Site icon Vistara News

Protest in Srirangapatna | ಜಾಮಿಯಾ ಮಸೀದಿಗೆ ನುಗ್ಗಲು ಹಿಂದು ಕಾರ್ಯಕರ್ತರ ಯತ್ನ; ಪೊಲೀಸ್‌ ಬಂದೋಬಸ್ತ್‌

Protest in Srirangapatna

ಮಂಡ್ಯ: ಮುಸ್ಲಿಮರ ಮನೆ ಮೇಲೆ ಬಾವುಟ ಬದಲಾಯಿಸಿದ ಪ್ರಕರಣದಲ್ಲಿ ಹನುಮ ಮಾಲಾಧಾರಿಗೆ ಪೊಲೀಸರು ಪ್ರಾಣ ಬೆದರಿಕೆ ‌ಹಾಕಿದ್ದಾರೆ ಎಂದು ಆರೋಪಿಸಿ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಶನಿವಾರ ಸಂಜೆ ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ್ದರಿಂದ (Protest in Srirangapatna) ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.

ಡಿ.4ರಂದು ಶ್ರೀರಂಗಪಟ್ಟಣದಲ್ಲಿ ಹನುಮಮಾಲೆ ಸಂಕೀರ್ತನಾ ಯಾತ್ರೆ ನಡೆದಿತ್ತು. ಈ ವೇಳೆ ಹನುಮ ಮಾಲಾಧಾರಿ, ಮುಸ್ಲಿಮರೊಬ್ಬರ ಮನೆ ಮೇಲಿದ್ದ ಹಸಿರು ಬಾವುಟವನ್ನು ತೆಗೆದು ಕೇಸರಿ ಬಾವುಟವನ್ನು ಅಳವಡಿಸಿದ್ದ. ಈ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಶ್ರೀರಂಗಪಟ್ಟಣ ಟೌನ್ ಪೊಲೀಸರು, ವ್ಯಕ್ತಿಯನ್ನು ವಿಚಾರಣೆಗೆ ಕರೆತರುವ ವೇಳೆ, ನೀವು ಯಾಕೆ ಹೀಗೆ ಮಾಡ್ತೀರಿ, ಅವರು ನಿಮ್ಮ‌‌ ಕತ್ತು ಕೊಯ್ಯುತ್ತಾರೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Veerashaiva Lingayat | ಸಮಸಮಾಜ ನಿರ್ಮಾಣಕ್ಕೆ ಶ್ರಮಿಸೋಣ: ಸಿಎಂ ಬಸವರಾಜ ಬೊಮ್ಮಾಯಿ

ಜೀವ ಬೆದರಿಕೆ ಹಾಕಿರುವ ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಠಾಣೆ ಮುಂದೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರಿಂದ ಮಧ್ಯಾಹ್ನದಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಆದರೆ, ಸಂಜೆ ಸ್ಥಳಕ್ಕೆ ಎಸ್‌ಪಿ ಯತೀಶ್ ಭೇಟಿ ನೀಡಿದ್ದಾಗ ತಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ ಎಂದು ಜಾಮಿಯಾ ಮಸೀದಿಗೆ ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ಈ ವೇಳೆ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ನಂತರ ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹನುಮ ಜಯಂತಿ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಡಿ.4ರಂದು ನಡೆದ ಹನುಮ ಸಂಕೀರ್ತನಾ ಯಾತ್ರೆ ವೇಳೆ ಕೂಡ ಮಸೀದಿಗೆ ಮುತ್ತಿಗೆ ಹಾಕಲು ಹನುಮ ಮಾಲಾಧಾರಿಗಳು ಯತ್ನಿಸಿದ್ದರು. ಯಾತ್ರೆ ಜಾಮಿಯಾ ಮಸೀದಿ ಬಳಿ ಆಗಮಿಸಿದಾಗ ಹನುಮ ಮಾಲಾಧಾರಿಗಳು ಪ್ರತಿಭಟನೆ ನಡೆಸಿ, ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಕೆಡವಿ ಜಾಮಿಯಾ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಈ ಜಾಗ ನಮ್ಮದು, ಇಲ್ಲಿ ಹನುಮ ಮಂದಿರ ನಿರ್ಮಿಸುತ್ತೇವೆ ಎಂದು ಹನುಮ ಮಾಲಾಧಾರಿಗಳು ಪಟ್ಟುಹಿಡಿದು, ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಇದನ್ನೂ ಓದಿ | Bahuroopi Rangotsava | ರಂಗಾಯಣದಲ್ಲಿ ಒಂದೇ ಸಿದ್ಧಾಂತವಾದಿಗಳ ಆರ್ಭಟ: ಅಡ್ಡಂಡ ಸಿ.ಕಾರ್ಯಪ್ಪ

Exit mobile version