ಶಿವಮೊಗ್ಗ: ಮಂಗಳೂರಿನ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣದ ಮಾಸ್ಟರ್ ಮೈಂಡ್ ತೀರ್ಥಹಳ್ಳಿಯ ಶಾರೀಕ್ ಎಂಬುದು ಗೊತ್ತಾಗುತ್ತಿದ್ದಂತೆ ಶಿವಮೊಗ್ಗದಿಂದ ಮಂಗಳೂರಿಗೆ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡವೊಂದು ತೆರಳಿದೆ. ಅಲ್ಲದೆ, ಮಂಗಳೂರಿನಲ್ಲಿ ಸಿಕ್ಕಿರುವ ವ್ಯಕ್ತಿ ಶಾರೀಕ್ ಆಗಿದ್ದಾನೆಯೇ ಎಂಬ ಅನುಮಾನವೂ ಪೊಲೀಸರಿಗೆ ಮೂಡಿದೆ.
ಈ ಹಿಂದೆ ಪ್ರೇಮ್ ಸಿಂಗ್‌ಗೆ ಚಾಕು ಇರಿದಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜ್ ಹಾಗೂ ಸೈಯದ್ ಯಾಸೀನ್ ಎಂಬುವವರಿಂದ ಶಾರೀಕ್ ಹೆಸರು ಬಹಿರಂಗಗೊಂಡಿತ್ತು. ಈ ಶಾರೀಕ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದಾನೆ. ಈತ ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ೨ನೇ ಆರೋಪಿಯಾಗಿದ್ದ ಶಾರೀಕ್‌ನನ್ನು ಬಂಧಿಸಲಾಗಿತ್ತು. ಈತನಿಗೆ 8 ತಿಂಗಳು ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.
ಈತ ತನ್ನ ಸಹಚರರಾದ ಮಾಜ್ ಹಾಗೂ ಸೈಯದ್ ಯಾಸೀನ್‌ಗೆ ಬಾಂಬ್ ತಯಾರಿಕೆ ತರಬೇತಿಯನ್ನು ಕೊಡುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಹಣವನ್ನೂ ಕೊಡುತ್ತಿದ್ದ ಎಂಬ ವಿಚಾರ ಬಯಲಾಗಿತ್ತು. ಶಿವಮೊಗ್ಗ ಸುತ್ತಮುತ್ತ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದನೇ ಎಂಬ ವಿಚಾರವಾಗಿ ತನಿಖೆ ನಡೆಯುತ್ತಿತ್ತು. ಆದರೆ, ಶಾರೀಕ್ ತಲೆಮರೆಸಿಕೊಂಡಿದ್ದ.
ಮಂಗಳೂರಿನಲ್ಲಿ ಗಾಯಗೊಂಡಿರುವ ವ್ಯಕ್ತಿ ಶಾರೀಕ್ ಆಗಿದ್ದಾನೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಡಿವೈಎಸ್ಪಿ ಶಾಂತವೀರ್ ನೇತೃತ್ವದ ತಂಡವು ಮಂಗಳೂರಿಗೆ ತೆರಳಿದೆ. ಶಿವಮೊಗ್ಗ ಶಂಕಿತ ಉಗ್ರರ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಶಾಂತವೀರ್ ಐಓ ಆಗಿದ್ದಾರೆ. ಈಗ ಗಾಯಗೊಂಡಿರುವ ವ್ಯಕ್ತಿ ಶಾರೀಕ್ ಹೌದೇ ಅಥವಾ ಬೇರೆ ಯಾವುದೋ ಪ್ರಯಾಣಿಕನೇ ಎಂಬುದು ಸಹ ತಿಳಿದುಬಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ | Mangalore Blast | ಆಟೋದಲ್ಲಿದ್ದ ಪ್ರಯಾಣಿಕ 2 ಶರ್ಟ್ ಧರಿಸಿದ್ದ; ಸ್ಫೋಟದ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಸಂಗತಿಗಳಿವು