ಮೈಸೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ (ಮಂಗಳೂರು ಸ್ಫೋಟ) ಸಂಬಂಧಿಸಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಮೊಹಮ್ಮದ್ ಶಾರಿಕ್‌ಗೆ ಮೈಸೂರಿನಲ್ಲಿ ಸಹಾಯ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತರು ಯಾರು ಎನ್ನುವುದನ್ನು ಪೊಲೀಸರು ಖಚಿತಪಡಿಸಿಲ್ಲ.
ಶಾರಿಕ್ ಕಳೆದ ಒಂದುವರೆ ತಿಂಗಳಿನಿಂದ ಮೈಸೂರಿನ ಮೇಟಗಳ್ಳಿಯ ಮೋಹನ್ ಕುಮಾರ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಶಾರಿಖ್ ಅಲ್ಲೊಂದು ಸಂಸ್ಥೆಯಲ್ಲಿ ಮೊಬೈಲ್ ತರಬೇತಿ ಇನ್‌ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿದ್ದ.
ಈ ವೇಳೆ ಆತನಿಗೆ ಮೈಸೂರಿನಲ್ಲಿ ಸಹಾಯ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ಮುಂದುವರಿಸಲಾಗಿದೆ.
ಶಾರಿಕ್ ಮೈಸೂರಿನಲ್ಲಷ್ಟೇ ಅಲ್ಲ, ತಿ.ನರಸೀಪುರ, ಮೈಸೂರು, ತಮಿಳುನಾಡಿನ ಕೊಯಮತ್ತೂರು, ಕೇರಳದ ತಿರುವನಂತಪುರದಲ್ಲೂ ಓಡಾಡಿದ್ದ ಎಂಬ ಮಾಹಿತಿ ಇದೆ. ಇವುಗಳನ್ನು ಆಧರಿಸಿ ಊಟಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನೂ ಮೈಸೂರು ಪೊಲೀಸರ ಸಮ್ಮುಖದಲ್ಲೇ ವಿಚಾರಣೆ ಮಾಡಲಾಗಿದೆ.
ಶಾರಿಖ್ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಆತ ಮಾತನಾಡುವ ಸ್ಥಿತಿಗೆ ಬಂದಾಗ ಹೆಚ್ಚಿನ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ| ತಮಿಳುನಾಡಿನ ವ್ಯಕ್ತಿ ಪೊಲೀಸ್ ವಶಕ್ಕೆ, ಬೆಂಗಳೂರಿನಲ್ಲಿ ವಿಚಾರಣೆ