ಉಡುಪಿ: ರಾಜ್ಯದ ಆರ್ಥಿಕ ಶಕ್ತಿ ಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಪ್ರಯತ್ನದ ಭಾಗವಾಗಿ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ನಡೆಸಲಾಗಿದೆ ಎಂದು ಸಂಸದ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆಯನ್ನು ಹೆಚ್ಚಿಸುವ ಹುನ್ನಾರವಿದು ಎಂದಿದ್ದಾರೆ.
ಉಡುಪಿಯಲ್ಲಿ ನಡೆಯುತ್ತಿರುವ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಗಾಗಿ ಆಗಮಿಸಿದ ಅವರು, ಈ ಹಿಂದೆ ರಾಜ್ಯದಲ್ಲಿ ಸರಣಿ ಕೊಲೆಗಳು ನಡೆದಿದ್ದವು. ಈಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಚಟುವಟಿಕೆ ನಡೆದಿಲ್ಲ. ಮಂಗಳೂರು ಘಟನೆ ರಾಜ್ಯವನ್ನು ಎಚ್ಚರಿಕೆ ಗಂಟೆಯಾಗಲಿದೆ ಎಂದ ಅವರು, ʻʻಪಿಎಫ್‌ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರನ್ನೂ ಬೇರು ಸಮೇತ ಕಿತ್ತು ಹಾಕುತ್ತೇವೆ. ಅಲ್ಲಿಯ ತನಕ ನಮ್ಮ ಸರಕಾರಗಳು ವಿಶ್ರಮಿಸುವುದಿಲ್ಲ. ಸ್ಫೋಟದ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆʼʼ ಎಂದು ಹೇಳಿದರು.
ಕರಾವಳಿಗೂ ಬೇಕು ಎನ್‌ಐಎ ಆಫೀಸ್
ಕರ್ನಾಟಕ ಕರಾವಳಿ ವಿಚ್ಛಿದ್ರ ಶಕ್ತಿಗಳ ಕೇಂದ್ರವಾಗುತ್ತಿದೆ. ಇಲ್ಲಿನ ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟ ಹಕಲು ಕರಾವಳಿಯಲ್ಲೇ ಒಂದು ಎನ್ಐಎ ಕಚೇರಿ ಬೇಕಾಗಿದೆ ಎಂದ ತೇಜಸ್ವಿ ಸೂರ್ಯ, ಈ ವಿಚಾರದಲ್ಲಿ ಈ ಹಿಂದೆಯೇ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಮತ್ತೆ ಕೇಂದ್ರ ಸರಕಾರದ ಜೊತೆ ಚರ್ಚೆ ನಡೆಸುತ್ತೇನೆ ಎಂದರು.
ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಎನ್‌ಐಗೆ ಸಹಕಾರ ನೀಡಬೇಕು. ಎಲ್ಲರೂ ಜತೆಯಾಗಿ ಕೆಲಸ ಮಾಡಿದರೆ ಇಂಥ ದುಷ್ಕೃತ್ಯಗಳನ್ನು ತಡೆಗಟ್ಟಬಹುದು ಎಂದ ಅವರು, ನಾವು ಓಟ್ ಬ್ಯಾಂಕ್ ಮುಲಾಜಿಗೆ ಬಿದ್ದು ರಾಜಕೀಯ ಮಾಡುವುದಿಲ್ಲ. ರಾಷ್ಟ್ರೀಯ ಸುರಕ್ಷತೆಗೆ ನಮ್ಮ ಆದ್ಯತೆ. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಪ್ರಮೈಸ್ ಆಗುವುದಿಲ್ಲ ಎಂದು ಹೇಳಿದರು.
ಹೇಳಿದ್ದನ್ನು ಮಾಡಿದ್ದೇವೆ ಎಂದ ತೇಜಸ್ವಿ
ಈ ನಡುವೆ, ಮಣಿಪಾಲದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಪ್ರಧಾನ ಭಾಷಣ ಮಾಡಿದ ತೇಜಸ್ವಿ ಸೂರ್ಯ, ತ್ರಿವಳಿ ತಲಾಕನ್ನು ಹೊಡೆದು ಬಿಸಾಕಿದ್ವಿ, ಕಾಶ್ಮೀರದಲ್ಲಿ 37೦ನೇ ವಿಧಿಯನ್ನು ಕೇವಲ 10 ನಿಮಿಷದಲ್ಲಿ ಕಿತ್ತು ಎಸೆದೆವು. ನಾವು ಹೇಳಿದಲ್ಲೇ ರಾಮಮಂದಿರ ಕಟ್ಟಿದ್ದೇವೆ. ರಾಮ ಮಂದಿರ ಆಗಲ್ಲ ಎಂದವರು 2024ಕ್ಕೆ ಟಿಕೆಟ್ ಬುಕ್ ಮಾಡಿ, ರಾಮನ ದರ್ಶನ ಮಾಡಿ ಬನ್ನಿ ಎಂದು ಹೇಳಿದರು.
ಪಿಎಫ್ಐಯನ್ನು ನಿಷೇಧ ಮಾಡಿದ ಸರಕಾರ ದೇಶದ 200 ಕಡೆ ಏಕಕಾಲದಲ್ಲಿ ದಾಳಿ ಮಾಡಿ ಎಲ್ಲ ಜಾಲಗಳನ್ನು ಕತ್ತರಿಸಿ ಹಾಕಿದ್ದೇವೆ. ಸಿದ್ದರಾಮಯ್ಯ ಅವರು ಪಿಎಫ್‌ಐ ವಿರುದ್ಧದ ಕೇಸುಗಳನ್ನು ಹಿಂಪಡೆದು ಆ ಸಂಘಟನೆಯನ್ನು ಪೋಷಿಸಿದರು. ಆದರೆ, ನಾವು ದೇಶ, ಸಂವಿಧಾನ ವಿರೋಧಿ ಕ್ಷುದ್ರ ಮನಸ್ಥಿತಿಯನ್ನು ಬೇರು ಸಮೇತ ಕಿತ್ತುಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು ತೇಜಸ್ವಿ ಸೂರ್ಯ.
ಗುಜರಾತ್‌ನಲ್ಲಿ ಬಿಜೆಪಿಗೆ ಗೆಲುವು, ಆಪ್‌ಗೆ ಠೇವಣಿ ನಷ್ಟ
ʻʻನಾನು 15 ಬಾರಿ ಗುಜರಾತ್ ಚುನಾವಣಾ ಪ್ರಚಾರ ಸಭೆಗೆ ಹೋಗಿದ್ದೇನೆ. ಈ ಬಾರಿ ಬಿಜೆಪಿ 130-140 ಸೀಟು ಗೆಲ್ಲುತ್ತದೆ. ಮತ್ತೆ ಸರಕಾರ ಮಾಡುತ್ತೇವೆ. ಆಮ್ ಆದ್ಮಿ ಪಾರ್ಟಿ ಗುಜರಾತ್‌ನ ಎಲ್ಲ 182 ಕ್ಷೇತ್ರದಲ್ಲೂ ಠೇವಣಿ ಕಳೆದುಕೊಳ್ಳಲಿದೆ. ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಸರಕಾರ ರಚಿಸಲಿದೆʼʼ ಎಂದು ಹೇಳಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಎಲ್ಲೂ ಮುಸ್ಲಿಂ ಐಡೆಂಟಿಟಿ ತೋರಿಸಿಕೊಂಡಿರಲಿಲ್ಲ, ತನ್ನನ್ನು ಹಿಂದು ಎಂದೇ ಬಿಂಬಿಸಿಕೊಂಡಿದ್ದ!