ಮಂಡ್ಯ: ಮದ್ದೂರು ತಾಲೂಕು ಆಸ್ಪತ್ರೆಗೆ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಧರ್ ಶೆಟ್ಟಿ ಅವರು ಶನಿವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ನಿರ್ವಹಣೆ ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಬೆಳಗ್ಗೆ ಆಸ್ಪತ್ರೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ವೈದ್ಯಕೀಯ ಸಿಬ್ಬಂದಿಯ ಕೊರತೆ ಇದ್ದುದನ್ನು ನೋಡಿ ಕೋಪಗೊಂಡ ಅವರು, ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದಾಗ ಇಬ್ಬಿಬ್ಬರು ಸಿಬ್ಬಂದಿ ತಪಾಸಣೆ ಮಾಡಲು ಸಾಧ್ಯವಿಲ್ಲವೆ? ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಐದಾರು ವೈದ್ಯರಾದರೂ ಇರಬೇಕು. ಆಸ್ಪತ್ರೆಗೆ ಆದಷ್ಟು ಬೇಗ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ | ಕೊಡಗಿನ ಗಡಿಭಾಗದಲ್ಲಿ ಟೊಮ್ಯಾಟೊ ಫ್ಲೂ : ಆರೋಗ್ಯ ಇಲಾಖೆ ಹದ್ದಿನ ಕಣ್ಣು
ಬಳಿಕ ಶೌಚಗೃಹಗಳ ನಿರ್ವಹಣೆ ವೀಕ್ಷಿಸಿದ ಅವರು, ದಿನಕ್ಕೆ ಎಷ್ಟು ಬಾರಿ ಸ್ವಚ್ಛಗೊಳಿಸುತ್ತೀರಾ? ಇಷ್ಟೊಂದು ಗಲೀಜಾಗಿದೆ? ಎಂದು ಕೇಳಿದರು. ಆಗ ಸಿಬ್ಬಂದಿ, ದಿನಕ್ಕೆ ಮೂರು ಬಾರಿ ಸ್ವಚ್ಛ ಮಾಡಲಾಗುತ್ತದೆ ಎಂದರು.
ಬಳಿಕ ವಾರ್ಡ್‌ನಲ್ಲಿ ಒಳರೋಗಿಗಳ ಬಳಿ ತೆರಳಿ ಕುಂದು ಕೊರತೆ ಆಲಿಸಿದರು. ಈ ವೇಳೆ ಕೆಲವರು ಇಲ್ಲಿನ ವೈದ್ಯರು ಸಣ್ಣಗಾಯವಾದರೂ ಮಂಡ್ಯಕ್ಕೆ ಕಳುಹಿಸುತ್ತಾರೆ. ಸರಿಯಾದ ಫ್ಯಾನ್ ವ್ಯವಸ್ಥೆ ಇಲ್ಲ, ಕೂರಲು ಚೇರ್‌ಗಳೂ ಇಲ್ಲ ಎಂದು ದೂರಿದರು. ಬಳಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶ್ರೀಧರ್ ಶೆಟ್ಟಿ ಸೂಚಿಸಿದರು.
ಇದನ್ನೂ ಓದಿ | ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಅನುಮಾನಾಸ್ಪದ ಸಾವು