Site icon Vistara News

Mangalore Pub Attack | ವಿದ್ಯಾರ್ಥಿಗಳ ವಿದಾಯ ಕೂಟದ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

Mangalore Pub Attack

ಮಂಗಳೂರು: ನಗರದ ಪಬ್‌ ಒಂದರಲ್ಲಿ ಕಾಲೇಜು ವಿದ್ಯಾರ್ಥಿಗಳು ವಿದಾಯಕೂಟ ಆಚರಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ ಘಟನೆ (Mangalore Pub Attack) ಸೋಮವಾರ ರಾತ್ರಿ ನಡೆದಿದೆ.

ಮಂಗಳೂರಿನ ರಿ-ಸೈಕಲ್ ದಿ ಲಾಂಜ್ ಪಬ್ ನಲ್ಲಿ ಈ ವಿದಾಯ ಕೂಟ ನಡೆಯುತ್ತಿತ್ತು. ನಗರದ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕುಡಿದು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಈ ಕಾಲೇಜಿನ ವಿದ್ಯಾರ್ಥಿಗಳ ಲಿಪ್ ಲಾಕ್ ವಿಡಿಯೋ ವೈರಲ್‌ ಆಗಿತ್ತು. ಹೀಗಾಗಿ ಈ ಕಾಲೇಜು ವಿದ್ಯಾರ್ಥಿಗಳ ಮೇಲೆ ಬಜರಂಗದಳದ ಕಾರ್ಯಕರ್ತರು ಕಣ್ಣಿಟ್ಟಿದ್ದರು. ಈ ವಿದಾಯ ಕೂಟದಲ್ಲಿ ಭಾಗವಹಿಸಿದ್ದವರೆಲ್ಲರೂ ಪದವಿ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.

ಪಾರ್ಟಿ ನಡೆಯುತ್ತಿದ್ದ ವೇಳೆ ಪಬ್‌ನ ಒಳ ನುಗ್ಗಿದ ಬಜರಂಗದಳದ ಕಾರ್ಯಕರ್ತರು ದಾಂದಲೆ ನಡೆಸಿದ್ದಾರೆ. ಪಾರ್ಟಿ ನಿಲ್ಲಿಸುವಂತೆ ಸೂಚಿಸಿ, ಬೈದು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ. ವಿದ್ಯಾರ್ಥಿನಿಯರು ತುಂಡುಡುಗೆ ತೊಟ್ಟಿದ್ದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನ ಚದುರಿಸಿದ್ದಾರೆ.

ಸುಮಾರು 30-40 ಬಜರಂಗದಳದ ಕಾರ್ಯಕರ್ತ ಗುಂಪು ಈ ದಾಂದಲೆ ನಡೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ |ನಶೆಯಲ್ಲಿ ತೇಲಾಡುತ್ತಿರುವ ಶಿವಮೊಗ್ಗದ ಕಾಲೇಜು ವಿದ್ಯಾರ್ಥಿಗಳು, ಪೋಷಕರ ಆತಂಕ

Exit mobile version