ಬಳ್ಳಾರಿ: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಗೆ ಬಳ್ಳಾರಿಯ ನಂಟು!? ಆಶ್ಚರ್ಯ ಆಗಬೇಡಿ. ಉಗ್ರ ಶಾರಿಕ್ ಬಳಸಿದ ಸಿಮ್ ಕಾರ್ಡ್ ಸಂಡೂರು ವಿಳಾಸ ಹೊಂದಿರುವುದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಅಧಿಕಾರಿಗಳ ವಿಚಾರಣೆಯಲ್ಲಿ ಒಂದುವರೆ ವರ್ಷದ ಹಿಂದೆ ಕಳೆದ ಹೋದ ಟೆಕ್ಕಿಯ ದಾಖಲೆ ಆರೋಪಿಗಳಿಗೆ ಸಿಕ್ಕಿರುವುದೇ ಇಂತಹ ಅನುಮಾನಕ್ಕೆ ಕಾರಣವಾಗಿತ್ತು.
ಸಿಮ್‌ನ ಮಾಹಿತಿ ಬೆನ್ನತ್ತಿ ಬಂದ ಐಬಿ ಅಧಿಕಾರಿಗಳಿಗೆ ವಿಚಾರಣೆ ಸಂದರ್ಭದಲ್ಲಿ ಆಶ್ಚರ್ಯ ಕಾದಿತ್ತು. ಟೆಕ್ಕಿ ಅರುಣ್ ಕುಮಾರ್‌ಗೆ ಅಧಿಕಾರಿಗಳು ತಮ್ಮನ್ನು ಏಕೆ ವಿಚಾರಣೆ ಮಾಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ, ಅವರು ಕೇಳಿದ ಪ್ರಶ್ನೆಗಳ ಆಧಾರದ ಮೇಲೆ ಮಂಗಳೂರು ಆಟೋ ಬ್ಲಾಸ್ಟ್ ಪ್ರಕರಣದ ಬಗ್ಗೆ ಎಂದು ತಿಳಿಯಿತು ಎನ್ನಲಾಗಿದೆ.
ಒಂದುವರೆ ವರ್ಷದ ಹಿಂದೆ ಕಳೆದ ದಾಖಲೆ
ತನ್ನ ದಾಖಲೆ ಬಳಸಿ ಸಿಮ್ ಕಾರ್ಡ್ ಪಡೆದಿರುವ ಬಗ್ಗೆ ಹೇಳಿದಾಗ ಆಶ್ಚರ್ಯಚಕಿತನಾಗಿ ತನ್ನ ದಾಖಲೆ ಒಂದುವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಕಳೆದಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆಗ ಅಧಿಕಾರಿಗಳಿಗೆ ಬ್ಲಾಸ್ಟ್ ಪ್ರಕರಣಕ್ಕೂ ಹಾಗೂ ಅರುಣ್ ಕುಮಾರನಿಗೂ ಯಾವುದೇ ಸಂಬಂಧವಿಲ್ಲವೆಂಬ ಸತ್ಯ ಮನವರಿಕೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗೌಳಿ ಎಂಬಿಎ, ಎಂಜಿನಿಯರಿಂಗ್ ಪದವೀಧರ
31 ವರ್ಷದ ಅರುಣ್ ಕುಮಾರ್ ಗೌಳಿ ಎಂಬಿಎ ಮತ್ತು ಎಂಜಿನಿಯರಿಂಗ್ ಪದವೀಧರ. ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಹಾವೇರಿಯಲ್ಲಿ ವಿವಾಹವಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬದವರು ಸಂಡೂರಿನಲ್ಲಿ ವಾಸ ಮಾಡುತ್ತಿದ್ದಾರೆ.
ಇಂತಹ ವಿಚಾರ ಟೆಕ್ಕಿ ಕುಟುಂಬದ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಪ್ರಕರಣ ಕುರಿತಾಗಿ ಸತ್ಯಾಂಶದ ವಿಚಾರ ಅಧಿಕಾರಿಗಳಿಗೆ ಮನವರಿಕೆಯಾಗಿದ್ದರಿಂದ ಅರುಣ್ ಕುಮಾರ್ ಮತ್ತು ಕುಟುಂಬದವರು ನಿಟ್ಟುಸಿರುಬಿಟ್ಟಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಬೇರೆ ಬೇರೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್ ಬ್ಲಾಸ್ಟ್ ರೂವಾರಿ ಶಾರಿಖ್: ಸೊಪ್ಪಿನಗುಡ್ಡೆಯಿಂದ ಐಸಿಎಸ್‌ವರೆಗೂ ಚಾಚಿತ್ತಾ ಟೆರರ್ ಲಿಂಕ್