ಬೆಂಗಳೂರು: ನವೆಂಬರ್ 19ರಂದು ಸಂಜೆ 4.29ಕ್ಕೆ ಮಂಗಳೂರಿನ ಕಂಕನಾಡಿ ಗರೋಡಿ ಬಳಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ಪ್ರಧಾನ ಆರೋಪಿ ಶಂಕಿತ ಉಗ್ರ ಮೊಹಮ್ಮದ್ ಶಾರಿಕ್‌ನನ್ನು ಮತ್ತೆ 1೦ ದಿನಗಳ ಎನ್‌ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.
ಸ್ಫೋಟದಲ್ಲಿ ಗಾಯಗೊಂಡಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಡಿಸೆಂಬರ್ 17ರಂದು ಬೆಂಗಳೂರಿಗೆ ಕರೆತಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆತ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು, ಸೋಮವಾರ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆತನನ್ನು ಸಿಟಿ ಸಿವಿಲ್ ಕೋರ್ಟ್‌ನಲ್ಲಿರೋ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರಾದ ಗಂಗಾಧರ ಸಿ.ಎಂ. ಅವರ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡುವಂತೆ ಕೋರಲಾಯಿತು. ಅದರಂತೆ ಕೋರ್ಟ್ ಆತನನ್ನು ಎನ್ಐಎ ಸುಪರ್ದಿಗೆ ಒಪ್ಪಿಸಿತು.
ಸುಟ್ಟ ಗಾಯಗಳಿಗೆ ಒಳಗಾಗಿದ್ದ ಶಾರಿಕ್
2022ರ ನವೆಂಬರ್ 19ರಂದು ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಶಾರಿಕ್‌ನಿಗೆ ಆರಂಭದಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರಂಭದ ಕೆಲವು ದಿನಗಳ ಕಾಲ ಆತನಿಗೆ ಮಾತನಾಡುವುದಾಗಲೀ, ಯಾರನ್ನಾದರೂ ಪತ್ತೆ ಹಚ್ಚುವುದಾಗಲೀ ಸಾಧ್ಯವಾಗಿರಲಿಲ್ಲ. ಆತನ ಕಣ್ಣಿಗೆ ಸಮಸ್ಯೆಯಾಗಿತ್ತು ಮತ್ತು ಶ್ವಾಸಕೋಶದೊಳಗೂ ಹೊಗೆ ಆವರಿಸಿತ್ತು. ಅದಾಗಿ ಕೆಲವು ದಿನಗಳ ಬಳಿಕ ಆತ ಮಾತನಾಡುವ ಸ್ಥಿತಿಗೆ ಬಂದಾಗ ಪೊಲೀಸರು ವಿಚಾರಣೆ ನಡೆಸಿ ಹಲವು ಮಹತ್ವದ ಅಂಶಗಳನ್ನು ಹೊರಗೆಳೆದಿದ್ದರು.
ಅಷ್ಟಾದರೂ ಆತ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಸ್ಥಳ ಮಹಜರು ಮತ್ತಿತರ ಪ್ರಕ್ರಿಯೆಗಳನ್ನು ನಡೆಸಲು ಕೂಡಾ ಸಾಧ್ಯವಾಗಿರಲಿಲ್ಲ. ಹೀಗಾಗಿ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಆರೋಗ್ಯದ ಕಾರಣಕ್ಕಾಗಿ ಇದುವರೆಗೆ ಶಾರಿಕ್‌ನನ್ನು ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸಿರಲಿಲ್ಲ. ಈಗ ಆತ ಗುಣಮುಖನಾಗಿರುವುದರಿಂದ ಪರಿಪೂರ್ಣ ವಿಚಾರಣೆಗೆ ಕಾಲ ಕೂಡಿಬಂದಂತಾಗಿದೆ.
ಈ ನಡುವೆ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವನ್ನು ತಾನೇ ಸಂಘಟಿಸಿದ್ದಾಗಿ ಸಿರಿಯಾ ಮೂಲದ ಐಸಿಸ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜತೆಗೆ ಆತನಿಗೆ ಸಹಕರಿಸಿದ ಇನ್ನಷ್ಟು ವ್ಯಕ್ತಿಗಳು ಮತ್ತು ಸಂಘಟನೆಗಳ ಹೆಸರು ಬಯಲಿಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ : ಮಂಗಳೂರು ಸ್ಫೋಟಕ್ಕೆ ಸಾದಾ ಕುಕ್ಕರ್ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್ ಈಗ ಏನು ಹೇಳ್ತಾರೆ: ಸಿಎಂ ಬೊಮ್ಮಾಯಿ ಪ್ರಶ್ನೆ