ಮಂಗಳೂರು/ಶಿವಮೊಗ್ಗ: ಮಂಗಳೂರಿನಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ (Mangalore Blast) ಲಘು ಐಇಡಿ ಬಾಂಬ್ ಅನ್ನು ಬಳಸಲಾಗಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಈ ಪ್ರಕರಣವನ್ನು ಎನ್‌ಐಎ ತಂಡಕ್ಕೆ ವಹಿಸಿದ್ದು, ಬೆಂಗಳೂರಿನಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ (ನ.೨೦) ಆಗಮಿಸಿದ್ದಾರೆ. ಆಟೋ ಸ್ಫೋಟಗೊಂಡ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ನಾಲ್ವರು ಅಧಿಕಾರಿಗಳ ತಂಡವು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದೆ. ಇವರಲ್ಲಿ ಒಬ್ಬರು ಮಹಿಳಾ ಅಧಿಕಾರಿಯೂ ಇದ್ದಾರೆ. ಈಗ ಮಂಗಳೂರು ಪೊಲೀಸರಿಂದ ಘಟನೆ ಹಾಗೂ ಇದುವರೆಗೆ ನಡೆದ ತನಿಖೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು, “ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಭಯೋತ್ಪಾದನಾ ಕೃತ್ಯ ಎಂಬುದು ದೃಢಪಟ್ಟಿದೆ. ಇದು ಆಕಸ್ಮಿಕ ಸ್ಫೋಟವಲ್ಲ, ಗಂಭೀರವಾಗಿ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದನಾ ಕೃತ್ಯವಾಗಿದೆ ಎಂಬುದು ತಿಳಿದುಬಂದಿದೆ. ಕೇಂದ್ರ ಏಜೆನ್ಸಿಗಳ ಜತೆಗೂಡಿ ಕರ್ನಾಟಕ ರಾಜ್ಯ ಪೊಲೀಸರು ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | Mangalore Blast | ಮಂಗಳೂರಿನ ಆಟೊ ರಿಕ್ಷಾದಲ್ಲಿ ಲಘು ಐಇಡಿ ಬಾಂಬ್ ಸ್ಫೋಟ
ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿಗೆ ಭೇಟಿ ನೀಡಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಫೋಟ ಪ್ರಕರಣವನ್ನು ರಾಜ್ಯ ಗೃಹ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಉಗ್ರ ಕೃತ್ಯದ ಆಯಾದಲ್ಲಿಯೇ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಈಗಾಗಲೇ ಪೊಲೀಸರು ಹಲವಾರು ರೀತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದು, ನಗರದ ಪ್ರಮುಖ ಬೀದಿಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಬಾಂಬ್ ನಿಷ್ಕ್ರಿಯ ದಳ ತಜ್ಞರು ಭೇಟಿ ನೀಡಿದ್ದು, ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.
ಕೇಂದ್ರ ಭದ್ರತಾ ಪಡೆ ಜತೆ ಜಂಟಿ ತನಿಖೆ
ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇದು ಮೇಲ್ನೋಟಕ್ಕೆ ಭಯೋತ್ಪಾದನಾ ಕೃತ್ಯ ಎಂದು ಕಂಡುಬಂದಿದ್ದು, ಎಲ್ಲ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ಹೇಳಿದರು.
ಇದನ್ನೂ ಓದಿ | Mangalore blast | ಮಂಗಳೂರಿನಲ್ಲಿ ಆಟೊ ರಿಕ್ಷಾ ಸ್ಫೋಟ ಪ್ರಕರಣ ಭಯೋತ್ಪಾದಕ ಕೃತ್ಯ
ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ನಮ್ಮ ಮಂಗಳೂರು ಪೊಲೀಸರು ಇದರ ಹಿನ್ನೆಲೆಯನ್ನು ಭೇದಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಕರಣದ ಹಿನ್ನೆಲೆ ಬಹಳ ದೊಡ್ಡದಿದೆ. ಭಯೋತ್ಪಾದನಾ ಸಂಘಟನೆಗಳ ಲಿಂಕ್ ಇದರ ಹಿಂದಿದೆ ಎಂಬ ಸೂಚನೆ ಕಂಡು ಬರುತ್ತಿದೆ. ಈ ಸಂಬಂಧ ಕೇಂದ್ರ ಭದ್ರತಾ ಪಡೆ ಜತೆಗೆ ಮಾತುಕತೆ ನಡೆದಿದೆ. ಅವರೂ ಸಹ ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಒಂದೆರಡು ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಕರಾವಳಿ ಭಾಗದಲ್ಲಿ ಈ ರೀತಿಯ ಚಟುವಟಿಕೆ ಹಲವಾರು ವರ್ಷಗಳಿಂದ ನಡೆಯುತ್ತಿವೆ. ಈ ಬಗ್ಗೆಯೂ ತನಿಖೆ ನಡೆದಿದೆ. ಬಹಳ ಬೇಗ ಈ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಇದನ್ನೂ ಓದಿ | Beef Stall | ಮಂಗಳೂರಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಬೀಫ್ ಸ್ಟಾಲ್; ವಿಶ್ವ ಹಿಂದೂ ಪರಿಷತ್ ಕೆಂಡಾಮಂಡಲ