Site icon Vistara News

ಮಂಗಳೂರು ಸ್ಫೋಟ | ಮೈಸೂರಿನ ಎನ್‌.ಆರ್‌. ಕ್ಷೇತ್ರದಲ್ಲಿ ಕೂಂಬಿಂಗ್‌ ಆಪರೇಷನ್‌ ನಡೆಯಲಿ: ಪ್ರತಾಪ್‌ ಸಿಂಹ

Pratap Simha ಮಂಗಳೂರು ಸ್ಫೋಟ narasimharaja constituency combing operation

ಮೈಸೂರು: ಮಂಗಳೂರು ಬಾಂಬ್ ಸ್ಫೋಟ (Mangaluru Blast) ‌ಪ್ರಕರಣ ಸಂಬಂಧ ರಾಜ್ಯ ಪೊಲೀಸರು ತನಿಖೆ ನಡೆಸಿದ ಕಾರ್ಯ ಶ್ಲಾಘನೀಯ. ರಾಜ್ಯದಲ್ಲಿ ಆಗಾಗ ಸರಣಿ ಹತ್ಯೆಗಳಾಗಿದ್ದು, ಇದರ ಹಿಂದೆ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಇವೆ. ಈಗ ಈ ಸಂಘಟನೆಗಳಿಂದ ಪ್ರಭಾವಿತರಾದವರು ಬಾಂಬ್ ಬ್ಲಾಸ್ಟ್ ಕೃತ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಮೈಸೂರಿನ ಮುಸ್ಲಿಂ ಬಾಹುಳ್ಯವುಳ್ಳ ಎನ್.ಆರ್.ಕ್ಷೇತ್ರದಲ್ಲಿ ಕೂಂಬಿಂಗ್ ಆಪರೇಷನ್ ಆಗಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌.ಆರ್.‌ ಕ್ಷೇತ್ರದಾದ್ಯಂತ ಕೂಂಬಿಂಗ್‌ ಆಪರೇಷನ್‌ ನಡೆಸಬೇಕಿದೆ. ಅದರಲ್ಲೂ ಮುಖ್ಯವಾಗಿ ಶಾಂತಿನಗರ, ಗೌಸಿಯಾನಗರ, ರಾಜೀವ್ ನಗರ, ಉದಯಗಿರಿಯಲ್ಲಿ ಹೆಚ್ಚಿನ ಒತ್ತು ನೀಡಬೇಕು. ಈ ರೀತಿಯ ಕಾರ್ಯಾಚರಣೆ ನಡೆದರೆ ಅಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದು ಬೆಳಕಿಗೆ ಬರುತ್ತದೆ ಎಂದು ಮೈಸೂರು ಪೊಲೀಸರನ್ನು ಒತ್ತಾಯಿಸಿದರು.

ಮೈಸೂರು ಮಹಾರಾಜರು ಕಟ್ಟಿದ ನಗರವು ಶಾಂತಿಯುತವಾಗಿತ್ತು. ಆದರೆ, ಇತ್ತೀಚೆಗೆ ಅಶಾಂತಿಯನ್ನು ಸೃಷ್ಟಿಸಲಾಗುತ್ತಿದೆ. ಮಂಗಳೂರು ಬಾಂಬ್‌ ಸ್ಫೋಟ ಸಂಬಂಧ ಮಂಗಳೂರು ಹಾಗೂ ಮೈಸೂರಿನಲ್ಲಿ ಪೊಲೀಸರು ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಇದು ಕೇವಲ ಕುಕ್ಕರ್‌ ಸ್ಫೋಟ ಎಂದು ಬಿಡದೆ ಇದರ ಹಿಂದಿರುವವರನ್ನು ಬಂಧನ ಮಾಡಿದ್ದಾರೆ. ಸಾಕಷ್ಟು ತನಿಖೆ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಈ ಪ್ರಕರಣವನ್ನು ಇಲ್ಲಿಗೇ ಬಿಡದೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು‌ ಹೋಗಬೇಕು ಎಂದು ಪ್ರತಾಪ್‌ ಸಿಂಹ ಹೇಳಿದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕರಾವಳಿಯಲ್ಲಿ ಎನ್‌ಐಎ ಕೇಂದ್ರ ಸ್ಥಾಪನೆಗೆ ಕೇಂದ್ರದ ಜತೆ ಮಾತುಕತೆ ಎಂದ ತೇಜಸ್ವಿಸೂರ್ಯ

Exit mobile version