ಬೆಂಗಳೂರು: ಮಂಗಳೂರಿನಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣದಲ್ಲಿ ಕೇಳಿಬಂದಿರುವ ಹುಬ್ಬಳ್ಳಿ ಮೂಲದ, ತುಮಕೂರಿನಲ್ಲಿ ರೇಲ್ವೆ ನೌಕರರಾಗಿರುವ ಪ್ರೇಮ್ ರಾಜ್ ಒಬ್ಬ ಸಂತ್ರಸ್ತನಷ್ಟೇ, ಅವರಿಗೂ ಮಂಗಳೂರು ಆಟೋ ಸ್ಫೋಟ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರವೀಣ್ ಸೂದ್, ಪ್ರೇಮ್ ರಾಜ್ ತನ್ನ ಗುರುತಿನ ಚೀಟಿಯನ್ನು ಕಳೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ಬಲಿಪಶುವಾಗಿದ್ದಾನೆ. ಹೀಗಾಗಿ ಆತನಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಪ್ರೇಮ್ ರಾಜ್ ಹಾಗೂ ಕುಟುಂಬದವರು ನಿಟ್ಟುಸಿರು ಬಿಡುವಂತಾಗಿದೆ.
ಪ್ರೇಮ್ ರಾಜ್‌ಗೆ ಕರೆ ಮಾಡಿದ್ದ ಅಲೋಕ್ ಕುಮಾರ್
ಸ್ಫೋಟ ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಗಾಯಾಳು ಬಳಿ ಸಿಕ್ಕಿದ್ದ ಆಧಾರ್ ಕಾರ್ಡ್‌ನಲ್ಲಿ ಪ್ರೇಮ್ ರಾಜ್ ಹುಟಗಿ ಹೆಸರು ಇತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಾಗ ಅದು ನಕಲಿ ಎಂದು ತಿಳಿದುಬಂದಿತ್ತು. ಅಸಲಿ ಪ್ರೇಮ್ ರಾಜ್ ತುಮಕೂರಿನ ರೈಲ್ವೆ ವಿಭಾಗದಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ವಿಷಯ ಗಮನಕ್ಕೆ ಬಂದಿತ್ತು. ಹೀಗಾಗಿ ಪ್ರೇಮ್ ರಾಜ್‌ಗೆ ಎಡಿಜಿಪಿ ಅಲೋಕ್ ಕುಮಾರ್ ಸ್ವತಃ ಕರೆ ಮಾಡಿ ಮಾಹಿತಿ ಪಡೆದಿದ್ದರು.
ಇದನ್ನೂ ಓದಿ | Mangalore blast | ಮಂಗಳೂರು ಸ್ಫೋಟ ಗುಪ್ತಚರ ವೈಫಲ್ಯದ ಫಲ: ಸಿದ್ದರಾಮಯ್ಯ ಆರೋಪ
ತಮ್ಮ ಆಧಾರ್ ಕಾರ್ಡ್ ಕಳೆದುಹೋಗಿದ್ದರ ಬಗ್ಗೆ ಅಲೋಕ್ ಕುಮಾರ್ ಅವರಿಗೆ ಪ್ರೇಮ್ ರಾಜ್ ಮಾಹಿತಿ ನೀಡಿದ್ದರು. ಇದಕ್ಕಾಗಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ವಿಷಯ ತಿಳಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೇಮ್ ರಾಜ್ ಅವರು ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರನ್ನು ಭೇಟಿ ಮಾಡಿ, ಈ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಎರಡು ಬಾರಿ ಕಳೆದಿತ್ತು ಆಧಾರ್ ಕಾರ್ಡ್
ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಬರುವಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದಾಗಿ ಪ್ರೇಮ್ ರಾಜ್ ಹುಟಗಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಅರ್ಜಿ ಹಾಕಿ ಆಧಾರ್ ಕಾರ್ಡ್ ಅನ್ನು ಪಡೆದುಕೊಂಡಿದ್ದರು. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು ಎನ್ನಲಾಗಿದೆ.
ತಮ್ಮ ಪಾತ್ರ ಇಲ್ಲವೆಂದಿದ್ದ ಪ್ರೇಮ್ ರಾಜ್
ಪ್ರಕರಣದ ಬಗ್ಗೆ “ವಿಸ್ತಾರ ನ್ಯೂಸ್” ಜತೆ ಮಾತನಾಡಿದ ಪ್ರೇಮ್ ರಾಜ್ ಹುಟಗಿ, ನನಗೆ ಶನಿವಾರ ರಾತ್ರಿ ಎಡಿಜಿಪಿ ಅಲೋಕ್ ಕುಮಾರ್ ಅವರಿಂದ ದೂರವಾಣಿ ಕರೆ ಬಂದಿತ್ತು. ಘಟನೆ ಬಗ್ಗೆ ವಿವರಣೆಯನ್ನು ಪಡೆದುಕೊಂಡರು. ಕೂಡಲೇ ಎಸ್‌ಪಿ ಅವರನ್ನು ಭೇಟಿ ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ಮಾಡಿ ಮಾಹಿತಿ ನೀಡಿದ್ದೇನೆ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | Mangalore Blast | ಇಬ್ಬರು ನುರಿತ ಎಫ್ಎಸ್ಎಲ್ ತಜ್ಞರು ಮಂಗಳೂರಿಗೆ; ತನಿಖೆ ಮತ್ತಷ್ಟು ಚುರುಕು