Site icon Vistara News

Mango Season: ಉಡುಪಿಯಲ್ಲಿ ಸೀಮೆ ಬದನೆಕಾಯಿ ರೂಪ ಪಡೆದ ಮಾವಿನಹಣ್ಣು; ಏನಿದು ಆಕಾರ-ವಿಕಾರ!

mangoes turns into chayote in udupi

ಉಡುಪಿ: ಹಣ್ಣಿನ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣು ಎಂದರೆ ಎಲ್ಲರಿಗೂ ಬಲು ಪ್ರೀತಿ. ಅಲ್ಲದೆ, ಮಾವಿನ ಹಣ್ಣಿಗೆ ಅದರದ್ದೇ ಆದ ಆಕಾರವೂ ಇದೆ. ಹಾಗಾಗಿ ಈ ಹಣ್ಣಿನ ಹೆಸರು ಹೇಳಿದರೆ ಒಂದು ರೂಪ ಥಟ್‌ ಅಂತ ಕಣ್ಣ ಮುಂದೆ ಬಂದುಬಿಡುತ್ತದೆ. ಈ ಬಾರಿಯ ಮಾವಿನ ಹಣ್ಣಿನ ಋತುವಿನಲ್ಲಿ (Mango Season) ತರಹೇವಾರಿ ಹಣ್ಣುಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಆದರೆ, ಇಲ್ಲೊಂದು ಮಾವು ತನ್ನ ರೂಪವನ್ನೇ ಕಳೆದುಕೊಂಡಿದೆ. ಆಕಾರ ಹೋಗಿ ವಿಕಾರದಂತೆ ಕಾಣುತ್ತಿದೆ. ಇದು ನಿಜವಾಗಿಯೂ ಮಾವಿನ ಹಣ್ಣೇ? ಎಂದು ಪ್ರಶ್ನೆ ಮಾಡುವಂತೆ ಕಾಣುತ್ತಿದೆ. ಒಂದು ಕ್ಷಣ ನೋಡಿ ಹೇಳುವುದಾದರೆ ಇದನ್ನು ಸೀಮೆ ಬದನೆಕಾಯಿ ಎಂದು ಹೇಳಿಬಿಡಬಹುದು. ಆ ರೀತಿ ಕಾಣುತ್ತಿದೆ. ಇದು ವಿಚಿತ್ರವಾದರೂ ಸತ್ಯ.

ಉದ್ಯಮಿ ಕೋಟ ಸುಬ್ರಾಯ ಆಚಾರ್ಯ ಅವರ ಮನೆಯಲ್ಲಿ ಬೆಳೆದ ಮಾವಿನ ಹಣ್ಣುಗಳು ಈ ರೀತಿ ಕಂಡು ಬಂದಿವೆ. ಅವರ ತೋಟದಲ್ಲಿ ಈ ಮಾವಿನ ಹಣ್ಣುಗಳು ಕಂಡುಬಂದಿವೆ. ಇದನ್ನು ಕಂಡು ಮೊದಲು ಅವರಿಗೆ ಸಹಜವಾಗಿಯೇ ವಿಚಿತ್ರ ಎನಿಸಿದೆ. ಅದನ್ನು ಕೊಯ್ದು ನೋಡಿದಾಗ ವಾಸನೆ ಮಾವಿನ ಹಣ್ಣಿನದ್ದೇ ಆದರೂ, ನೋಡಲು ಮಾತ್ರ ಸೀಮೆ ಬದನೆಕಾಯಿಯಂತೆ ಕಾಣುತ್ತಿದೆ.

ಉಡುಪಿಯ ಕೋಟದಲ್ಲಿ ಸೀಮೆ ಬದನೆಕಾಯಿ ರೂಪದಲ್ಲಿ ಕಾಣುತ್ತಿರುವ ಮಾವಿನಹಣ್ಣು

ಇದನ್ನೂ ಓದಿ: Arjun Ram Meghwal: ಕಿರೆನ್ ರಿಜಿಜುಗೆ ಕೊಕ್, ಅರ್ಜುನ್ ರಾಮ್ ಮೇಘ್ವಾಲ್ ನೂತನ ಕೇಂದ್ರ ಕಾನೂನು ಸಚಿವ

ಮಾರುಕಟ್ಟೆಯಲ್ಲಿರುವ ವಿಧ ವಿಧವಾದ ಮಾವಿನಹಣ್ಣು

ಕೃಷಿ ತಜ್ಞರಿಗೆ ಸವಾಲು

ಹೀಗೆ ಮಾವಿನಹಣ್ಣು ಈ ರೀತಿಯ ಆಕಾರ ಪಡೆದಿರುವುದು ಪ್ರಕೃತಿಯ ವೈಶಿಷ್ಟ್ಯ ಎಂದೇ ಹೇಳಬಹುದಾಗಿದ್ದರೂ, ಇದಕ್ಕೇನು ಕಾರಣ ಎಂಬುದು ಮಾತ್ರ ತಿಳಿದುಬಂದಿಲ್ಲ. ಇದನ್ನು ಕೃಷಿ ತಜ್ಞರ ಗಮನಕ್ಕೆ ತರಲಾಗಿದ್ದು, ಅವರೂ ಸಹ ಕಾರಣ ಹುಡುಕಲು ಮುಂದಾಗಿದ್ದಾರೆನ್ನಲಾಗಿದೆ.

ಗ್ರಾಹಕರ ಗಮನ ಸೆಳೆಯುತ್ತಿರುವ ಮಾವಿನಹಣ್ಣುಗಳು

ಮಾರುಕಟ್ಟೆಗೆ ಬಂತು ಉತ್ತರ ಕನ್ನಡದ ಕರಿಈಶಾಡು; ಡಜನ್‌ಗೆ 700 ರೂ.!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮಾವಿನಹಣ್ಣು ಅಂದರೆ ಮೊದಲು ನೆನಪಾಗೋದೇ ಕರಿಈಶಾಡು ಮಾವಿನಹಣ್ಣು. ಜಿಲ್ಲೆಯ ಕರಾವಳಿ ಪ್ರದೇಶವಾದ ಕಾರವಾರ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ಮಾತ್ರ ಬೆಳೆಯುವ ಈ ಕರಿಈಶಾಡು ಮಾವಿನಹಣ್ಣು ತನ್ನದೇ ಆದ ವೈಶಿಷ್ಟ್ಯದ ಮೂಲಕ ಹೆಸರಾಗಿದೆ. ಆದರೆ, ಇದು ಬಲು ದುಬಾರಿಯಾಗಿದ್ದು, ಡಜನ್‌ಗೆ 700 ರೂಪಾಯಿಯಾಗಿದೆ.

ಆಲ್ಫಾನ್ಸೋ ಮಾವು

ಇಲ್ಲಿ ಹೆಚ್ಚಾಗಿ ಬೆಳೆಯುವ ಮಾವು

ಅಪರೂಪದ ಮಾವು ಎನ್ನಲಾದ ಈ ಕರಿಈಶಾಡು ಮಾವನ್ನು ಕೇವಲ ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ ಹಾಗೂ ಕುಮಟಾದ ಕೆಲ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಅದರಲ್ಲೂ ಅಂಕೋಲಾ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಹಾಲಕ್ಕಿ ಸಮುದಾಯದವರು ಈ ಮಾವನ್ನು ಬೆಳೆಯುತ್ತಾರೆ. ಇದೀಗ ಹಲವೆಡೆಯಿಂದ ಮಹಿಳೆಯರು ತಾವು ಬೆಳೆದ ಮಾವನ್ನು ಮಾರುಕಟ್ಟೆಗೆ ತಂದು ಮಾರಾಟಕ್ಕೆ ಇಳಿದಿದ್ದಾರೆ. ಕಾರವಾರ ಮಾರುಕಟ್ಟೆಗೆ ಕರಿಈಶಾಡು ಮಾವು ಲಗ್ಗೆಇಟ್ಟಿದ್ದು ಹಾಲಕ್ಕಿ ಮಹಿಳೆಯರು ಸಾಲು ಸಾಲಾಗಿ ಕುಳಿತು ಕರಿಈಶಾಡು ಮಾವಿನ ಮಾರಾಟ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ.

ಕಾರವಾರ ಮಾರುಕಟ್ಟೆ ಮಾವಿನಹಣ್ಣು

ಇದನ್ನೂ ಓದಿ: Karnataka CM : ಹೈಕಮಾಂಡ್‌ ಆದೇಶಕ್ಕೆ ಬದ್ಧ; ಅಧಿಕಾರ ಹಂಚಿಕೆ ಫಾರ್ಮುಲಾ ಒಪ್ಪಿದ್ದೇನೆ ಎಂದ ಡಿಕೆಶಿ

ಕಾರವಾರ ಮಾರುಕಟ್ಟೆಯಲ್ಲಿ ಕರಿಈಶಾಡು ಮಾವಿನಹಣ್ಣು ಮಾರಾಟ

ಡಜನ್‌ಗೆ 400ರಿಂದ 700 ರೂಪಾಯಿ!

ಈ ಬಾರಿ ಕರಿಈಶಾಡು ಮಾವಿನಹಣ್ಣು 400ರಿಂದ 700 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿದ್ದು, ಉಳಿದಂತೆ ಇತರೆ ಹಣ್ಣುಗಳು 200ರಿಂದ 400 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿವೆ. ಅದರಲ್ಲೂ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಗ್ರಾಹಕರು ಸಹ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಕಾರವಾರ ಮಾತ್ರವಲ್ಲದೆ ನೆರೆಯ ಗೋವಾ, ಮಹಾರಾಷ್ಟ್ರದಿಂದ ಸಹ ಜನರು ಸ್ಥಳೀಯವಾಗಿ ಬೆಳೆದ ಮಾವಿನಹಣ್ಣು ಖರೀದಿಸಿ ಕೊಂಡೊಯ್ಯುತ್ತಾರೆ.

ರಾಜ್ಯದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version