Site icon Vistara News

Mangalore Blast | ಆಟೋ ಸ್ಫೋಟ ಹಿಂದೆ ಇದ್ದವನ ಬಗ್ಗೆ ಗೊತ್ತಾಗಿದೆ, ಲಿಂಕ್‌ ಪತ್ತೆಗೆ ನಮ್ಮ ತಂಡ ಹೋಗಿದೆ: ಎಡಿಜಿಪಿ

Mangalore blast Terror link attack auto blast Aadhar card Alok Kumar

ದೇವನಹಳ್ಳಿ: ಮಂಗಳೂರಿನ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದಲ್ಲಿ ಭಾಗಿಯಾದವನ ಬಗ್ಗೆ ಮಾಹಿತಿ ಗೊತ್ತಾಗಿದೆ. ಆತನ ಬಗ್ಗೆ ಸಾಕಷ್ಟು ವಿಷಯಗಳು ತಿಳಿದಿದ್ದು, ಅವನ ಸಂಪರ್ಕ ಇರುವ ಕಡೆಗಳಲ್ಲಿ ನಮ್ಮ ತಂಡ ಹೋಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ಬೆಂಗಳೂರಿನಿಂದ ಮಂಗಳೂರಿಗೆ ಹೊರಡಲು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶನಿವಾರ ಸಂಜೆ 4.30ರ ವೇಳೆ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಬೇರೆಡೆ ಬಾಂಬ್ ಬ್ಲಾಸ್ಟ್ ಮಾಡುವ ಉದ್ದೇಶವನ್ನು ಅವರದ್ದಾಗಿತ್ತು. ಆದರೆ, ಅಷ್ಟರಲ್ಲಿ ಆಟೋದಲ್ಲಿಯೇ ಆಕಸ್ಮಿಕವಾಗಿ ಬಾಂಬ್ ಬ್ಲಾಸ್ಟ್ ಆಗಿದೆ ಎಂದು ತಿಳಿಸಿದರು.

ಆರೋಪಿ ಚಹರೆ ಖಚಿತವಾದಕೂಡಲೇ ಹೇಳುತ್ತೇವೆ
ಈ ಪ್ರಕರಣದಲ್ಲಿ ಯಾರು ಇದ್ದಾನೆ ಎಂಬ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಎಲ್ಲೆಲ್ಲಿ ಅವನ ಲಿಂಕ್ ಇದೆಯೋ, ಅಲ್ಲೆಲ್ಲ ಕಡೆ ನಮ್ಮ ತಂಡ ಹೋಗಿದೆ. ಆತನ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, 100% ಖಚಿತಪಡಿಸುವ ಸಂಬಂಧ ಸಂಬಂದಿಕರನ್ನು ಕರೆದಿದ್ದೇವೆ. ಅವರು ಬಂದು ಗುರುತಿಸಿದ ನಂತರ ಯಾರು ಎಂದು ನಾವು ಖಚಿತಪಡಿಸುತ್ತೇವೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ | Mangalore Blast | ಆಟೋ ಸ್ಫೋಟದ ಮಾಸ್ಟರ್‌ ಮೈಂಡ್‌ ಶಾರೀಕ್‌; ಮಂಗಳೂರು ಗೋಡೆ ಬರಹ ಪ್ರಕರಣದ 2ನೇ ಆರೋಪಿ ಈತ

ಆರೋಪಿಯ ಮುಖಕ್ಕೆ ಸಾಕಷ್ಟು ಸುಟ್ಟು ಗಾಯಗಳಾಗಿವೆ. ಶೇ. 45ರಷ್ಟು ದೇಹದ ಭಾಗಗಳಿಗೆ ಗಾಯವಾಗಿದೆ. ಮಾತನಾಡುವ ಪರಿಸ್ಥಿತಿಯಲ್ಲಿ ಗಾಯಾಳು ಆರೋಪಿಯಿಲ್ಲ. ಇಂದು ರಾತ್ರಿ ಅಥವಾ ನಾಳೆವರೆಗೂ ವಿಚಾರಣೆ ಮುಂದುವರೆಯುತ್ತದೆ. ತರಾತುರಿಯಲ್ಲಿ ಈ‌ ಬಗ್ಗೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ಇನ್ನೂ 12ರಿಂದ 15 ಗಂಟೆ ಕಾಲ ತನಿಖೆ ನಡೆಯಲಿದೆ. ಬಳಿಕ ಎಲ್ಲವನ್ನೂ ತಿಳಿಸುತ್ತೇವೆ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ಯಾವ ವಿಚಾರಕ್ಕೆ ಈ ಸ್ಫೋಟ ಆಗಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ವಿಚಾರಣೆ ನಡೆಯಬೇಕು. ಕೇಂದ್ರ ಅಧಿಕಾರಿಗಳ ಜತೆ ಸಂಪರ್ಕವಿಟ್ಟುಕೊಂಡು ನಮ್ಮ ಹಿರಿಯರ ತಂಡವು ಕೆಲಸ ಮಾಡುತ್ತಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ಇದನ್ನೂ ಓದಿ | Mangalore Blast | ಪ್ರೇಮ್‌ ರಾಜ್‌ಗೂ ಮಂಗಳೂರು ಸ್ಫೋಟಕ್ಕೂ ಸಂಬಂಧ ಇಲ್ಲ: ಡಿಜಿಪಿ ಪ್ರವೀಣ್‌ ಸೂದ್‌

Exit mobile version