ಮಂಗಳೂರು: ಡಿಜಿಟಲ್ ವ್ಯವಹಾರ ಹೆಚ್ಚಿದಂತೆ ಅದರ ವಂಚನೆ ಸಹ ಹೆಚ್ಚುತ್ತಲಿದೆ. ಈಗ ತಮ್ಮ ಆಸ್ತಿ ನೋಂದಣಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಜನರ ಖಾತೆಗೆ ಕನ್ನ ಹಾಕುವ ಹೊಸ ಜಾಲ ಸೃಷ್ಟಿಯಾಗಿದೆ. ಆಸ್ತಿ ನೋಂದಣಿಗಾಗಿ ಕಾವೇರಿ 2 ಸಾಫ್ಟ್ವೇರ್ಗೆ (Kaveri 2 Software) ಬಯೋಮೆಟ್ರಿಕ್ ಥಂಬ್ (Biometric thumb) ನೀಡುವವರ ಬ್ಯಾಂಕ್ ಖಾತೆಯನ್ನು (Bank Account) ದೋಚಲಾಗುತ್ತಿದೆ. ಹ್ಯಾಕರ್ಗಳು (Hackers Crime) ಸರ್ಕಾರದ ಸರ್ವರ್ಗೇ (Server Hack) ಕನ್ನ ಹಾಕಿ ಜನರ ಹಣವನ್ನು ಲಪಟಾಯಿಸುತ್ತಿದ್ದಾರೆಯೇ ಎಂಬ ಅನುಮಾನ ಈಗ ಮೂಡಿದೆ.
ಮೊಬೈಲ್ಗೆ ಕರೆ ಮಾಡಿ ಒಟಿಪಿ ಪಡೆದು ಹಣ ಹೊಡೆಯುವ ಜಾಲವನ್ನೂ ಮೀರಿಸುವ ಕಥೆ ಇದು. ಇಲ್ಲಿ ಫೋನ್ ಕಾಲ್ ಬರುವುದಿಲ್ಲ, ಒಟಿಪಿಯನ್ನೂ ಕೇಳುವುದಿಲ್ಲ. ಕೇವಲ ಬಯೋಮೆಟ್ರಿಕ್ ಥಂಬ್ ಸಿಕ್ಕಿದ ಕೂಡಲೇ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಎಗರಿಸಲಾಗುತ್ತಿದೆ. ಅದೂ ಸರ್ಕಾರಿ ಕಚೇರಿಯಲ್ಲೇ ಈ ರೀತಿ ನಡೆಯುತ್ತಿರುವುದು ಆತಂಕವನ್ನು ಸೃಷ್ಟಿಸುತ್ತಿದೆ. ಇದರಿಂದ ಜನರು ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Bandipur National Park: ಬಂಡಿಪುರಕ್ಕೂ ಜಲಕ್ಷಾಮ; 31 ಕೆರೆಗಳು ಖಾಲಿ ಖಾಲಿ!
ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ಶುಲ್ಕ ಏರಿಕೆ ಆಗುವ ಕಾರಣ ಜನರು ಮುಗಿ ಬಿದ್ದು ಆಸ್ತಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಖದೀಮರೂ ಕೂಡಾ ಹಣ ಮಾಡಲು ಸರ್ಕಾರದ ಕಚೇರಿಯನ್ನೇ ಬಳಸಿಕೊಂಡಿದ್ದಾರೆಯೇ ಎಂಬ ಅನುಮಾನ ಕಾಡಿದೆ. ಏಕೆಂದರೆ ಆಸ್ತಿ ನೋಂದಣಿಗೆ ಆಧಾರ್ ಪಡೆಯಲು ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2 ಸಾಫ್ಟ್ವೇರ್ಗೆ ಥಂಬ್ ನೀಡಿದವರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂಪಾಯಿ ಹಣ ಡ್ರಾ ಆಗಿದೆ. ಆಸ್ತಿ ನೋಂದಣಿಗೆ ಥಂಬ್ ನೀಡಿದ ಬಳಿಕ ಕಂಪ್ಯೂಟರ್ನಲ್ಲಿ ಆಧಾರ್ ದಾಖಲೆ ಪಡೆದು ರಿಜಿಸ್ಟ್ರೇಷನ್ ಪ್ರೊಸೆಸ್ ಮುಂದುವರಿಯುತ್ತದೆ. ಆದರೆ, ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೇ ಥಂಬ್ ನೀಡಿ ಹೊರ ಬರುವಷ್ಟರಲ್ಲೇ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುತ್ತಿದೆ. ಪ್ರತಿ ದಿನ ತಲಾ ಹತ್ತು ಸಾವಿರದಂತೆ ಕೆಲವರು ಲಕ್ಷ ರೂಪಾಯಿಗೂ ಹೆಚ್ಚು ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು 40 ರಿಂದ 50 ಸಾವಿರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ವಿಪರ್ಯಾಸ ಅಂದರೆ, ಬ್ಯಾಂಕ್ ಖಾತೆಯಿಂದ ಹಣ ಕ್ಯಾಶ್ ಡ್ರಾ ಆಗಿದ್ದು, ಯಾವುದೇ ಖಾತೆಗೆ ವರ್ಗಾವಣೆ ಆಗಿಲ್ಲ. ಇನ್ನು ಖಾತೆಯಿಂದ ಹಣ ಡ್ರಾ ಆದ ಬಗ್ಗೆ ಮೆಸೇಜ್ ಬಾರದೇ ಇರುವ ಕಾರಣ ಕೆಲವರಿಗೆ ಹಣ ಡ್ರಾ ಆದ ಬಗ್ಗೆ ಮಾಹಿತಿಯೇ ಗೊತ್ತಾಗಿಲ್ಲ . ವಿಷಯ ಗೊತ್ತಾಗುವ ವೇಳೆಗೆ ಖಾತೆಯಲ್ಲಿದ್ದ ಸಾವಿರಾರು ರೂಪಾಯಿಗಳು ಡ್ರಾ ಮಾಡಲಾಗಿದೆ.
ಹಣ ಕಳೆದುಕೊಂಡವರು ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಸರ್ವರ್ ಹ್ಯಾಕ್ ಆಗಿರುವ ಬಗ್ಗೆ ಅನುಮಾನವಿದ್ದರೂ ಹಣ ಕಳೆದುಕೊಂಡ ಬಗ್ಗೆ ಮಾಹಿತಿ ಇಲ್ಲ. ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಥಂಬ್ ನೀಡಿದ ಬಳಿಕ ತಮ್ಮ ಖಾತೆಯಿಂದ ಹಣ ಡ್ರಾ ಆಗಿದೆ ಅಂತ ಹಲವು ಜನರು ದೂರಿದ್ದಾರೆ. ಆದರೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇದಕ್ಕೆ ಯಾವುದೇ ಉತ್ತರ ಸಿಗುತ್ತಿಲ್ಲ. ಹೀಗಾಗಿ ಸೈಬರ್ ಪೊಲೀಸರಿಗೆ ಕೆಲವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವ ರೀತಿ ಪ್ರೊಸೆಸ್ ಆಗುತ್ತದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗಂತ ಹಣ ಕಳೆದುಕೊಂಡವರ ಖಾತೆಯಿಂದ ಹಣ ಹೇಗೆ ಡ್ರಾ ಆಗಿದೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಹಿರಿಯ ಸಬ್ ರಿಜಿಸ್ಟ್ರಾರ್ ಕವಿತಾ ಪಿ.ಬಿ ಅವರನ್ನು ವಿಚಾರಿಸಿದರೆ, ನಮಗೆ ಯಾವ ಮಾಹಿತಿಯೂ ಇಲ್ಲ. ಪೊಲೀಸರು ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ಇನ್ನು ಕಾವೇರಿ 2 ಸರ್ವರ್ ನಮ್ಮ ನಿಯಂತ್ರಣದಲ್ಲಿ ಇಲ್ಲ. ಅದರ ಎಲ್ಲಾ ನಿಯಂತ್ರಣ ಬೆಂಗಳೂರಿನಲ್ಲಿದೆ ಅಂತ ಮಾಹಿತಿ ನೀಡಿದ್ದಾರೆ.
ಆಧಾರ್ ಎನೇಬಲ್ ಪೇಮೆಂಟ್ ಸಿಸ್ಟಂ ಲಾಭ ಪಡೆದಿರೋ ಹ್ಯಾಕರ್ಸ್
ಆಸ್ತಿ ನೊಂದಣಿ ಮಾಡಿಸುವ ವೇಳೆ ಆಸ್ತಿ ನೊಂದಣಿ ಮಾಡುವವರು ಎರಡು ಬಾರಿ ತಮ್ಮ ಬಯೋಮೆಟ್ರಿಕ್ ಥಂಬ್ ನೀಡಬೇಕಾಗುತ್ತದೆ. ಜೊತೆಗೆ ಮುದ್ರಾಂಕ ಶುಲ್ಕ ಕಟ್ಟುವ ಸಮಯದಲ್ಲಿ ಒಂದು ಆಧಾರ್ ಸ್ಕ್ಯಾನ್ ಕಾಪಿ ಕೂಡಾ ಕೊಡಬೇಕಾಗುತ್ತದೆ. ಇದನ್ನೇ ಹ್ಯಾಕರ್ಸ್ಗಳು ದುರುಪಯೋಗ ಮಾಡಿಕೊಂಡು ಆಸ್ತಿ ನೋಂದಣಿಗೆ ಬಂದವರು ಬ್ಯಾಂಕ್ ಖಾತೆಗೆ ಕನ್ನ ಹಾಕ್ತಾ ಇದ್ದಾರೆ. ಸಾಮಾನ್ಯವಾಗಿ ಎಲ್ಲರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಜತೆ ಲಿಂಕ್ ಆಗಿರುತ್ತದೆ. ಇತ್ತೀಚೆಗೆ ಆಧಾರ್ ಎನೇಬಲ್ ಪೇಮೆಂಟ್ ಸಿಸ್ಟಂ ಜಾರಿ ಮಾಡಿ ಎಟಿಎಂ ಕಾರ್ಡ್ ಇಲ್ಲದೆ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ಗಳಲ್ಲಿ ಹಣ ಡ್ರಾ ಮಾಡುವ ವ್ಯವಸ್ಥೆ ಕೂಡಾ ಇದೆ. ಇಲ್ಲಿ ಒಂದು ಬಾರಿ ಆಧಾರ್ ನೀಡಿ ಗರಿಷ್ಠ 10 ಸಾವಿರ ರೂಪಾಯಿಗಳ ವರೆಗೆ ಪಡೆಯುವ ಅವಕಾಶ ಇದೆ. ಈ ವ್ಯವಸ್ಥೆಯಿಂದಲೇ ಈಗ ಹ್ಯಾಕರ್ಸ್ಗಳು ಹಣ ಲಪಟಾಯಿಸ್ತಾ ಇದ್ದಾರೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಆದ್ರೆ ಸರ್ಕಾರಿ ಕಚೇರಿಯಲ್ಲಿ ನೀಡಿದ ಥಂಬ್ ಆಗಲಿ ಆಧಾರ್ ಸ್ಕ್ಯಾನ್ ಕಾಪಿಯಾಗಲಿ ಹ್ಯಾಕರ್ಸ್ ಕೈಗೆ ಹೇಗೆ ಸಿಗುತ್ತಿದೆ ಅನ್ನೋದು ಮಾತ್ರ ನಿಗೂಢವಾಗಿದೆ.
ಕಾವೇರಿ 2 ಸಾಫ್ಟ್‌ವೇರ್ ಸೇಫ್ ಅಲ್ವಾ?
ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ಶುಲ್ಕ ಏರಿಕೆಯಾಗುತ್ತಿರುವುದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಮಂಗಳೂರಿನಲ್ಲಿ ಆಸ್ತಿ ನೋಂದಣಿಗೆ ಹೋದ ಜನರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಲಾಗಿದೆ. ಹೀಗಾಗಿ ಸರ್ಕಾರದ ಸರ್ವರ್ ಹ್ಯಾಕ್ ಆಗಿದೆ ಅನ್ನೋ ಅನುಮಾನ ಬಹಳವಾಗಿ ಕಾಡಿದೆ. ಜನರ ಮೊಬೈಲ್ಗೆ ಮೆಸೇಜ್ ಕೂಡಾ ಬಾರದ ರೀತಿಯಲ್ಲಿ ಜನರ ಹಣವನ್ನು ಹೊಡೆಯಲಾಗುತ್ತಿದೆ. ಇದು ಕೇವಲ ಮಂಗಳೂರಿನಲ್ಲಿ ಮಾತ್ರ ನಡೆದಿರುವ ವಂಚನೆಯಾಗಿದ್ದರೆ ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯ ಕಾವೇರಿ 2 ಸಾಫ್ಟ್‌ವೇರ್ ಹ್ಯಾಕ್ ಆಗಿರಬಹುದು ಅಥವಾ ವಂಚಕರಿಗೆ ಇಲ್ಲಿಂದಲೇ ದಾಖಲೆ ವರ್ಗಾವಣೆ ಆಗಿರಬಹುದು ಎಂಬುದು ಹಣ ಕಳೆದುಕೊಂಡವರ ಅನುಮಾನ.
ಇದನ್ನೂ ಓದಿ: Pocso Case : ಖುರಾನ್ ಪಠಿಸಲು ಬಂದ ಬಾಲಕನ ಬಟ್ಟೆ ಬಿಚ್ಚಿಸಿ ಅಂಗಾಗ ಮುಟ್ಟಿದ್ದ ಮೌಲಾನಾ ಅರೆಸ್ಟ್!
ಸರ್ಕಾರದ ಸರ್ವರ್ ಹ್ಯಾಕ್ ಆಗಿದ್ದೇ ಆದಲ್ಲಿ ರಾಜ್ಯ ನಾನಾ ಜಿಲ್ಲೆಯಲ್ಲೂ ಇಂತಹ ಪ್ರಕರಣ ಬೆಳಕಿಗೆ ಬರಬೇಕು. ಸದ್ಯ ಈ ಬಗ್ಗೆ ಯಾವುದೇ ಅಧಿಕಾರಿಗಳೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಬಗ್ಗೆ ಗಮನ ಹರಿಸಬೇಕು ಹಾಗೂ ಈ ಪ್ರಕರಣವನ್ನು ತನಿಖೆ ನಡೆಸಬೇಕು. ಹಾಗೆಯೇ ಹಣ ಕಳೆದುಕೊಂಡವರಿಗೆ ಮರುಪಾವತಿ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.