ನವ ದೆಹಲಿ: ಮಂಗಳೂರು ಬಾಂಬ್ ಸ್ಫೋಟವನ್ನು ಹಿಂದುಗಳ ತಲೆಗೆ ಕಟ್ಟುವ ವ್ಯವಸ್ಥಿತ ಸಂಚು ನಡೆದಿತ್ತು. ಅದು ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ಹೇಳಿದ್ದಾರೆ. ನವ ದೆಹಲಿಯಲ್ಲಿ ಮಾತನಾಡಿದ ಅವರು, ಮೊದಲನೆಯದಾಗಿ ದೇವರು ನಮ್ಮ ಪರವಾಗಿ ಇದ್ದಾನೆ. ಹಾಗಾಗಿ ಅವರ ಪ್ರಯತ್ನ ವಿಫಲವಾಗಿದೆ ಎಂದರು.
ಸ್ಫೋಟದ ರೂವಾರಿಯಾಗಿರುವ ಮೊಹಮ್ಮದ್ ಶಾರಿಕ್ ತಾನೊಬ್ಬ ಹಿಂದು ಎಂಬಂತೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಈ ಬ್ಲಾಸ್ಟ್ ಪ್ಲ್ಯಾನ್ ಮಾಡಿದ್ದ. ಒಂದು ವೇಳೆ ಸ್ಫೋಟ ನಡೆದಿದ್ದರೆ ಅದನ್ನು ಇಟ್ಟಿದ್ದು ಹಿಂದುಗಳೇ ಎಂದು ಪ್ರಚಾರ ಮಾಡುವಂತೆ ಈ ಪ್ಲ್ಯಾನ್ ರೂಪಿಸಲಾಗಿತ್ತು. ಕೆಲವು ತಲೆ ಕೆಟ್ಟ ರಾಜಕಾರಣಿಗಳು ಇದನ್ನ ಹಿಂದೂಗಳ ತಲೆಗೆ ಕಟ್ಟುತ್ತಿದ್ದರು ಎಂದು ಸಿ.ಟಿ. ರವಿ ಹೇಳಿದರು. ಆದರೆ, ಅವರ ಪ್ರಯತ್ನಗಳೆಲ್ಲ ವಿಫಲವಾಗಿವೆ. ಕೊಯಮತ್ತೂರಿನಲ್ಲೂ ಇದೆ ರೀತಿ ಮಾಡಿದ್ದರು. ಆದರೆ, ಬಾಂಬ್ ತೆಗೆದುಕೊಂಡು ಹೋಗುವಾಗಲೇ ಅವನೇ ಸತ್ತು ಹೋದ ಎಂದು ನೆನಪಿಸಿದರು. ಹಾಗಂತ ನಾವು ಇದನ್ನು ನಿರ್ಲಕ್ಷಿಸುವಂತಿಲ್ಲ ಎಂದರು ಸಿ.ಟಿ. ರವಿ.
ʻʻಇದು ಐಸಿಸ್ ಕೃತ್ಯ ಅನ್ನೋದ್ರಲ್ಲಿ ಅನುಮಾನ ಇಲ್ಲ. ಭಯೋತ್ಪಾದಕ ಚಟುವಟಿಕೆಯನ್ನು ಭಾರತದಿಂದಲೇ ಕಿತ್ತೊಗೆಯಬೇಕು. ಹಿಂದೆ ಸೆಮಿ ಮೂಲಕ ಭಯೋತ್ಪಾದಕ ಚಟುವಟಿಕೆ ಮಾಡುತ್ತಾ ಇದ್ದರು. ಆದರೆ, ಈಗ ಪಿಎಫ್ಐ ಮೂಲಕ ಇಂಥ ಕೃತ್ಯ ಮಾಡ್ತಾ ಇದ್ದಾರೆ. ಇವೆಲ್ಲವನ್ನೂ ತಡೆಯಲೇಬೇಕುʼʼ ಎಂದು ಸಿ.ಟಿ. ರವಿ ಹೇಳಿದರು.
ನಮಗೆ ರಾಷ್ಟ್ರದ ಗಡಿ ಮುಖ್ಯ
ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಗಡಿ ವಿವಾದದ ಬಗ್ಗೆ ನಮ್ಮ ಮುಖ್ಯಮಂತ್ರಿ ಏನು ಉತ್ತರ ಕೊಡಬೇಕೋ ಅದನ್ನು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರು ಸುರಕ್ಷಿತವಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರು ಸೇಫ್ ಆಗಿದ್ದಾರೆ ಎಂದರು.
ʻʻನಾವು ನಮ್ಮ ಒಳಗಿನ ಗಡಿಗಿಂತಲೂ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ಅದನ್ನು ಹೇಗೆ ವಾಪಸ್ ತರಬೇಕು ಅನ್ನುವ ಬಗ್ಗೆ ಯೋಚನೆ ಮಾಡಬೇಕು. ಅಲ್ಲಿನ ಜನರು ಸೇಫ್ ಆಗಿಲ್ಲ. ನಾವು ಅದರ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತೇವೆʼʼ ಎಂದರು ಸಿ.ಟಿ. ರವಿ. ಕರ್ನಾಟಕದವರು ನಾವು ಕರ್ನಾಟಕ ವಿಷಯದ ಬಗ್ಗೆ ಯೋಚನೆ ಮಾಡುತ್ತೇವೆ. ಮಹಾರಾಷ್ಟ್ರದವರು ಅವರ ರಾಜ್ಯದ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ, ದೇಶ ಅಂತ ಬಂದಾಗ ಭಾರತ್ ಮಾತಾ ಕಿ ಜೈ ಎನ್ನುತ್ತೇವೆʼʼ ಎಂದು ಸಿ.ಟಿ. ರವಿ ನುಡಿದರು. ಗಡಿ ವಿವಾದದ ಬಗ್ಗೆ ನಾನು ಸಾರ್ವಜನಿಕವಾಗಿ ಹೆಚ್ಚು ಚರ್ಚೆ ಮಾಡಲು ಬಯಸುವುದಿಲ್ಲ ಎಂದರು.
ಪರಮೇಶ್ ಮೇಸ್ತ ಸಾವಿನಲ್ಲಿ ಕಾಂಗ್ರೆಸ್ ರಾಜಕಾರಣ
ಹೊನ್ನಾವರದ ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡಿದೆ ಅಂತ ಕಾಂಗ್ರೆಸ್ ನಮ್ಮ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿತ್ತು. ಆದ್ರೆ ನಾವು ಸಿಬಿಐಯನ್ನು ದುರ್ಬಳಕೆ ಮಾಡಿಲ್ಲ ಅನ್ನೋದಕ್ಕೆ ಪರೇಶ್ ಮೇಸ್ತ, ಡಿ ಕೆ ರವಿ ಕೇಸ್ ಗಳೇ ಸಾಕ್ಷಿ ಎಂದರು ಸಿ.ಟಿ. ರವಿ.
ಗುಜರಾತ್‌ನಲ್ಲಿ ಗೆಲ್ಲೋದು ನಾವೇ, ಆಪ್ ಲೆಕ್ಕಕ್ಕಿಲ್ಲ
ʻʻಕಳೆದ ಒಂದು ತಿಂಗಳಿಂದ ಗುಜರಾತ್‌ನಲ್ಲಿ ಓಡಾಡಿ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿನೇ ಗೆಲ್ಲೋದು ಅಂತ ಸ್ಪಷ್ಟವಾಗಿದೆ. ಗುಜರಾತ್ ಕಾಂಗ್ರೆಸ್‌ನಲ್ಲಿ ಯಾರು ಕೆಲಸ ಮಾಡ್ತಿದ್ದಾರೆ ಅಂತಾನೆ ಅವರಿಗೇ ಗೊತ್ತಿಲ್ಲ. ಇನ್ನು ಎಎಪಿ ಸೌಂಡ್ ಜಾಸ್ತಿ, ಗ್ರೌಂಡ್‌ನಲ್ಲಿ ಕಡಿಮೆʼʼ ಎಂದು ಗುಜರಾತ್ ಚುನಾವಣೆಯನ್ನು ವಿಶ್ಲೇಷಿಸಿದರು. ಗುಜರಾತ್‌ನಲ್ಲಿ ಬಿಜೆಪಿ 14 ಕ್ಕೂ ಹೆಚ್ಚು ಸ್ಥಾನ ಲಭಿಸಲಿದೆ ಎಂದು ಲೆಕ್ಕ ಹೇಳಿದರು.
ಇದನ್ನೂ ಓದಿ | ವೋಟ್ ಸಿಗುತ್ತದೆಂದರೆ ಸಿದ್ದರಾಮಯ್ಯ ಸುನ್ನತ್‌ಗೂ ರೆಡಿ: ಸಿ.ಟಿ ರವಿ ಗೇಲಿ