ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದ ರೂವಾರಿ, ಶಂಕಿತ ಉಗ್ರ ಶಾರಿಕ್ ತನ್ನ ಐಡೆಂಟಿಟಿ ಬಗ್ಗೆ ತೀವ್ರ ನಿಗಾ ವಹಿಸಿದ್ದ. ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆತ ತಲೆ ಮರೆಸಿಕೊಂಡಿದ್ದವನು. ಒಂದೊಂದೇ ಸ್ಥಳ ಬದಲಾವಣೆ ಮಾಡಿ ಕೇರಳದಲ್ಲಿದ್ದ. ಅಲ್ಲಿದ್ದುಕೊಂಡೇ ಶಾರಿಕ್ ಓಎಲ್‌ಎಕ್ಸ್ (OLX) ಮೂಲಕ ಮೈಸೂರಿನಲ್ಲಿ ಮನೆಯನ್ನು ಫೈನಲ್ ಮಾಡಿದ್ದ ಎಂಬ ಸಂಗತಿ ಬಹಿರಂಗಗೊಂಡಿದೆ.
ಸ್ಫೋಟಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಆತ ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದು ಆತ ವಾಸ ಮಾಡಬೇಕಿತ್ತು. ಆದರೆ, ಇದ್ದಿದ್ದು ಕೇರಳದಲ್ಲಾಗಿತ್ತು. ಒಂದು ವೇಳೆ ತಾನು ಮೈಸೂರಿಗೆ ಬಂದು ಮನೆ ಹುಡುಕಿದರೆ ತನ್ನ ಗುರುತು ಲಭ್ಯವಾಗಿ ಪೊಲೀಸರಿಗೆ ಅತಿಥಿಯಾಗಬೇಕಾಗಲಿದೆ ಎಂಬ ಕಾರಣಕ್ಕಾಗಿ ಕೇರಳದಲ್ಲಿಯೇ ಕುಳಿತು ಆನ್‌ಲೈನ್ ಸೈಟ್ ಮೂಲಕ ಮನೆಯನ್ನು ಹುಡುಕಿದ್ದಾನೆ. ಓಎಲ್‌ಎಕ್ಸ್ ಮೂಲಕ ಮನೆ ಹುಡುಕಿದಾಗ ಮೈಸೂರಿನ ಮೇಟಗಳ್ಳಿ ಲೋಕನಾಯಕ ನಗರದ ಒಂದು ಮನೆಯನ್ನು ಫೈನಲ್ ಮಾಡಿದ್ದ.
ಮನೆ ಮಾಲೀಕನ ನಂಬರ್‌ಗೆ ಕರೆ
ಕೇರಳದಲ್ಲಿಯೇ ಕುಳಿತು ಮನೆ ಮಾಲೀಕ ಮೋಹನ್ ಅವರಿಗೆ ಕರೆ ಮಾಡಿದ್ದ ಶಾರಿಕ್, ತಾನು ಪ್ರೇಮ್ ರಾಜ್ ಎಂದು ಪರಿಚಯ ಮಾಡಿಕೊಂಡಿದ್ದ. ತನಗೆ ನಿಮ್ಮ ಮನೆ ಇಷ್ಟವಾಗಿದೆ. ಫೋಟೊಗಳನ್ನು ನೋಡಿದ್ದೇನೆ. ಬಹುತೇಕ ಫೈನಲ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕ ಮೋಹನ್ ಸಹ, “ಯಾವಾಗ ಬಂದು ನೋಡುತ್ತೀರಾ..?” ಎಂದು ಕೇಳಿದ್ದಾರೆ. ಇದಕ್ಕೆ ಶಾರಿಕ್, “ನಾನು ಕೇರಳದಲ್ಲಿ ಪ್ರವಾಸದಲ್ಲಿದ್ದೇನೆ. ಅಲ್ಲಿಂದ ಬಂದ ತಕ್ಷಣ ನಿಮಗೆ ತಿಳಿಸುತ್ತೇನೆ” ಎಂದು ಹೇಳಿದ್ದ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಎಲ್ಲೂ ಮುಸ್ಲಿಂ ಐಡೆಂಟಿಟಿ ತೋರಿಸಿಕೊಂಡಿರಲಿಲ್ಲ, ತನ್ನನ್ನು ಹಿಂದು ಎಂದೇ ಬಿಂಬಿಸಿಕೊಂಡಿದ್ದ!
ಬಸ್ ಸ್ಟಾಪ್‌ಗೆ ಬಂದು ಕರೆ ಮಾಡಿದ್ದ
ಕೇರಳದಿಂದ ತಾನು ಬರುವ ದಿನಾಂಕವನ್ನು ನಿಗದಿ ಮಾಡಿ ಮನೆ ಮಾಲೀಕರಿಗೆ ಕರೆ ಮಾಡಿ ಮೊದಲೇ ತಿಳಿಸಿದ್ದ. ಮೈಸೂರು ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ ಅವರಿಗೆ ಕರೆ ಮಾಡಿ ಬಸ್ ನಿಲ್ದಾಣಕ್ಕೆ ಕರೆಸಿಕೊಂಡಿದ್ದ. ಮನೆ ಮಾಲೀಕ ಮೋಹನ್ ತಮ್ಮ ಪಲ್ಸರ್ ಬೈಕ್‌ನಲ್ಲಿ ಶಾರಿಕ್‌ನನ್ನು ಪಿಕಪ್ ಮಾಡಿಕೊಂಡು ಹೋಗಿದ್ದರು.
ತಕ್ಷಣವೇ ಅಡ್ವಾನ್ಸ್ ನೀಡಿದ್ದ ಶಾರಿಕ್
ಲೋಕನಾಯಕ ನಗರದ ಮನೆಗೆ ಬಂದ ಶಾರೀಕ್ ಮನೆಯನ್ನು ನೋಡಿದಂತೆ ಮಾಡಿ, ಇಷ್ಟವಾಗಿದೆ ಎಂದು ಹೇಳಿದ್ದಲ್ಲದೆ, ತಕ್ಷಣವೇ ಅಡ್ವಾನ್ಸ್ ನೀಡಿದ್ದ. ಅಲ್ಲದೆ, ತಾನು ಮೊದಲೇ ಹೇಳಿಕೊಂಡಿದ್ದ ಹಾಗೇ ಪ್ರೇಮ್ ರಾಜ್ ಎಂದು ಪರಿಚಯಿಸಿಕೊಂಡು ಸಂಬಂಧಪಟ್ಟ ದಾಖಲೆ ನೀಡಿ ಅಗ್ರಿಮೆಂಟ್ ಮಾಡಿಕೊಂಡಿದ್ದ. ಅಲ್ಲದೆ, ಮನೆ ಮಾಲೀಕನ ವಿಶ್ವಾಸವನ್ನೂ ಗಳಿಸಿದ್ದ.
ಮನೆ ಮಾಲೀಕನ ಪಲ್ಸರ್ ಬೈಕ್ ಅನ್ನೇ ಬಳಸುತ್ತಿದ್ದ
ಮನೆ ಮಾಲೀಕ ಮೋಹನ್ ಅವರ ನಂಬಿಕೆಯನ್ನು ಗಳಿಸಿದ್ದ ಶಾರಿಕ್, ತನ್ನ ಓಡಾಟಕ್ಕೆ ಅವರ ಬ್ಲ್ಯಾಕ್ ಪಲ್ಸರ್ ಬೈಕ್ ಅನ್ನೇ ಬಳಕೆ ಮಾಡುತ್ತಿದ್ದ. ಶಾರಿಕ್‌ನನ್ನು ಪ್ರೇಮ್ ರಾಜ್ ಎಂದು ನಂಬಿದ್ದ ಮೋಹನ್ ಬೈಕ್ ಅನ್ನು ಆತ ಕೇಳಿದಾಗಲೆಲ್ಲ ಕೊಟ್ಟು ಕಳುಹಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಮಂಗಳೂರು ಬ್ಲಾಸ್ಟ್ ಅನಾಹುತ ತಪ್ಪಿಸಿದ್ದು ಆ ಅವಳಿ ವೀರ ಪುರುಷರ ಪವಾಡ?