ಮಳವಳ್ಳಿ: ನನಗೆ ರಾಜಕೀಯ ಹೊಸದಲ್ಲ. ಇಷ್ಟು ದಿನ ತೆರೆಯ ಹಿಂದೆ ಇದ್ದೆ. ಈಗ ನೇರವಾಗಿ ಕಣಕ್ಕಿಳಿದಿದ್ದೇನೆ. ಜನ ಸೇವೆ ಮಾಡಲೆಂದು ಬಂದಿದ್ದೇನೆ. ಜನ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಮಂಡ್ಯ (Mandya News) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.
ಬಿ.ಜಿ.ಪುರ ಹೊರಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸೇವೆ ಮಾಡಲು ಅವಕಾಶ ಸಿಕ್ಕಿದೆ. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಸ್ಥಾಪನೆ, ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತಂದು ನೀರಾವರಿ ಸಮಸ್ಯೆ ನಿವಾರಣೆಗೆ ಯತ್ನಿಸಲಾಗುವುದು ಎಂದರು.
ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದ ಅವರು, ನಾನು ಮಂಡ್ಯದ ಮಣ್ಣಿನ ಮಗ. ನನ್ನ ಗೆಲುವು ರೈತರ ಗೆಲುವು. ಇದು ನನ್ನ ಕರ್ಮಭೂಮಿ. ನನ್ನ ಜನ ನನ್ನ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Job Alert: ಬಿಎಂಟಿಸಿ 2,500 ಕಂಡಕ್ಟರ್ ಹುದ್ದೆಯ ಪರಿಷ್ಕೃತ ಅಧಿಸೂಚನೆ ಪ್ರಕಟ; ಇಲ್ಲಿ ಪರಿಶೀಲಿಸಿ
ಈ ಸಂದರ್ಭದಲ್ಲಿ ಶಾಸಕ ನರೇಂದ್ರಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮಾಜಿ ಜಿಪಂ ಸದಸ್ಯ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್, ಮಳವಳ್ಳಿ ಕಾಂಗ್ರೆಸ್ ಖಜಾಂಜಿ ಮಹದೇವ್, ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಕುಂದೂರು ಪ್ರಕಾಶ್, ಮಹೇಶ್, ಅನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾನಾ ಮಠಗಳಿಗೆ ಭೇಟಿ, ಶ್ರೀಗಳಿಂದ ಆಶೀರ್ವಾದ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ತಾಲೂಕಿನ ನಾನಾ ಮಠಗಳಿಗೆ ಭೇಟಿ ನೀಡಿ, ಮಠಾಧೀಶರ ಆಶೀರ್ವಾದ ಪಡೆದರು.
ಅಲಸಳ್ಳಿ ಗವಿ ಮಠಕ್ಕೆ ಭೇಟಿ ನೀಡಿ, ಶ್ರೀ ಷಡಕ್ಷರಿ ಸ್ವಾಮೀಜಿ ಹಾಗೂ ಹೆಬ್ಣಿ ಪ್ರಭುಲಿಂಗಸ್ವಾಮೀಜಿ, ಶಂಭುಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದರು.
ಕುಂದೂರು ಬೆಟ್ಟದ ರಸಸಿದ್ದೇಶ್ವರ ಮಠದ ಶ್ರೀ ನಂಜುಂಡಸ್ವಾಮೀಜಿ, ಬಿ.ಜಿ.ಪುರ ಹೊರಮಠದ ಚಂದ್ರಶೇಖರ ಸ್ವಾಮೀಜಿ, ಮಂಟೇಸ್ವಾಮಿ ಮಠದ ಶ್ರೀ ಜ್ಞಾನೇಶ ಸ್ವಾಮೀಜಿಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು.
ನಾನಾ ಸಮುದಾಯದ ಮುಖಂಡರ ಭೇಟಿ
ಮಳವಳ್ಳಿ ತಾಲೂಕಿನ ಉಪ್ಪಾರ ಸಮಾಜ, ಸವಿತಾ ಸಮಾಜ, ಮಡಿವಾಳ, ಬೆಸ್ತ ಸಮಾಜ ಮತ್ತು ಕ್ರೈಸ್ತ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಬೆಂಬಲ ಕೋರಿದರು.
ಇದನ್ನೂ ಓದಿ: Coconut oil massage: ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕೆ? ತೆಂಗಿನೆಣ್ಣೆ ಹಚ್ಚಿಕೊಂಡರೆ ಸಾಕು!
ತಳ ಸಮುದಾಯಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಹಲವಾರು ಯೋಜನೆಗಳನ್ನು ತಂದಿದೆ. ಎಲ್ಲಾ ವರ್ಗದವರನ್ನು ಒಟ್ಟಿಗೆ ಕರೆದೊಯ್ಯುವ ಪಕ್ಷ ಕಾಂಗ್ರೆಸ್. ಹೀಗಾಗಿ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಕಾಂಗ್ರೆಸ್ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.