ಮಂಗಳೂರು: ಮಂಗಳೂರು ಮತ್ತು ಮಣಿಪಾಲದಲ್ಲಿ ಪತ್ತೆಯಾದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಡ್ರಗ್ಸ್ ಜಾಲದಲ್ಲಿ (Mangalore drugs) ಇದುವರೆಗೆ ೨೪ ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ, ಈ ಬಂಧನ ಪ್ರಕ್ರಿಯೆ, ಮಾದಕ ವ್ಯಸನಿಗಳನ್ನು ಡ್ರಗ್ ಪೆಡ್ಲರ್‌ಗಳೆಂದು ಬಿಂಬಿಸಿ ಬಂಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಒಬ್ಬ ಎಫ್‌ಎಸ್‌ಎಲ್ ತಜ್ಞರು ಮತ್ತು ವಕೀಲರ ಸಂಘದ ಉಪಾಧ್ಯಕ್ಷರು ನಿರ್ಧರಿಸಿದ್ದಾರೆ.
ವಿಧಿ ವಿಜ್ಞಾನ ಪರೀಕ್ಷಾ ತಜ್ಞರಾಗಿರುವ ಫ್ರೊ. ಡಾ ಮಹಾಬಲ ಶೆಟ್ಟಿ ಮತ್ತು ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್ ರಾಜೀವ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಹೇಳಿದ್ದು, ಗಾಂಜಾ ಪ್ರಕರಣವನ್ನು ಪೊಲೀಸರು ಸರಿಯಾಗಿ ನಿರ್ವಹಿಸಿಲ್ಲ, ಹಲವು ಗಂಭೀರ ವಿಚಾರಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ವಿಧಿ ವಿಜ್ಞಾನ ಪರೀಕ್ಷಾ ತಜ್ಞರಾಗಿರುವ ಫ್ರೊ. ಡಾ ಮಹಾಬಲ ಶೆಟ್ಟಿ ಅವರು ಪ್ರಾಸಿಕ್ಯೂಷನ್ ಪರವಾಗಿ ಕರ್ತವ್ಯ ನಿರ್ವಹಿಸುವ ಫಾರೆನ್ಸಿಕ್ ಎಕ್ಸ್‌ಪರ್ಟ್ ಕೂಡಾ ಆಗಿದ್ದಾರೆ. ಅವರ ಪ್ರಕಾರ, ಈ ಪ್ರಕರಣದಲ್ಲಿ ಗಾಂಜಾ ವ್ಯಸನಿಗಳನ್ನು ಗಾಂಜಾ ಪೆಡ್ಲರ್‌ಗಳೆಂದು ತಪ್ಪಾಗಿ ಬಿಂಬಿಸಲಾಗಿದೆ. ಡ್ರಗ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದವರನ್ನು ಕೂಡಾ ಜೈಲಿಗೆ ಕಳುಹಿಸಲಾಗಿದೆ.
ಈ ಹಿಂದೆ ನಾಲ್ಕು ಸಾವಿರಕ್ಕೂ ಅಧಿಕ ಡ್ರಗ್ ಟೆಸ್ಟ್ ಪ್ರಕರಣ ಸಂಬಂಧ ವರದಿ ನೀಡಿರುವ ಅನುಭವ ಹೊಂದಿರುವ ಮಹಾಬಲ ಶೆಟ್ಟಿ ಅವರು, ಡ್ರಗ್ಸ್ ಸೇವನೆಯನ್ನು ಖಚಿತಪಡಿಸದೆ ಬಂಧಿಸಿದ್ದು, ಭಾವಚಿತ್ರವನ್ನು ಬಹಿರಂಗಪಡಿಸುವ ಮೂಲಕ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿದರು. ಡ್ರಗ್ಸ್ ಸೇವನೆ ಖಚಿತಪಡಿಸಲು ಎಫ್‌ಎಸ್‌ಎಲ್ ಟೆಸ್ಟ್ ಮಾಡಬೇಕು, ಹಾಗೆ ಮಾಡದೆ ಬಂಧನ ಮಾಡುವಂತಿಲ್ಲ. NDPS ಆ್ಯಕ್ಟ್ 64 A ಪ್ರಕಾರ ಡ್ರಗ್ ಸೇವನೆಗೆ ನೇರವಾಗಿ ಬಂಧಿಸುವಂತಿಲ್ಲ ಎಂದರು ಹೇಳಿದರು.
ವಿದ್ಯಾರ್ಥಿಗಳು ಆರೋಪಿಗಳಲ್ಲ ಸಂತ್ರಸ್ತರು
ಈಗ ಬಂಧನದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳು ಡ್ರಗ್ ಪೆಡ್ಲರ್‌ಗಳಲ್ಲ. ಅವರು ಡಗ್ಸ್ ವ್ಯಸನಿಗಳು. ತಾವು ಡ್ರಗ್ಸ್ ಸೇವಿಸಿರುವುದನ್ನು ಅವರೂ ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ವ್ಯಸನಿಗಳನ್ನು ಮನಪರಿವರ್ತನಾ ಕೇಂದ್ರಕ್ಕೆ ದಾಖಲಿಸಬೇಕು. ಆದರೆ, ಪೊಲೀಸರು ಯಾವುದೇ ಪ್ರಕ್ರಿಯೆಗಳನ್ನು ಪಾಲಿಸಿಲ್ಲ. ಮೂತ್ರದ ಮಾದರಿ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಾರೆ ಎಂದರು.
ಸಿಬಿಐ ತನಿಖೆಗೆ ಆಗ್ರಹ
ವಿದ್ಯಾರ್ಥಿಗಳ ಹೆಸರನ್ನು ಡ್ರಗ್ಸ್ ಪೆಡ್ಲರ್‌ಗಳೆಂದು ನಮೂದಿಸಿರುವುದು ತಪ್ಪು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ, ಜಾರ್ಜ್‌ಶೀಟ್‌ನಲ್ಲಿ ತೆಗೆಯಬಹುದಲ್ವಾ ಎಂದು ಕೇಳಿದ್ದಾರೆ. ಹಾಗಿದ್ದರೆ ಸೇರಿಸಿದ್ದು ಯಾಕೆ ಎಂದು ಕೇಳಿರುವ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್ ರಾಜೀವ್ ಅವರು ಹೈಕೋರ್ಟ್‌ಗೆ ಮೊರೆ ಹೋಗಿ ರಿಟ್ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ | Mangalore Drugs | ಇನ್ನಷ್ಟು ಆಸ್ಪತ್ರೆಗೆ ಹಬ್ಬಿದ ಡ್ರಗ್ಸ್ ಜಾಲ: ಇಬ್ಬರು ವೈದ್ಯರು, 7 ವೈದ್ಯ ವಿದ್ಯಾರ್ಥಿಗಳ ಬಂಧನ