Site icon Vistara News

Student Missing | ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ: 25 ದಿನದ ಬಳಿಕ ಪ್ರಕರಣ ಬೆಳಕಿಗೆ

Student Missing

ಮಂಡ್ಯ : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವ (Student Missing) ಪ್ರಕರಣ, ಬರೋಬ್ಬರಿ 25 ದಿನದ ಬಳಿಕ ಭಾನುವಾರ (ಸೆ.11) ಬೆಳಕಿಗೆ ಬಂದಿದೆ. ಶಾಲೆಯ ಸಿಸಿ ಟಿವಿಯಲ್ಲಿ ಬಾಲಕ ಕ್ಯಾಂಪಸ್ ಒಳಗೆ ಎಂಟ್ರಿಕೊಡುವ ದೃಶ್ಯ ಸೆರೆಯಾಗಿದ್ದು ಹೊರಗೆ ಹೋಗಿರುವ ದೃಶ್ಯವೇ ಇಲ್ಲವಾಗಿದೆ.

ಮಂಡ್ಯ ತಾಲೂಕಿನ ತಂಗಳಗೆರೆ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿಗೂಢವಾಗಿ 9ನೇ ತರಗತಿ ವಿದ್ಯಾರ್ಥಿ ಕಿಶೋರ್‌ ನಾಪತ್ತೆಯಾಗಿದ್ದಾನೆ. ಇದೀಗ 25 ದಿನದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಜು.27ಕ್ಕೆ ಮನೆಗೆ ಬಂದಿದ್ದ ಮಗ ಕಿಶೋರ‌ನನ್ನು ತಂದೆ ಆ.8 ರಂದು ವಾಪಾಸ್ ಶಾಲೆಗೆ ತಂದು ಬಿಟ್ಟಿದ್ದರು. ಪಾಂಡವಪುರ ತಾಲೂಕಿನ ಹಿರೇಮರಳ್ಳಿ ಗ್ರಾಮದಿಂದ ತಂಗಳ ಗೆರೆ ಗ್ರಾಮದ ಶಾಲೆಗೆ ಬಿಟ್ಟು ಬರಲಾಗಿತ್ತು. ನಂತರ ಗಣೇಶ ಹಬ್ಬಕ್ಕೆ ಮಗನನ್ನು ಕರೆದುಕೊಂಡು ಬರಲು ಶಾಲೆಗೆ ಹೋದ ತಂದೆಗೆ ಮಗ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ | Students Missing case | ಮನೆಗೆ ಬರಲ್ಲ ಹುಡುಕಬೇಡಿ; ಪತ್ರ ಬರೆದು ವಿದ್ಯಾರ್ಥಿನಿಯರು ನಾಪತ್ತೆ!

ತಂದೆ ಮಗನ ಬಗ್ಗೆ ವಿಚಾರಿಸಿದಾಗ ಮಗ 20 ದಿನದಿಂದ ಶಾಲೆಗೇ ಬಂದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ನಂತರ ಸಿಸಿಟಿವಿಯಲ್ಲಿ ನೋಡಿದಾಗ ಬಾಲಕ ಕ್ಯಾಂಪಸ್ ಒಳಗೆ ಬರುವ ದೃಶ್ಯ ದಾಖಲುಗೊಂಡಿದೆ. ಆದರೆ ಬಾಲಕ ವಾಪಾಸ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.

20 ದಿನದಿಂದ ವಿದ್ಯಾರ್ಥಿ ಶಾಲೆಗೆ ಬರದಿದ್ದರೂ, ಶಿಕ್ಷಕರು ಪೋಷಕರಿಗೆ ತಿಳಿಸದೇ ಇದ್ದಾರೆ. ಶಿಕ್ಷಕರ ಈ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ‌ ಕೊಠಡಿಯಲ್ಲಿ ಕಿಶೋರ್‌ ಬರೆದಿರುವ ಪತ್ರ ಸಿಕ್ಕಿದ್ದು, ʻಈ ಶಾಲೆಯಲ್ಲಿ ಓದಲು ಇಷ್ಟವಿಲ್ಲ, ಇದನ್ನು ಸಾಕಷ್ಟು ಸಲ ಹೇಳಲು ಪ್ರಯತ್ನಿಸಿದ್ದೇನೆ. ಅಪ್ಪ, ಚಿಕ್ಕಪ್ಪ ದಯವಿಟ್ಟು ನನ್ನನ್ನು ಹುಡುಕಬೇಡಿʼ ಎಂದು ಬರೆಯಲಾಗಿದೆ. ಆದರೆ ಈ ಪತ್ರ ನಮ್ಮ ಮಗ ಬರೆದಿಲ್ಲ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಹಲವು ಅನುಮಾನಗಳನ್ನು ಹುಟ್ಟು ಹಾಕಿರುವ ಬಾಲಕ ನಿಗೂಢ ನಾಪತ್ತೆ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲುಗೊಂಡಿದೆ. ಶಾಲೆಯ ಪ್ರಾಂಶುಪಾಲರ ನಿರ್ಲಕ್ಷ್ಯತೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಹಾಗೂ ಈ ಬಗ್ಗೆ ವರದಿ ಪಡೆದು ಪ್ರಾಂಶುಪಾಲರನ್ನು ಅಮಾನತು ಮಾಡಲು ಡಿಸಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Students Missing case | ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ; ಪೋಷಕರಲ್ಲಿ ಆತಂಕ

Exit mobile version