ಡಾ. ಡಿ.ಸಿ. ರಾಮಚಂದ್ರ
ಆಲೂರು ವೆಂಕಟರಾಯರು ೧೯೦೫ರಲ್ಲೇ ಕರ್ನಾಟಕ ಏಕೀಕರಣ ಚಳವಳಿಯೊಂದಿಗೆ ರಾಜ್ಯವನ್ನು ಒಂದು ಗೂಡಿಸುವ ಕನಸು ಕಂಡ ಮೊದಲಿಗರು. ೧೯೫೦ ರಲ್ಲಿ ಭಾರತವು ಗಣರಾಜ್ಯವಾಯಿತು ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳನ್ನು ರಚಿಸಲಾಯಿತು ಮತ್ತು ಇದು ದಕ್ಷಿಣ ಭಾರತದ ವಿವಿಧ ಸ್ಥಳಗಳನ್ನು ಒಳಗೊಂಡಂತೆ ಮೈಸೂರುರಾಜ್ಯಕ್ಕೆ ಜನ್ಮ ನೀಡಿತು, ಇದನ್ನು ಮೊದಲು ರಾಜರು ಆಳುತ್ತಿದ್ದರು.
೧೯೫೬ರ ನವೆಂಬರ್ ೧ ರಂದು, ಮೈಸೂರು ರಾಜ್ಯವು ಬಹುಪಾಲು ರಾಜ್ಯಗಳನ್ನು ಒಳಗೊಂಡಿತ್ತು. ಹಿಂದಿನ ಮೈಸೂರು ಸಂಸ್ಥಾನದ ಪ್ರದೇಶವನ್ನು ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳ ಕನ್ನಡ ಮಾತನಾಡುವ ಪ್ರದೇಶಗಳೊಂದಿಗೆ ಮತ್ತು ಹೈದರಾಬಾದಿನ ರಾಜಪ್ರಭುತ್ವದೊಂದಿಗೆ ವಿಲೀನಗೊಳಿಸಿ, ಏಕೀಕೃತ ಕನ್ನಡ ಮಾತನಾಡುವ ಉಪರಾಷ್ಟ್ರೀಯ ಘಟಕವನ್ನು ರಚಿಸಲಾಯಿತು. ಹೀಗೆ ಉತ್ತರಕರ್ನಾಟಕ, ಮಲೆನಾಡು (ಕೆನರಾ) ಮತ್ತು ಹಳೆ ಮೈಸೂರು ಹೀಗೆ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯದ ಮೂರು ಪ್ರದೇಶಗಳಾಗಿದ್ದವು.
ಹೊಸದಾಗಿ ಏಕೀಕೃತ ಗೊಂಡರಾಜ್ಯವು ಆರಂಭದಲ್ಲಿ “ಮೈಸೂರು” ಎಂಬ ಹೆಸರನ್ನು ಉಳಿಸಿಕೊಂಡಿತು, ಇದು ಹೊಸ ಅಸ್ತಿತ್ವದ ತಿರುಳನ್ನು ರೂಪಿಸಿದ್ದ ಹಿಂದಿನ ರಾಜಪ್ರಭುತ್ವದ ರಾಜ್ಯವಾಗಿತ್ತು,ಆದರೆ ಉತ್ತರಕರ್ನಾಟಕದ ಜನರು ಮೈಸೂರು ಎಂಬ ಹೆಸರನ್ನು ಉಳಿಸಿಕೊಳ್ಳಲು ಒಲವು ತೋರಲಿಲ್ಲ, ಏಕೆಂದರೆ ಇದು ಹಿಂದಿನ ರಾಜಪ್ರಭುತ್ವ ಮತ್ತು ಹೊಸ ರಾಜ್ಯದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ತರ್ಕವನ್ನು ಗೌರವಿಸಿ, ೧೯೭೩ ರ ನವೆಂಬರ್ ೧ ರಂದುರಾಜ್ಯದ ಹೆಸರನ್ನು”ಕರ್ನಾಟಕ”ಎಂದು ಬದಲಾಯಿಸಲಾಯಿತು.
ರಾಜ್ಯದ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಜೊತೆಗೆ ಕರ್ನಾಟಕ ಏಕೀಕರಣಕ್ಕೆ ಹೆಸರು ವಾಸಿಯಾದ ಇತರರಲ್ಲಿ ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ. ಎನ್. ಕೃಷ್ಣರಾವ್ ಮತ್ತು ಬಿ. ಎಂ. ಶ್ರೀಕಂಠಯ್ಯರಂತಹ ಸಾಹಿತಿಗಳು ಸೇರಿದ್ದಾರೆ.
ಕರ್ನಾಟಕ ಸಂಸ್ಥಾಪನಾ ದಿನ ಅಥವಾ ಕರ್ನಾಟಕ ದಿನ ಎಂದೂ ಕರೆಯಲ್ಪಡುವ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ೧೯೫೬ರಲ್ಲಿ ನೈಋತ್ಯ ಭಾರತದಎಲ್ಲಾಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ರಚಿಸಿದ ದಿನವಿದು. ಈ ದಿನದಂದು ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತದೆ. ಅವುಗಳನ್ನು ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದವರಿಗೆ ನೀಡಲಾಗುತ್ತದೆ.
ಬಾರಿಸುಕನ್ನಡಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸುಕನ್ನಡಡಿಂಡಿಮವ ||
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯಕಿಚ್ಚಿಗೆಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಬಾರಿಸುಕನ್ನಡಡಿಂಡಿಮವ ||
ಚೈತ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ
ಬಾರಿಸುಕನ್ನಡಡಿಂಡಿಮವ ||
ಕನ್ನಡಕ್ಕೆ ನಿಜವಾದಅಪಾಯವಿರುವುದು ಹೊರಗಿನಿಂದಲ್ಲ. ಅದು ನಮ್ಮೊಳಗೇ ಇದೆ. ಮೊದಲನೆಯದಾಗಿ ಶಿಕ್ಷಣದ ಉದ್ದೇಶದಕುರಿತಾಗಿ ನಮ್ಮಲ್ಲಿ ಬೇರೂರಿರುವತಪ್ಪುಗ್ರಹಿಕೆ. ಶಿಕ್ಷಣವು ಕೇವಲ ನೌಕರಿಗಾಗಿ. ಆಂಗ್ಲಭಾಷೆ ಮತ್ತು ಮಾಧ್ಯಮಲ್ಲಿ ಕಲಿತರೆ ಉದ್ಯೋಗಖಾತ್ರಿ ಎಂಬ ತಪ್ಪು ತಿಳುವಳಿಕೆ ನಮ್ಮಲ್ಲಿ ಬೇರೂರಿರುವುದು ಒಂದುದುರಂತವೇ ಸರಿ. ಪ್ರಸ್ತುತ ಉನ್ನತ ಹುದ್ದೆಯಲ್ಲಿರುವವರೆಲ್ಲರೂ ಆಂಗ್ಲ ಮಾಧ್ಯಮದಲ್ಲಿ ಕಲಿತವರೇ ಎನ್ನುವ ಭ್ರಮಾಲೋಕದಲ್ಲಿ ಕೆಲವರಿದ್ದಾರೆ.
ಭಾರತರತ್ನ ಪ್ರೊ. ಯು. ಆರ್. ರಾವ್ ಅವರಂತಹ ವಿಜ್ಞಾನಿಗಳು ಓದಿದ್ದು ಕನ್ನಡ ಮಾಧ್ಯಮದಲ್ಲಿಯೇ ಎನ್ನುವುದನ್ನು ನಾವೆಲ್ಲರೂ ಮನಗಾಣಬೇಕಿದೆ. ಇನ್ನೂ ಕೆಲವರಿಗೆ ತಮಗೆ ಆಂಗ್ಲ ಭಾಷೆ ಅರ್ಥವಾಗದಿದ್ದರೂ ಪರವಾಗಿಲ್ಲ, ತಮ್ಮ ಮಕ್ಕಳು ಆಂಗ್ಲಭಾಷೆಯಲ್ಲಿ ಮಾತನಾಡಿ ತಮನ್ನು ಪುನೀತರನ್ನಾಗಿ ಮಾಡಬೇಕೆಂಬ ಅವ್ಯಕ್ತ ಬಯಕೆ! ನಮ್ಮ ಆಂಗ್ಲಭಾಷಾ ವ್ಯಾಮೋಹಯಾವ ಮಟ್ಟವನ್ನು ತಲುಪಿದೆ ಎಂದರೆ ಕನ್ನಡ ಸಾಹಿತ್ಯ ಪರಿಷತ್ತು ಇರುವಂತೆ ಕರ್ನಾಟಕದಲ್ಲಿ ಆಂಗ್ಲ ಸಾಹಿತ್ಯ ಪರಿಷತ್ತು ಬೇಕು ಎನ್ನುವ ಭೂಪರೂ ನಮ್ಮಲ್ಲಿದ್ದಾರೆ!
ಆದ್ದರಿಂದ ತಾಯಿಯಷ್ಟೇ ತಾಯಿಭಾಷೆಯನ್ನೂ ಪ್ರೀತಿಸಬೇಕು. ತಾಯಿ ಭಾಷೆಯನ್ನು ಮರೆತರೆ ತಾಯಿಯನ್ನೇ ಮರೆತಂತೆ. ಪ್ರಾಥಮಿಕ ಹಂತದವರೆಗೆತಾಯಿ ಭಾಷೆಯಲ್ಲಿಯೇ ನಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು. ಆ ಮೂಲಕ ಕನ್ನಡದ ಬೆಳವಣಿಗೆಯ ವಿಷಯದಲ್ಲಿ ಕನ್ನಡಿಗರಾದ ನಾವು ನಮ್ಮಕರ್ತವ್ಯವನ್ನು ಪಾಲಿಸಬೇಕು. ದಿನಗಳೆದಂತೆ ಬಿಕ್ಕಟ್ಟುಗಳು ಹೆಚ್ಚುತ್ತಿರುವುದು ನಿಜ. ಆದರೆ ಬಿಕ್ಕಟ್ಟುಗಳ ನಡುವೆಯೂ ಕನ್ನಡನಾಡಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಕನ್ನಡವು ಬೆಳೆಯುತ್ತಲೇ ಇದೆ. ಬೆಳೆಯಲೇಬೇಕು, ಬೆಳೆಯುತ್ತಿರಲೇಬೇಕು ಎಂಬ ಸದಾಶಯವನ್ನು ಕನ್ನಡಿಗರೆಲ್ಲರೂ ಇಟ್ಟುಕೊಳ್ಳೋಣ.
ಇದನ್ನೂ ಓದಿ| Kannada Rajyotsava Fashion | ಕನ್ನಡ ರಾಜ್ಯೋತ್ಸವ ಸಂಭ್ರಮದ ಡ್ರೆಸ್‌ಕೋಡ್‌ಗೆ ಐಡಿಯಾ