ಬೆಂಗಳೂರು: ಮಂಗಳೂರಿನ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ್ದ ಸ್ಫೋಟವು (Mangalore Blast) ತೀವ್ರ ಪ್ರಮಾಣದಲ್ಲಿ ಆಗದಿರಲು ಉಗ್ರ ಶಾರೀಕ್ (Shariq) ಕುಕ್ಕರ್‌ನ (Cooker) ಮುಚ್ಚಳ ಹಾಕಿರದೆ ಇರುವುದೇ ಕಾರಣವಾಗಿದೆ ಎಂದು ಹೇಳಲಾಗಿದೆ. ಒಂದು ವೇಳೆ ಆತ ಮುಚ್ಚಳವನ್ನು ಹಾಕಿ ಕ್ರಮಿಸಿದ್ದರೆ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿ, ಸಾವು-ನೋವುಗಳಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಕುಕ್ಕರ್‌ನಲ್ಲಿ ಇದ್ದ ಐಇಡಿ (IED) ಸ್ಫೋಟಕವು ಬ್ಲಾಸ್ಟ್ ಆದಾಗ ಕುಕ್ಕರ್ ಮುಚ್ಚಳ ಹಾಕಿರಲಿಲ್ಲ. ಶಾರೀಕ್ ಮುಚ್ಚಳವನ್ನು ಕ್ಲೋಸ್ ಮಾಡದೆ ಹಾಗೆ ಮೇಲೆ ಇಟ್ಟುಕೊಂಡು ಕವರ್‌ನಲ್ಲಿಟ್ಟುಕೊಂಡು ಮಂಗಳೂರಿನಲ್ಲಿ ಸಂಚಾರ ಮಾಡಿದ್ದ. ಈ ವೇಳೆ ಒಂದು ಆಟೋ ಹತ್ತಿ ಹೊರಟಿದ್ದ. ಆದರೆ, ನಿಗದಿತ ಸ್ಥಳ ತಲುಪುವ ಮೊದಲೇ ಸ್ಫೋಟಗೊಂಡಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಎಲ್ಲಿ ತೆಗೆದುಕೊಂಡು ಹೋಗಿ ಸ್ಫೋಟ (Blast) ಮಾಡುವ ಸಂಚನ್ನು ಹೊಂದಿದ್ದ ಎಂಬ ವಿಚಾರವನ್ನು ಅರಿಯಲು ಪೊಲೀಸರು ಮುಂದಾಗಿದ್ದಾರೆ.
ಅವಧಿ ಮುನ್ನ ಸ್ಫೋಟಕ್ಕೆ ಕಾರಣವೇನು?
ಯಾವುದೇ ಸ್ಫೋಟಕವಾದರೂ ಉಷ್ಣಾಂಶ ಇಲ್ಲವೇ ತೇವಾಂಶ ಹೆಚ್ಚಾದರೂ ಸ್ಫೋಟ ಆಗುತ್ತದೆ. ಇನ್ನು ಸ್ಫೋಟಕವನ್ನು ಹೊತ್ತೊಯ್ಯುವಾಗ ಅದು ಯಾವುದೇ ಕಾರಣಕ್ಕೂ ಅಲುಗಾಡುವುದು ಅಥವಾ ಮೇಲಿನಿಂದ ಕೆಳಕ್ಕೆ ಬೀಳುವುದು ಆಗಕೂಡದು. ಸ್ಫೋಟಕದಲ್ಲಿ ಹಾಕಲಾಗಿರುವ ಕೆನೆಕ್ಷನ್‌ಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸ್ಫೋಟ ಸಂಭವಿಸುತ್ತದೆ. ಇಂತಹ ಕೃತ್ಯ ಎಸೆಗುವವರು ಈ ಎಲ್ಲ ಅಂಶಗಳನ್ನೂ ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ನ ಜತೆ ಬಂದಿದ್ನಾ ಇನ್ನೊಬ್ಬ? ಪಡೀಲ್ ಸಿಸಿ ಟಿವಿಯಲ್ಲಿ ದಾಖಲಾದ ಆ ಇಬ್ಬರು ಯಾರು?
ಶಾರೀಕ್ ಕುಕ್ಕರ್‌ನಲ್ಲಿ ಸ್ಫೋಟಕವನ್ನು ಸಿದ್ಧಪಡಿಸಿಕೊಂಡು ಆಟೋದಲ್ಲಿ ಸಾಗಿಸುವಾಗ ಸರಿಯಾಗಿ ತೆಗೆದುಕೊಂಡು ಹೋಗಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಆಟೋ ಜಂಪ್ ಆದಾಗ ಸ್ಫೋಟವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇನ್ನು ಕುಕ್ಕರ್ ಮುಚ್ಚಳ ಹಾಕಿದ್ದರೆ ದೊಡ್ಡ ಪ್ರಮಾಣದ ಸ್ಫೋಟವಾಗುತ್ತಿತ್ತು. ಆದರೆ, ಇದನ್ನು ಶಾರೀಕ್ ನಿಗದಿತ ಸ್ಥಳಕ್ಕೆ ಹೋಗಿ ಮುಚ್ಚಳ ಹಾಕಿ ಸ್ಫೋಟ ಮಾಡುವ ಇರಾದೆಯನ್ನು ಹೊಂದಿದ್ದನೇ ಎಂದು ಶಂಕಿಸಲಾಗಿದೆ. ಒಂದು ವೇಳೆ ಹೆಚ್ಚು ಜನರು ಇರುವ ಸ್ಥಳದಲ್ಲಿ ಸ್ಫೋಟ ಮಾಡಿದ್ದರೆ ಭಾರಿ ಪ್ರಮಾಣದ ಸಾವು-ನೋವುಗಳು ಸಂಭವಿಸುತ್ತಿತ್ತು ಎನ್ನಲಾಗಿದೆ.
ರಾಸಾಯನಿಕ ಉತ್ಪನ್ನ ಪಡೆದ ಬಗ್ಗೆ ತನಿಖೆ
ಇನ್ನು ಶಾರೀಕ್‌ಗೆ ಸ್ಫೋಟಕವನ್ನು ತಯಾರಿಸಲು ಬೇಕಾದ ರಾಸಾಯನಿಕ ಸಲಕರಣೆಗಳಾದ (Chemical product) ಪೌಡರ್, ಕೆಮಿಕಲ್‌ಗಳು ಎಲ್ಲಿ ಮತ್ತು ಹೇಗೆ ಸಿಕ್ಕಿವೆ? ಈ ವಸ್ತುಗಳು ಯಾರಿಂದ ಈತ ಪಡೆದಿದ್ದಾನೆ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಐಇಡಿ ಹೇಗೆ ಭಿನ್ನ?
ಐಇಡಿಗಳಲ್ಲಿ ಸರ್ಕಿಟ್ ಸ್ಫೋಟಕಗಳಿಗೆ ಮದರ್ ಬೋರ್ಡ್ನಂತೆ ಕೆಲಸ ಮಾಡುತ್ತದೆ. ಎಲ್ಇಡಿಗಳನ್ನು ಡಿಟೋನೇಟರ್‌ಗಳಿಗೆ ಬದಲಾಗಿ ಬಳಕೆ ಮಾಡಲಾಗುತ್ತದೆ. ಯಾವುದೇ ಮೂಲ ರಾಸಾಯನಿಕಗಳು ತನ್ನಿಂದ ತಾನೇ ಸ್ಫೋಟಗೊಳ್ಳುವುದಿಲ್ಲ. ಸ್ಫೋಟಗೊಳ್ಳುವಂತೆ ಮಾಡಲು ಸ್ಪಾರ್ಕ್ (Spark) ಮಾಡಲಾಗುತ್ತದೆ. ಪಟಾಕಿಯ ತುದಿಗೆ ಬೆಂಕಿ ಕೊಡುವಂತೆ, ಸ್ಫೋಟಕಗಳನ್ನು ಸ್ಪಾರ್ಕ್ ಮಾಡಿ ಸ್ಫೋಟಗೊಳ್ಳುವಂತೆ ಮಾಡಲಾಗುತ್ತದೆ. ಅದಕ್ಕಾಗಿ ಡಿಟೋನೇಟರ್ ಅನ್ನು ಬಳಸಲಾಗುತ್ತದೆ. ಆದರೆ, ಐಇಡಿಗಳಲ್ಲಿ ಡಿಟೋನೇಟರ್ಸ್ ಬದಲಾಗಿ ಎಲ್ಇಡಿ ಬಳಕೆಯಾಗುತ್ತದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ: ಶಾರಿಕ್ ಟೆಕ್ನಾಲಜಿ ಬಳಕೆಯಲ್ಲಿ ಪರಿಣತ; ತನಿಖಾಧಿಕಾರಿಗಳನ್ನೂ ಮೀರಿಸುವ ತಂತ್ರಗಾರಿಕೆ ಗೊತ್ತು!