ಕಾರ್ಖಾನೆ ಸೇರಿದಂತೆ ಅನೇಕ ವಿಚಾರಗಳಿದ್ದರೂ ವಿರೋಧ ಪಕ್ಷವಾಗಿ ಬಿಜೆಪಿಯು ಹಳೇ ವಿಚಾರವನ್ನ ಮುಂದಿಟ್ಟುಕೊಂಡು ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಹನುಮ ಧ್ವಜ ಹಾರಾಟದ ಸ್ಥಳದಲ್ಲೇ ಎಲ್ಲಾ ಸಂಘಟನೆಗಳೂ ತಮ್ಮ ಜಾತಿ ಧರ್ಮದ ಬಾವುಟ ಹಾರಿಸ್ತಿವಿ ಎಂದರೆ ಅಲ್ಲಿ ಸೌಹಾರ್ಧತೆ ಇರಲು ಸಾಧ್ಯವಿಲ್ಲ. ಕೆರಗೋಡು ಹೆಸರಿನಲ್ಲಿ ರಾಜಕೀಯ‌ ಮಾಡುತ್ತಿರುವುದಕ್ಕೆ ಖಂಡಿಸಿದರು.

ಕೆರಗೋಡು ಗಲಾಟೆಯನ್ನ ಧರ್ಮಕ್ಕೆ ತಳುಕು ಹಾಕ್ಬೇಡಿ

ಕೆರಗೋಡು ಗಲಾಟೆಯನ್ನು ಧರ್ಮಕ್ಕೆ ಯಾಕೆ ಲಿಂಕ್‌ ಮಾಡುತ್ತೀರಿ. ಮಂಡ್ಯ ಜಿಲ್ಲೆ ಯಾವತ್ತು ಧರ್ಮದ ವಿಚಾರಕ್ಕೆ ವಿಭಾಗ ಆಗಿಲ್ಲ. ಧರ್ಮದ ವಿಚಾರಕ್ಕೆ ತಳುಕು ಹಾಕುವ ಮೂಲಕ ಹಿಂದೂಗಳನ್ನ ಅದರಲ್ಲೂ ಒಕ್ಕಲಿಗ ಯುವಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ. ಸಿ.ಟಿ ರವಿ ಅವರು ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸುತ್ತೀರಿ ಎಂದರೆ ಮಂಡ್ಯವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದರು. ನಿಮಗೆ ನಿಜವಾಗಲೂ ರಾಜಕೀಯ ಮಾಡಬೇಕು ಅನಿಸಿದರೆ ಬಾವುಟದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ಫೆಬ್ರವರಿ 9ರಂದು ಪುಂಡಾಟಕ್ಕೆ ಕರೆ ನೀಡಲಾಗಿರುವುದು ಬಂದ್ ಒಳ್ಳೆಯದಲ್ಲ. ಹಾಗಾಗಿ ನಾವು ಒಳ್ಳೆ ಉದ್ದೇಶವನ್ನಿಟ್ಟುಕೊಂಡು ಫೆಬ್ರವರಿ 7ಕ್ಕೆ ಮಂಡ್ಯ ನಗರ ಬಂದ್‌ಗೆ ಕರೆ ನೀಡಿದ್ದೇವೆ. ಕೆರಗೋಡು ಈ ರೀತಿಯ ಘಟನೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿ ಬಂದ್‌ಗೆ ಕರೆ ಕೊಟ್ಟಿದ್ದೇವೆ ಎಂದು ವಿವರಿಸಿದರು.

ವಿವಾದಿತ ಸ್ಥಳಕ್ಕೆ ಗುಪ್ತಚರ ಇಲಾಖೆ ಎಸ್‌ಪಿ ಭೇಟಿ

ಮಂಡ್ಯದ ಕೆರಗೋಡು ಹನುಮಧ್ವಜ ತೆರವು ವಿವಾದಿತ ಸ್ಥಳಕ್ಕೆ ಗುಪ್ತಚರ ಇಲಾಖೆ ಎಸ್‌ಪಿ ಭೇಟಿ ನೀಡಿದರು. ಮೈಸೂರು ವಿಭಾಗದ ಇಂಟಲಿಜೆನ್ಸ್‌ ಎಸ್‌ಪಿ ಜಯಪ್ರಕಾಶ್ ಭೇಟಿ ನೀಡಿ, ಕೆರಗೋಡು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಅವರಿಂದ ಮಾಹಿತಿ ಪಡೆದರು. ಸ್ಥಳೀಯ ಶಾಸಕ ರವಿ ಗಣಿಗ ಘಟನೆ ಸಂಬಂಧ ಇಂಟಲಿಜೆನ್ಸ್ ಫೈಲ್ಯೂರ್ ಎಂದು ಆರೋಪ ಮಾಡಿದ್ದರು. ಹೀಗಾಗಿ ಖುದ್ದು ವಿವಾದಿತ ಸ್ಥಳಕ್ಕೆ ಬಂದು ಜಯಪ್ರಕಾಶ್ ಮಾಹಿತಿ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version