Site icon Vistara News

ಮಂಗಳೂರು ಸ್ಫೋಟ | ಮೊದ್ಲು ಗೃಹ ಖಾತೆ ನಿಭಾಯಿಸೋದು ಕಲೀಲಿ: ಆರಗ ಜ್ಞಾನೇಂದ್ರಗೆ ರಾಮಲಿಂಗಾ ರೆಡ್ಡಿ ತರಾಟೆ

Minister Ramalingareddy File Photo

ಮಂಗಳೂರು: ʻʻಭಯೋತ್ಪಾದನೆ ಕೃತ್ಯಗಳಿಗೆ ಹಿಂದಿನ ಸರ್ಕಾರಗಳೇ ಕಾರಣʼʼ ಎಂಬ ಅರಗ ಜ್ಞಾನೇಂದ್ರ ಹೇಳಿಕೆಯನ್ನು (ಮಂಗಳೂರು ಸ್ಫೋಟ) ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ ಖಂಡಿಸಿದ್ದಾರೆ.

ʻʻಆರಗ ಜ್ಞಾನೇಂದ್ರ ಅವರ ಮಾತಿಗೆ ನಗಬೇಕೊ ಅಳಬೇಕೊ ಗೊತ್ತಿಲ್ಲ. ಗೃಹ ಖಾತೆ ಹೇಗೆ ನಿಭಾಯಿಸಬೇಕು ಅನ್ನೋದೇ ಗೊತ್ತಿಲ್ಲ. ಅವರ ಮನೆಗೇ ಅವರ ಕಾರ್ಯಕರ್ತರೇ ಮುತ್ತಿಗೆ ಹಾಕ್ತಾರೆ ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದಾಗಲೇ ಮೆರವಣಿಗೆ ಮಾಡ್ತಾರೆ. ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣವಾದಾಗ 7.30ಕ್ಕೆ ಆ ಹೆಣ್ಣು ಮಗಳು ಅಲ್ಲಿಗ್ಯಾಕೆ ಹೋಗಬೇಕಿತ್ತು ಅಂತಾರೆ. ಇಂತವರಿಂದ ನಾವು ಏನು ನಿರೀಕ್ಷೆ ಮಾಡೋಕಾಗುತ್ತದೆʼʼ ಎಂದು ಅವರು ಹೇಳಿದ್ದಾರೆ.

ʻʻಯಾರ ಅವಧಿಯಲ್ಲಿ ಎಷ್ಟು ಭಯೋತ್ಪಾದನೆ ಕೃತ್ಯ ಆಗಿದೆ ಅಂತ ಆರ್‌ಟಿಐ ಕಾಯಿದೆಯಡಿ ಮಾಹಿತಿ ಕೇಳಿ ತಿಳಿದುಕೊಳ್ಳಿ. ಕಳೆದ 8 ವರ್ಷದ ಬಿಜೆಪಿ ಅಧಿಕಾರದ ಅವಧಿಯಲ್ಲೇ ಹೆಚ್ಚು ಭಯೋತ್ಪಾದನಾ ಕೃತ್ಯ ಆಗಿರೋದುʼʼ ಎಂದು ಹೇಳಿದರು ರಾಮಲಿಂಗಾ ರೆಡ್ಡಿ.

ʻʻದೇಶದಲ್ಲಾಗಲೀ, ರಾಜ್ಯದಲ್ಲಾಗಲೀ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಉತ್ತರನ ಪೌರುಷ ಒಲೆ ಮುಂದೆ ಅನ್ನೋಹಾಗೆ ಆರಗ ಜ್ಞಾನೇಂದ್ರ ಮತ್ತು ಇತರ ಬಿಜೆಪಿ ಮುಖಂಡರ ಕಥೆ. ನಿಜವೆಂದರೆ, ಸಂಘ ಪರಿವಾರದವರೇ ಎಲ್ಲಾ ಕಡೆ ಗಲಾಟೆ ಮಾಡ್ತಿರೋದು. ಅವರನ್ನು ನಿಯಂತ್ರಣ ಮಾಡೋಕೆ ಇವರ ಕೈಯಲ್ಲಿ ಆಗಲಿಲ್ಲ. ಕೈಲಾಗದವರು ಮೈ ಪರಿಚಿಕೊಂಡರು ಅನ್ನೋ ಹಾಗೆ, ಕಾಂಗ್ರೆಸ್ ಮೇಲೆ ಅಪಪ್ರಚಾರ ಮಾಡ್ತಿದ್ದಾರೆʼʼ ಎಂದು ರಾಮಲಿಂಗಾ ರೆಡ್ಡಿ ಹರಿಹಾಯ್ದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಭಯೋತ್ಪಾದನೆಗೆ ಸಿದ್ದು ಕುಮ್ಮಕ್ಕು ಎಂದ ಪ್ರತಾಪ್‌, ಗೃಹ ಸಚಿವರ ಒಳ್ಳೆತನ ನಡೆಯಲ್ಲ ಎಂದ ಯತ್ನಾಳ್‌

Exit mobile version