Site icon Vistara News

ಮಂಗಳೂರು ಸ್ಫೋಟ | ಶಿವಮೊಗ್ಗದ ಟ್ರಯಲ್‌ ಬ್ಲಾಸ್ಟ್‌- ಮಂಗಳೂರು ಬ್ಲಾಸ್ಟ್‌ಗೆ ಸಂಬಂಧ ಇದೆ: ಆರಗ ಜ್ಞಾನೇಂದ್ರ

Home minister araga jnanendra reaction about lokayukta-raid

ಶಿವಮೊಗ್ಗ: ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದವ ಶಂಕಿತ ಉಗ್ರ ಶಾರೀಕ್ ಆಗಿದ್ದಾನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪ್ರಕರಣಕ್ಕೆ ಸಂಬಂಧಿಸಿ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಪೊಲೀಸರು ಕೆಲ ಮನೆಗಳ ಮೇಲೆ ಈಗಾಗಲೇ ದಾಳಿ ನಡೆಸಿದ್ದಾರೆ. ಅನುಮಾನಾಸ್ಪದ ಪ್ರಕರಣ ಕಂಡುಬಂದಲ್ಲೆಲ್ಲ ಕಾರ್ಯಾಚರಣೆ ನಡೆಸಲಾಗಿದೆ. ನಾನು ಈ ಹಂತದಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಮಂಗಳೂರು ಸ್ಫೋಟಕ್ಕೆ ಸಂಬಂಧಪಟ್ಟಂತೆ ಆಮೂಲಾಗ್ರ ತನಿಖೆ ನಡೆಯುತ್ತಿದೆ. ಕೇಂದ್ರ ತಂಡ ಕೂಡ ತನಿಖೆ ನಡೆಸುತ್ತಿದೆ. ಶಾರೀಕ್ ಹುಬ್ಬಳ್ಳಿ, ಮೈಸೂರಲ್ಲಿ ಕೆಲ ಕಾಲ ಇದ್ದ. ಹುಬ್ಬಳ್ಳಿಯಲ್ಲಿ ಐಡಿ ಕಾರ್ಡ್ ಕಳವು ಮಾಡಿದ್ದ. ಅಲ್ಲಿ ಬೇರೆ ಹೆಸರಿನಲ್ಲಿ ವಾಸವಾಗಿದ್ದ. ಇವೆಲ್ಲವೂ ಮಾಹಿತಿ ಸಿಕ್ಕಿದೆ. ತನಿಖೆ ನಂತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಉಗ್ರರಿಂದ ರಕ್ತ ಹರಿಸುವ, ಪ್ರಾಣ ತೆಗೆಯುವ ಕೆಲಸವು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ನಿಂತಿದೆ. ಆದರೂ ಅಲ್ಲಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ. ಆದರೆ, ಹಿಂದಿನ ಸರ್ಕಾರಗಳು ಇದ್ದಾಗ ಇಂತಹ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಆರೋಪಿಯನ್ನು ಬಿಟ್ಟು ಕಳಿಸುತ್ತಿದ್ದವು. ಆದರೆ, ನಮ್ಮ ಸರ್ಕಾರ ಬಂದ ಮೇಲೆ ವಿಸ್ತೃತ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಆರಗ ಹೇಳಿದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಯೆಸ್‌ ಇವನೇ ತೀರ್ಥಹಳ್ಳಿ ಮೂಲದ ಉಗ್ರ ಶಾರಿಕ್‌: ಎಡಿಜಿಪಿ ಅಲೋಕ್‌ ಕುಮಾರ್‌ ಬಹಿರಂಗ

Exit mobile version