Site icon Vistara News

ಮಂಗಳೂರು ಸ್ಫೋಟ | ಶಾರಿಕ್‌ ಹೊರಟಿದ್ದೆಲ್ಲಿಗೆ? ಟಾರ್ಗೆಟ್‌ ಯಾವುದು? ಎನ್‌ಐಎ ಎಫ್‌ಐಆರ್‌ನಲ್ಲಿ ಸಿಗದ ಸ್ಪಷ್ಟ ಸುಳಿವು

Mangalore Blast

ಮಂಗಳೂರು: ನವೆಂಬರ್‌ ೧೯ರ ಸಂಜೆ ೪.೨೯ಕ್ಕೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಮೊದಲ ಎಫ್‌ಐಆರ್‌ ದಾಖಲಿಸಿದೆ. ಆದರೆ, ಈ ಪ್ರಥಮ ಮಾಹಿತಿ ವರದಿಯಲ್ಲಿ ತೀರ್ಥಹಳ್ಳಿ ಮೂಲದ ಉಗ್ರ ಮೊಹಮ್ಮದ್‌ ಶಾರಿಕ್‌ ಎಲ್ಲಿಗೆ ಹೋಗುತ್ತಿದ್ದ, ಅವನ ನಿಜವಾದ ಟಾರ್ಗೆಟ್‌ ಯಾವುದಿತ್ತು ಎನ್ನುವುದರ ಬಗ್ಗೆ ಸ್ಪಷ್ಟ ಸುಳಿವುಗಳು ಸಿಗುತ್ತಿಲ್ಲ.

ಮೈಸೂರಿನಿಂದ ಸರ್ಕಾರಿ ಬಸ್‌ನಲ್ಲಿ ಬಂದ ಶಾರಿಕ್‌ ಪಡೀಲ್‌ ಬಸ್‌ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಪುರುಷೋತ್ತಮ ಪೂಜಾರಿ ಅವರ ರಿಕ್ಷಾದಲ್ಲಿ ಪಂಪ್‌ವೆಲ್‌ ಕಡೆಗೆ ಬರುತ್ತಿದ್ದ ವೇಳೆ ನಾಗುರಿಯ ಅಪಾರ್ಟ್‌ಮೆಂಟ್‌ ಒಂದರ ಮುಂದೆ ಸ್ಫೋಟ ಸಂಭವಿಸಿತ್ತು. ಶಾರಿಕ್‌ ಹಿಡಿದುಕೊಂಡಿದ್ದ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿದ್ದರಿಂದ ಅನಾಹುತ ನಡೆದಿತ್ತು. ಶಾರಿಕ್‌ ಮತ್ತು ಪುರುಷೋತ್ತಮ ಪೂಜಾರಿ ಅವರು ಗಾಯಗೊಂಡಿದ್ದರೆ ಆಟೋರಿಕ್ಷಾಕ್ಕೂ ಹಾನಿಯಾಗಿತ್ತು.

ಇದೀಗ ಚಾಲಕ ಪುರುಷೋತ್ತಮ ಅವರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ದೆಹಲಿಯ ಎನ್‌ಐಎ ಕಚೇರಿಯಲ್ಲಿ ನವೆಂಬರ್‌ ೨೩ರಂದು ಎಫ್‌ಐಆರ್‌ದಾಖಲಾಗಿದೆ. ಐಪಿಸಿ ಸೆಕ್ಷನ್‌ 120ಬಿ ಮತ್ತು 307 ಹಾಗೂ ಸ್ಫೋಟಕ ವಸ್ತುಗಳ ಕಾಯಿದೆ ಸೆಕ್ಷನ್‌ ೩,೪ ಮತ್ತು ೫ರ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಆತ ಆಟೋ ರಿಕ್ಷಾದ ಮೂಲಕ ಪಂಪ್‌ವೆಲ್‌ಗೆ ಹೊರಟಿದ್ದ ಎಂದಷ್ಟೇ ಹೇಳಲಾಗಿದೆ. ಆತನ ನಿಜ ಗುರಿ ಏನು ಎನ್ನುವುದರ ಸ್ಪಷ್ಟ ವಿವರಗಳಿಲ್ಲ. ಪುರುಷೋತ್ತಮ ಪೂಜಾರಿ ಅವರು, ಶಾರಿಕ್‌ ತನ್ನನ್ನೇ ಕೊಲ್ಲಲು ಪ್ಲ್ಯಾನ್‌ ನಡೆಸಿದ್ದ ಎಂದು ಮಾಹಿತಿ ನೀಡಿದ್ದಾರೆ.

ಸ್ಫೋಟಗೊಂಡ ಸ್ಥಳದಲ್ಲಿ ಐದು ಲೀಟರ್ ಕುಕ್ಕರ್, ಮೂರು 9 ವೋಲ್ಟ್ ಸಾಮರ್ಥ್ಯದ ಬ್ಯಾಟರಿಗಳು, ಹಾನಿಗೊಂಡ ಸರ್ಕ್ಯೂಟ್ ಹಾಗೂ ಐಇಡಿ ತಯಾರಿಕೆಗೆ ಬೇಕಾದ ಇತರ ಸಾಮಗ್ರಿಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಲಾಗಿದೆ. ಜತೆಗೆ ಮೈಸೂರಿನಲ್ಲಿ ಶಾರಿಕ್‌ ತಂಗಿದ್ದ ಬಾಡಿಗೆ ಮನೆಯನ್ನು ಶೋಧ ಮಾಡಿದಾಗ ಐಇಡಿ ತಯಾರಿಕೆಗೆ ಬಳಸುವ ರಾಸಾಯನಿಕಗಳು, ಎಲೆಕ್ಟ್ರಿಕ್ ಐಟಮ್ಸ್, ಮೆಕ್ಯಾನಿಕಲ್ ವಸ್ತುಗಳು ಪತ್ತೆಯಾಗಿವೆ ಎಂದು ವಿವರಿಸಲಾಗಿದೆ.

ಆಟೋ ಚಾಲಕ ಸೇರಿ ಹಲವರ ಹತ್ಯೆಗೆ ಸಂಚು?
ಎನ್‌ಐಎ ಸಲ್ಲಿಸಿದ ಎಫ್‌ಐಆರ್‌ ಪ್ರಕರಣ ಬಾಂಬ್‌ ಸ್ಫೋಟದ ಮೂಲಕ ಆಟೋ ಚಾಲಕ ಸೇರಿ ಹಲವ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆಟೋ ಚಾಲಕ ಸೇರಿ ಇತರರ ಕೊಲೆ ಮಾಡುವ ಉದ್ದೇಶದಿಂದ ಸ್ಫೋಟ ನಡೆದಿದೆ. ಶಾರಿಕ್‌ ದೊಡ್ಡ ಮಟ್ಟದ ಒಳಸಂಚು ರೂಪಿಸಿ ಈ ಕೃತ್ಯವನ್ನು ಎಸಗಿದ್ದ ಎಂದು ಹೇಳಲಾಗಿದೆ.

ಆಟೋ ಚಾಲಕ ಪುರುಷೋತ್ತಮ ಪೂಜಾರಿ ಹೇಳಿದ್ದೇನು?
ʻʻನವೆಂಬರ್ 1೯ರಂದು ನಾನು ಎಂದಿನಂತೆ ಪಂಪ್ ವೆಲ್ ಬಳಿ ಹೋಗಿದ್ದೆ. ಒಬ್ಬ ಪ್ರಯಾಣಿಕನನ್ನು ರೈಲ್ವೆ ಸ್ಟೇಷನ್ ಗೆ ಬಿಟ್ಟು ಬರುವಾಗ ಅಪರಿಚಿತ ವ್ಯಕ್ತಿ ಆಟೋಗೆ ಕೈಹಿಡಿದ. ಕೈಲಿ ಕಪ್ಪು ಬಣ್ಣದ ಬ್ಯಾಗ್ ಹಿಡಿದು ಆಟೊ ನಿಲ್ಲಿಸಿದ್ದ. ಪಂಪ್ ವೆಲ್ ಗೆ ಹೋಗಬೇಕೆಂದು ಹೇಳಿದ್ದ. ಆತನನ್ನು ಕೂರಿಸಿಕೊಂಡು ಪಂಪ್ ವೆಲ್ ಕಡೆ ಹೋಗುತ್ತಿರುವ ವೇಳೆ ರೋಹನ್ ಸ್ಕ್ವಾರ್ ಕಟ್ಟಡ ಎದುರು ಸ್ಪೋಟ ಸಂಭವಿಸಿತ್ತು. ಕೂಡಲೇ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿತ್ತು. ಏನಾಯ್ತು ಅಂತ ಆಟೋದಿಂದ ಇಳಿದು ನೋಡುವಷ್ಟರಲ್ಲಿ ಹಿಂಬದಿ ಕುಳಿತಿದ್ದ ವ್ಯಕ್ತಿಗೂ ಬೆಂಕಿ ಹೊತ್ತಿಕೊಂಡಿತ್ತು. ಬಳಿಕ ಸಾರ್ವಜನಿಕರು ಇಬ್ಬರನ್ನೂ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲು ಮಾಡಿದರು. ಇಬ್ಬರಿಗೂ ಸುಟ್ಟಗಾಯಗಳಾಗಿದ್ದವುʼʼ ಎಂದು ಘಟನೆಯ ವಿವರ ನೀಡಿದ್ದಾರೆ ಪುರುಷೋತ್ತಮ ಪೂಜಾರಿ.

ʻಹಿಂಬದಿ ಕುಳಿತಿದ್ದ ವ್ಯಕ್ತಿಯ ಹೆಸ್ರು ಪ್ರೇಮ್ ರಾಜ್ ಎಂದು ತಿಳಿದು ಬಂದಿತ್ತು. ಪ್ರೇಮ್ ರಾಜ್ ಯಾವುದೋ ದುರುದ್ದೇಶದಿಂದ ನನ್ನನ್ನ ಕೊಲೆ ಮಾಡಲು ಬಂದಿದ್ದ. ಆತ ತಂದಿದ್ದ ಸ್ಫೋಟಕ ವಸ್ತುವಿನಿಂದ ನನಗೆ ಗಾಯಗಳಾಗಿದ್ದು, ಆಟೋ ರಿಕ್ಷಾಗೆ 50 ಸಾವಿರ ರೂಪಾಯಿಯಷ್ಟು ಹಾನಿಯಾಗಿದೆʼʼ ಎಂದಿದ್ದಾರೆ.

Exit mobile version