ಬೆಂಗಳೂರು: ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ (Cooker bomb blast) ರೂವಾರಿ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರಿಕ್‌ನ ಬಳಿ ಪತ್ತೆಯಾದ ಪೆನ್ ಡ್ರೈವ್‌ನಲ್ಲಿರುವ ಮಾಹಿತಿಗಳು ಸ್ವತಃ ಎನ್‌ಐಎ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ಅವನ ವಿಚಾರಣೆಯ ವೇಳೆ ಆತನಲ್ಲಿದ್ದ 80 ಜಿಬಿ ಸಾಮರ್ಥ್ಯದ ಪೆನ್ ಡ್ರೈವ್ ಮಾಹಿತಿ ಸಿಕ್ಕಿ ಬಳಿಕ ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಶಾರಿಕ್ ಮತ್ತು ಟೀಮ್ ಯಾರಿಂದ ಪ್ರಚೋದನೆ ಪಡೆಯುತ್ತಿತ್ತು, ಮಾಹಿತಿಗಳನ್ನು ಹೇಗೆ ಕಲೆ ಹಾಕುತ್ತಿತ್ತು ಎಂಬಿತ್ಯಾದಿ ವಿಚಾರಗಳ ಒಳಸುಳಿಗಳು ಸಿಕ್ಕಿವೆ.
ಪೆನ್ ಡ್ರೈವ್ನಲ್ಲಿ ಪ್ರಚೋದನಾಕರಿ ಭಾಷಣಗಳು, ಕಾನೂನು ಸುವ್ಯವಸ್ಥೆ ಹದಗೆಡಿಸಲು ಮಾಡಬೇಕಾಗಿರುವ ಪ್ಲಾನ್‌ಗಳು ಹಾಗು ಹಿಂದೂ ಮುಖಂಡರು ಮಾತನಾಡಿರುವ ಭಾಷಣದ ತುಣುಕುಗಳೂ ಸಿಕ್ಕಿದೆ. ಅದರಲ್ಲೂ 2017ನೇ ಇಸವಿಯಲ್ಲಿ ತೀರ್ಥಹಳ್ಳಿಯಲ್ಲಿ ಮೌಲ್ವಿಯೊಬ್ಬ ಪ್ರಚೋದನಕಾರಿಯಾಗಿ ಭಾಷಣವನ್ನು ಮಾಡಿದ್ದ.
ಆ ಭಾಷಣದಲ್ಲಿ ಕಾಫಿರರ ವಿರುದ್ಧ ಜಿಹಾದ್ ಕೈಗೊಳ್ಳಿ ಧರ್ಮ ಉಳಿಸಿ ಎಂದೆಲ್ಲಾ ಯುವಕರಿಗೆ ಕರೆ ಕೊಟ್ಟಿದ್ದ. ಇದರಿಂದ ಕೆಲವು ಯುವಕರು ಉಗ್ರವಾದಕ್ಕೆ ವಾಲುವಂತೆ ಮಾಡಿತ್ತು. ಹೀಗಾಗಿ ಆ ಮೌಲ್ವಿಗಾಗಿ ಎನ್‌ಐಎ ಅಧಿಕಾರಿಗಳು ತೀವ್ರ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಶಿವಮೊಗ್ಗದ ಕಾಡುಗಳಲ್ಲಿ ವಾಸ
ಮೊಹಮ್ಮದ್ ಶಾರಿಕ್, ಮಾಝ್ ಮತ್ತು ಮೊಹ್ಸಿನ್ ಎಂಬ ಈ ಶಂಕಿತ ಉಗ್ರರು ಶಿವಮೊಗ್ಗ ಪರಿಸರದಲ್ಲಿ ಟ್ರಯಲ್ ಬ್ಲಾಸ್ಟ್‌ಗಳನ್ನು ನಡೆಸಿದ್ದು, ಕೆಲವು ಕಡೆ ವಾಹನಗಳಿಗೆ ಬೆಂಕಿ ಹಚ್ಚಿದ್ದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದರ ಜತೆಗೆ ಶಿವಮೊಗ್ಗದ ಕಾಡುಗಳಲ್ಲಿ ಶಾರೀಕ್, ಮಾಝ್ ಸೇರಿದಂತೆ ಹಲವು ಶಂಕಿತರು ನೆಲೆಸಿ ಪ್ಲ್ಯಾನಿಂಗ್ ಮಾಡುತ್ತಿದ್ದರು. ಈ ವೇಳೆ ವೀರಪ್ಪನ್ ಮಾದರಿಯಲ್ಲಿ ಆಹಾರವನ್ನು ಸಂಗ್ರಹಣೆ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಕಾಡುಗಳ್ಳ ವೀರಪ್ಪನ್ ಕೂಡ ಪ್ಲಾಸ್ಟಿಕ್ ಡ್ರಮ್ಗಳನ್ನು ನೆಲದಲ್ಲಿ ಹುದುಗಿಸಿ ಅದರಲ್ಲಿ ಆಹಾರ ಪದಾರ್ಥವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟಿ ಇಡುತ್ತಿದ್ದ. ಇದೇ ವಿಧಾನವನ್ನು ಉಪಯೋಗಿಸಿರುವ ಶಂಕಿತರು, ಶಿವಮೊಗ್ಗದ ಕಾಡುಗಳಲ್ಲಿ ಆಹಾರವನ್ನು ಬಚ್ಚಿಡುತ್ತಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ.
ನವೆಂಬರ್ 19ರ ಸಂಜೆ 4.30ಕ್ಕೆ ಮಂಗಳೂರಿನ ನಾಗುರಿ ಎಂಬಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಸಂಭವಿಸಿತ್ತು. ಈ ವೇಳೆ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಇನ್ನೊಬ್ಬ ಗಾಯಗೊಂಡಿದ್ದ. ಹಾಗೆ ಗಾಯಗೊಂಡವನನ್ನು ಬಳಿಕ ಮೊಹಮ್ಮದ್ ಶಾರಿಕ್ ಎಂದು ಗುರುತಿಸಲಾಯಿತು. ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ.
ಇದನ್ನೂ ಓದಿ : ಮಂಗಳೂರು ಸ್ಪೋಟ | ಕೇರಳದ ಕಾಡುಗಳೇ ಉಗ್ರರಿಗೆ ತರಬೇತಿ ಶಾಲೆ!