ಮಂಡ್ಯ: ತರಗತಿ ನಡೆಸಲು ಸೂಕ್ತ ಶಾಲಾ ಕೊಠಡಿಗಳಿಲ್ಲದೆ(school Room) ಮಕ್ಕಳಿಗೆ ಸಾರ್ವಜನಿಕರ ಮನೆ, ಮರಗಳ ಕೆಳಗೆ ಪಾಠ ಮಾಡುವ ಸ್ಥಿತಿ ಜಿಲ್ಲೆಯ ಮದ್ದೂರು ತಾಲೂಕಿನ ಅರಲಿಂಗನದೊಡ್ಡಿ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಶಾಲೆಯಲ್ಲಿ ಸ್ಥಳದ ಅಭಾವದಿಂದ ಮನೆ ಇಲ್ಲವೇ ಪಡಸಾಲೆಯಲ್ಲಿ ಜಾಗ ಕೊಡಿ ಎಂದು ಶಿಕ್ಷಕರು ಗ್ರಾಮಸ್ಥರ ಬಳಿ ಅಲೆದಾಡುವ ಸ್ಥಿತಿ ಉಂಟಾಗಿದೆ. ಅರಳಿ ಮರದಡಿ ಹಾಗೂ ದೇವಸ್ಥಾನದ ಆವರಣದೊಳಗೆ ಪಾಠ ಮಾಡಬೇಕಾಗಿದೆ ದಯನೀಯ ಪರಿಸ್ಥಿತಿ ಇದೆ.
ಇದನ್ನೂ ಓದಿ | ನಿಮ್ಮ ಮಕ್ಕಳಿಗೆ ಬೇಸಿಗೆಯಲ್ಲಿ ಹೇಗೆ ಸಹಾಯ ಮಾಡಬೇಕು?: ಇಲ್ಲಿವೆ ಪ್ರಮುಖ ಟಿಪ್ಸ್
ಎರಡು ವರ್ಷಗಳ ಹಿಂದೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗಾಗಿ ಶಾಲೆ ಕಟ್ಟಡ ಮತ್ತು ಜಾಗ ಸ್ವಾಧೀನವಾಗಿದೆ. ಕಟ್ಟಡ ಕೆಡವಿದ ದಿನವೇ ₹68 ಲಕ್ಷವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿದ್ದರೂ, ಶಾಲಾಭಿವೃದ್ಧಿ ಸಮಿತಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಗಳು ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಇಷ್ಟು ದಿನ ಅರಳಿಮರ, ದೇವಸ್ಥಾನದಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಗ್ರಾಮಸ್ಥರ ಮನೆ ಪಡಸಾಲೆಯಲ್ಲಿ ಪಾಠ ನಡೆಯುತ್ತಿದೆ. ಈ ಮೊದಲು 35 ಗುಂಟೆ ಜಾಗದಲ್ಲಿ ಗ್ರಾಮದ ಶಾಲೆ ಇತ್ತು. ಹೆದ್ದಾರಿಗೆ ಆಕ್ರಮಿಸಿಕೊಂಡ ನಂತರ ಎರಡು ಗುಂಟೆಯಲ್ಲಿ ಬೈ ಪಾಸ್ ಹಾದುಹೋಗಲಿದೆ.
ಇರೋ 1 ಗುಂಟೆ ಜಾಗದಲ್ಲಿ ಶಾಲೆ ಕಟ್ಟುತ್ತೇವೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ತಿಳಿಸುತ್ತಿದ್ದು, ಒಂದು ಗುಂಟೆಯಲ್ಲಿ ಯಾವ ಶಾಲೆ ಕಟ್ಟುತ್ತೀರಾ? 5 ಗುಂಟೆಯನ್ನಾದರೂ ತೆಗೆದುಕೊಂಡು ಶಾಲೆ ಕಟ್ಟಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಜಾಗದಲ್ಲಿ ಶಾಲೆ ಕಟ್ಟುತ್ತೇವೆಂದು ನಿರ್ಮಿತಿ ಕೇಂದ್ರ ಸಿದ್ಧತೆಗೆ ಇಳಿದಿದೆ.
ಕಮೀಷನ್ ಆರೋಪ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಗ್ರಾಮಸ್ಥರು ಕಮಿಷನ್ ಆರೋಪ ಹೊರಿಸುತ್ತಿದ್ದಾರೆ. ಒಂದು ಗುಂಟೆಯಲ್ಲಿ ಶಾಲೆ ನಿರ್ಮಾಣಕ್ಕೆ ಹಾಕಿರುವ ನೀಲಿ ನಕ್ಷೆ ನೋಡಿದ್ರೆ ಆರೋಪ ನಿಜ ಎನ್ನಿಸೋದು ಗ್ಯಾರಂಟಿ. ಕಿರಿಯ ಪ್ರಾಥಮಿಕ ಶಾಲೆ ನಿರ್ಮಾಣಕ್ಕೆ ₹68 ಲಕ್ಷ ಖರ್ಚಿನ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಅದರಲ್ಲಿ ಶೌಚಗೃಹಕ್ಕೆ ಬರೋಬ್ಬರಿ ₹11.26 ಲಕ್ಷ ಅಂದಾಜು ಕೊಟ್ಟಿದ್ದಾರೆ. ಅಡುಗೆ ಮನೆ ನಿರ್ಮಾಣಕ್ಕೆ ₹10.04 ಲಕ್ಷ, ಕೆಳ ಮಹಡಿಗೆ ₹26,03,455, ಮೊದಲ ಮಹಡಿಗೆ ₹16,44,581, ಕಾಂಪೌಂಡ್ ನಿರ್ಮಾಣಕ್ಕೆ ₹4,20,452 ಸೇರಿ ಒಟ್ಟು ₹68 ಲಕ್ಷ ಅಂದಾಜು ಪಟ್ಟಿಯನ್ನು ನಿರ್ಮಿತಿ ಕೇಂದ್ರದಿಂದ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ | ಭಗತ್ ಸಿಂಗ್ ಪಾಠ ಕೈಬಿಟ್ಟಿದ್ದರೆ ಗಲ್ಲಿಗೆ ಹಾಕಿ: ಸುಧಾಕರ್ ಸವಾಲು