Site icon Vistara News

Mangalore Blast | ಆಟೋ ಸ್ಫೋಟದ ಮಾಸ್ಟರ್‌ ಮೈಂಡ್‌ ಶಾರೀಕ್‌; ಮಂಗಳೂರು ಗೋಡೆ ಬರಹ ಪ್ರಕರಣದ 2ನೇ ಆರೋಪಿ ಈತ

shareeq manglore blast case Terror link attack auto blast Aadhar card

ಶಿವಮೊಗ್ಗ: ಮಂಗಳೂರಿನಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ವಿಸ್ಟ್‌ ಸಿಕ್ಕಿದ್ದು, ಶಾರೀಕ್‌ ಎಂಬಾತನೇ ಸ್ಫೋಟದ ಮಾಸ್ಟರ್ ಮೈಂಡ್ ಎಂಬುದು ತಿಳಿದುಬಂದಿದೆ. ಈತ ಮಂಗಳೂರು ಗೋಡೆ ಬರಹ ಪ್ರಕರಣ ಹಾಗೂ ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ಗೆ ಚಾಕು ಇರಿತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಶಾರೀಕ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದಾನೆ. ಈತ ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ‌ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ೨ನೇ ಆರೋಪಿಯಾಗಿದ್ದ ಶಾರೀಕ್‌ನನ್ನು ಬಂಧಿಸಲಾಗಿತ್ತು. ಈತನಿಗೆ 8 ತಿಂಗಳು ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.

2021ರ ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶಾರೀಕ್‌ ನಂತರ ನಾಪತ್ತೆಯಾಗಿದ್ದ. ಈತನಿಗಾಗಿ ಭಾರಿ ಶೋಧ ನಡೆಸಲಾಗಿತ್ತು. ಆದರೆ, ಶಿವಮೊಗ್ಗದಲ್ಲಿ ‌ಆ.15ರಂದು ನಡೆದಿದ್ದ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿತ್ತು. ಆದರೆ, ತಲೆಮರೆಸಿಕೊಂಡಿದ್ದ ಶಾರೀಕ್‌ ಇದುವರೆಗೂ ಪತ್ತೆಯಾಗಿಲ್ಲ.

ಇದನ್ನೂ ಓದಿ | Mangalore Blast | ಇಬ್ಬರು ನುರಿತ ಎಫ್ಎಸ್ಎಲ್ ತಜ್ಞರು ಮಂಗಳೂರಿಗೆ; ತನಿಖೆ ಮತ್ತಷ್ಟು ಚುರುಕು

ಉಗ್ರ ಸಂಘಟನೆಗಳ ಜತೆ ಸಂಪರ್ಕ
ಉಗ್ರ ಸಂಘಟನೆ ಜತೆ ಶಾರೀಕ್ ಸಂಪರ್ಕ ಹೊಂದಿದ್ದ ಎಂಬ ವಿಷಯ ತನಿಖೆ ವೇಳೆ ಬಯಲುಗೊಂಡಿತ್ತು. ಅಲ್ಲದೆ, ಈತ ತನ್ನ ಸಹಚರರಾದ ಮಾಜ್ ಹಾಗೂ ಸೈಯದ್ ಯಾಸೀನ್ ಎಂಬುವವರನ್ನು ಬಳಸಿಕೊಂಡು ಗುಪ್ತ ಸ್ಥಳದಲ್ಲಿ ಬಾಂಬ್‌ ತಯಾರಿಕೆ ನಡೆಸುತ್ತಿದ್ದ. ಆದರೆ, ಪ್ರೇಮ್‌ಸಿಂಗ್‌ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಯಾಸಿನ್‌ ಹಾಗೂ ಮಾಜ್‌ ಸಿಕ್ಕಿಬಿದ್ದಿದ್ದರು. ಆಗ ಶಾರೀಕ್‌ ಹೆಸರನ್ನು ಅವರಿಬ್ಬರೂ ಬಾಯಿ ಬಿಟ್ಟಿದ್ದರು. ಇವರಿಬ್ಬರಿಗೂ ಬಾಂಬ್ ತಯಾರಿಸಲು ಬೇಕಾದ ವಸ್ತುಗಳನ್ನು ಖರೀದಿಸಲು ಶಾರೀಕ್‌ ಹಣ ನೀಡುತ್ತಿದ್ದ ಎಂದು ತಿಳಿದುಬಂದಿತ್ತು. ಸದ್ಯ ಬಂಧಿತ ಆರೋಪಿಗಳಾದ ಸೈಯದ್ ಯಾಸಿನ್, ಮಾಜ್ ಪರಪ್ಪನ ಅಗ್ರಹಾರದಲ್ಲಿದ್ದಾರೆ.

ದಾಳಿ ವೇಳೆ ಶಿವಮೊಗ್ಗ ಪೊಲೀಸರು 14 ಮೊಬೈಲ್, 1 ಡಾಂಗಲ್, 2 ಲ್ಯಾಪ್‌ಟಾಪ್, 1 ಪೆನ್ ಡ್ರೈವ್, ಎಲೆಕ್ಟ್ರಾನಿಕ್ ಉಪಕರಣಗಳು, ಬಾಂಬ್ ತಯಾರಿಸಲು ಬೇಕಾದ ರಿಲೆ ಸರ್ಕಿಟ್, ಬಲ್ಬ್‌ಗಳು, ಮ್ಯಾಚ್ ಬಾಕ್ಸ್, ವೈರ್‌ಗಳು, ಬ್ಯಾಟರಿ ಸೇರಿದಂತೆ ಮತ್ತಿತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಜತೆಗೆ ಆರೋಪಿ ಶಾರೀಕ್ ಕೃತ್ಯಕ್ಕೆ ಬಳಸಿದ್ದ ರಿಟ್ಜ್ ಕಾರನ್ನೂ ವಶಕ್ಕೆ ಪಡೆದಿದ್ದರು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಹಾಲಿ ಎನ್‌ಐಎ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ | Mangalore Blast | ಪಿಎಫ್​ಐ ನಿಷೇಧಕ್ಕೆ ಪ್ರತೀಕಾರವಾ ಈ ಮಂಗಳೂರು ಆಟೋ ಸ್ಫೋಟ? -ಮಾಹಿತಿ ಕಲೆ ಹಾಕುತ್ತಿರುವ ಪೊಲೀಸ್​

Exit mobile version