Site icon Vistara News

Mallikarjun Kharge: ಖರ್ಗೆ ಮತ್ತವರ ಹೆಂಡತಿ ಮಕ್ಕಳ ಹತ್ಯೆಗೆ ಮಣಿಕಂಠ ರಾಠೋಡ್‌ ಸಂಚು; ಆಡಿಯೊ ಬಿಟ್ಟ ಕಾಂಗ್ರೆಸ್‌

Manikanta Rathod conspires to kill Mallikarjun Kharge and his wife and children Congress releases audio

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಮತ್ತವರ ಕುಟುಂಬದವರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಅವರಿಗೆ ಜೀವ ಬೆದರಿಕೆ ಇದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (Randeep Singh Surjewala) ಹಾಗೂ ಕಾಂಗ್ರೆಸ್‌ ವಕ್ತಾರ ಪವನ್ ಖೇರಾ (Pawan Khera) ಗಂಭೀರ ಆರೋಪ ಮಾಡಿದ್ದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ (Manikanta Rathod) ಈ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಶನಿವಾರ (ಮೇ 6) ಜಂಟಿ ಸುದ್ದಿಗೋಷ್ಠಿ ನಡೆಸಿದ ರಣದೀಪ್‌ ಸಿಂಗ್‌ ಸುರ್ಜೇವಾಲ, ಪವನ್ ಖೇರಾ, ಮಲ್ಲಿಕಾರ್ಜುನ ಖರ್ಗೆ, ಹೆಂಡತಿ ಮತ್ತು ಮಕ್ಕಳನ್ನು ಸಾಫ್‌ (ಸರ್ವನಾಶ) ಮಾಡುತ್ತೇನೆ ಎಂದು ಮಣಿಕಂಠ ರಾಠೋಡ್‌ ಹೇಳಿದ್ದಾನೆ. ಇದು ತುಂಬ ಅಪಾಯಕಾರಿ ನಡೆ. ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಆತಂಕದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೊಲೆಗೆ ನಡೆದಿರುವ ಸ್ಕೆಚ್‌ ಬಗ್ಗೆ ತಿಳಿದಿದ್ದರೂ ಬಿಜೆಪಿ ನಾಯಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ದಲಿತ ನಾಯಕನ ಹತ್ಯೆಗೆ ಹೊರಟಿದ್ದಾರೆ ಎಂದು ರಣದೀಪ್‌ ಸಿಂಗ್ ಸುರ್ಜೇವಾಲ ಗಂಭೀರ ಆರೋಪ‌ ಮಾಡಿದರು.

ಇದನ್ನೂ ಓದಿ: Tirupati Temple: ತಿರುಪತಿ ತಿರುಮಲ ದರ್ಶನ ಮಾಡಬೇಕೇ?: ಇಲ್ಲಿವೆ ಮಾಹಿತಿ

ಮೋದಿ, ಬೊಮ್ಮಾಯಿ ಮೇಲೆ ಆಕ್ರೋಶ

ಬಿಜೆಪಿ ತನ್ನ ದ್ವೇಷದ ಮೂಲಕ ಕರ್ನಾಟಕದ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿ ಪಾಪದ ಕೃತ್ಯ ಎಸಗಿದೆ. ಹತ್ಯೆಗೆ ಸಂಚು ನಡೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿಯು ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ ಎಂದು ಸುರ್ಜೇವಾಲ ಆರೋಪ ಮಾಡಿದರು.

ರಣದೀಪ್‌ ಸಿಂಗ್‌ ಸುರ್ಜೇವಾಲ ಪತ್ರಿಕಾಗೋಷ್ಠಿ

ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೊದಲ್ಲಿ ಈ ಸಂಚು ಸ್ಪಷ್ಟವಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಕನ್ನಡ ನಾಡಿನ ಮಗ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದ್ವೇಷ ಕಾರುತ್ತಲೇ ಬಂದಿದೆ. ಖರ್ಗೆ ಅವರು ದಲಿತ ಹಾಗೂ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಖರ್ಗೆ ವಿರುದ್ಧ ಸಂಚು ರೂಪಿಸುತ್ತಿದೆ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಆರೋಪಿಸಿದರು.

ಹತ್ಯೆಗೆ ಬಹಿರಂಗ ಸಂಚು

ಫೆ.27, 2023ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಛತ್ರಿ ಕೆಳಗೆ ನಿಂತಿಲ್ಲ ಎಂದು ಹೇಳುವ ಮೂಲಕ ಲೇವಡಿ ಮಾಡಿದ್ದರು. ಬಿಜೆಪಿಯ ದ್ವೇಷಪೂರಿತ ಹೇಳಿಕೆ ಅಲ್ಲಿಗೆ ನಿಲ್ಲಲಿಲ್ಲ. ಇನ್ನು ಬಿಜೆಪಿಯ ರಾಜಸ್ಥಾನದ ಶಾಸಕ ಹಾಗೂ ಪ್ರಧಾನ ಕಾರ್ಯದರ್ಶಿ ಮದನ್ ದಿಲಾವರ್ ಅವರು ಮೇ 02ರಂದು ಮಾತನಾಡುತ್ತಾ, ಖರ್ಗೆ ಅವರಿಗೆ 80 ವರ್ಷ ವಯಸ್ಸಾಗಿದ್ದು, ದೇವರು ಅವರನ್ನು ಯಾವಾಗ ಬೇಕಾದರೂ ಕರೆಸಿಕೊಳ್ಳಬಹುದು ಎಂದು ಖರ್ಗೆ ಅವರ ಸಾವನ್ನು ಬಯಸಿದ್ದರು. ಈಗ ಬಿಜೆಪಿ ನಾಯಕರು ಬಹಿರಂಗವಾಗಿ ಖರ್ಗೆ ಹಾಗೂ ಅವರ ಕುಟುಂಬದ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸುರ್ಜೇವಾಲ ಆರೋಪ ಮಾಡಿದರು.

ಕೆಲ ದಿನಗಳ ಹಿಂದೆ ಬಿಜೆಪಿ ಸಚಿವ ಅಶ್ವತ್ಥನಾರಾಯಣ ಸಿದ್ದರಾಮಯ್ಯ ಅವರ ವಿಚಾರದಲ್ಲೂ ಇದೇ ರೀತಿಯ ಮಾತುಗಳನ್ನಾಡಿದ್ದರು. ಬಿಜೆಪಿಯ ಹತಾಶೆ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ. ಮೋದಿ ಅವರೇ ನೀವು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದೀರಿ, ಇತ್ತ ನಿಮ್ಮ ನಾಯಕರು ಹತ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಪ್ರಜಾತಂತ್ರದ ಹತ್ಯೆ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರ ಹತ್ಯೆಯ ಸಂಚು ಈಗ ಬಯಲಾಗುತ್ತಿದೆ. ಇದೆಲ್ಲದರ ಜವಾಬ್ದಾರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಾದ್ದಾಗಿದ್ದು, ಇವರು ಈ ವಿಚಾರವಾಗಿ ಉತ್ತರ ನೀಡಬೇಕು’ ಎಂದು ತಿಳಿಸಿದರು.

ಇದನ್ನೂ ಓದಿ: Narendra Modi Road show: ಇಂದು ಬೆಂಗಳೂರಿನಲ್ಲಿ ಮೋದಿ ಭರ್ಜರಿ ರೋಡ್‌ ಶೋ, ಹತ್ತು ಲಕ್ಷ ಜನ ಸೇರುವ ನಿರೀಕ್ಷೆ, ಏನು ಮೋದಿ ಪ್ಲಾನ್‌?

ರಕ್ತದಾಹ ನೀಗುವುದಾದರೆ ಅವರನ್ನು ಹತ್ಯೆ ಮಾಡಿ

ಚುನಾವಣಾ ಆಯೋಗದ ಮೇಲೆ ಭರವಸೆ ಇಟ್ಟು ಆಯೋಗಕ್ಕೆ ಈ ವಿಚಾರವಾಗಿ ದೂರು ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಣದೀಪ್‌ ಸಿಂಗ್‌ ಸುರ್ಜೇವಾಲ, “‘ಚುನಾವಣಾ ಆಯೋಗವು ಕೇವಲ ಕಾಂಗ್ರೆಸ್ ನಾಯಕರಿಗೆ ಮಾತ್ರ ನೋಟಿಸ್ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಅವರು ಚುನಾವಣಾ ಆಯೋಗ ಹಾಗೂ ದೇಶದ ಕಾನೂನನ್ನು ನಿಯಂತ್ರಿಸುತ್ತಿದ್ದಾರೆ. ಬಿಜೆಪಿ ನಾಯಕರು ನಿರಂತರವಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ? ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸುವಷ್ಟು ನೀಚ ಮಟ್ಟಕ್ಕೆ ಬಿಜೆಪಿ ಇಳಿಯುವುದಾದರೆ, ಅವರ ಹತ್ಯೆ ಮಾಡಲಿ. ಆ ಮೂಲಕವಾದರೂ ಬಿಜೆಪಿ ರಕ್ತದಾಹ ನೀಗುವುದಾದರೆ ಅವರನ್ನು ಹತ್ಯೆ ಮಾಡಿ’ ಎಂದು ಹರಿಹಾಯ್ದರು. ಕೆಪಿಸಿಸಿ ವಕ್ತಾರ ರಮೇಶ್ ಬಾಬು ಸೇರಿದಂತೆ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಸುದ್ದಿಗೋಷ್ಠಿಯ ವಿಡಿಯೊ ಇಲ್ಲಿದೆ; ಖರ್ಗೆ ಬಗ್ಗೆ ಮಾತನಾಡಿದ ಆಡಿಯೊದಲ್ಲೇನಿದೆ?

ಏನಿದು ಆಡಿಯೊ?

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಾಗೂ ಬಿಜೆಪಿ ಮುಖಂಡ ರವಿ ಎಂಬುವವರು ಮಾತನಾಡಿದ್ದಾರೆನ್ನಲಾದ ಆಡಿಯೊ ಈಗ ಬಹಿರಂಗಗೊಳಿಸಲಾಗಿದೆ. ಇದರಲ್ಲಿ ನನ್ನ ಮೇಲೆ 44 ಕೇಸ್‌ ಇವೆ ಎಂದು ಹೇಳಿದವರು ಯಾರು? ಎಂದು ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಮಣಿಕಂಠ ಕೇಳುತ್ತಾರೆ. ಅದಕ್ಕೆ ರವಿ, ನಾವು ಯಾರೂ ಈ ರೀತಿ ಆರೋಪ ಮಾಡುವುದಿಲ್ಲ. ಖರ್ಗೆ ಕಡೆಯವರು ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಅದಕ್ಕೆ ಮಣಿಕಂಠ, ಹಾಗೆ ಮಾತನಾಡುವ ಖರ್ಗೆ ಕಡೆಯವರನ್ನೇ ಕೇಳು ಎಂದು ಹೇಳುತ್ತಾರೆ. ಆಗ ರವಿ, ಅವರ ಫೋನ್‌ ನಂಬರ್‌ ಕೊಡಿ, ಅವರ ಯಾರ ಫೋನ್‌ ನಂಬರ್‌ ಸಹ ಇಲ್ಲ. ನಾನು ನಿಮ್ಮ ಅಭಿಮಾನಿ ಇದ್ದೇನೆ. ನಮ್ಮ ಅಣ್ಣನ ಬಗ್ಗೆ ಏಕೆ ಹೀಗೆ ಮಾತನಾಡುತ್ತೀರೆಂದು ಅವರಿಗೂ ಕೇಳುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಮಣಿಕಂಠ, ನನ್ನ ಬಳಿ ಅವರ ಫೋನ್‌ ನಂಬರ್‌ ಇದ್ರೆ ಅವರು, ಅವರ ಹೆಂಡತಿ ಮಕ್ಕಳನ್ನು ಸಾಫ್‌ ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಅವರ ಫೋನ್‌ ನಂಬರ್‌ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: Narendra Modi Road Show: ರಾಜಧಾನಿಯಲ್ಲಿ ಟಾರ್ಗೆಟ್‌ 20 ತಲುಪಿಸಲಿದ್ದಾರಾ ಪ್ರಧಾನಿ?

ಆಗ ರವಿ, ಯಾರ ಹೆಂಡತಿ, ಮಕ್ಕಳನ್ನು ಸಾಫ್‌ ಮಾಡುತ್ತೀರಿ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, “ನೀನು ಯಾರ ಹೆಸರನ್ನು ತೆಗೆದುಕೊಂಡಿದ್ದೀಯಾ? ಎಂದು ಕೇಳಿದರು. ಆಗ ರವಿ, ಖರ್ಗೆ ಅವರದ್ದು ಅಣ್ಣಾ ಎಂದು ಉತ್ತರಿಸಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, “ಹಾ ಅವರದ್ದೇ… ಅವರ ನಂಬರ್‌ ಇದ್ದರೆ ಅವರನ್ನು ಮತ್ತವರ ಕುಟುಂಬದವರನ್ನು ಸಾಫ್‌ ಮಾಡುತ್ತೇನೆ. ಅದಕ್ಕೇ ಅವರ ನಂಬರ್‌ ನನ್ನ ಬಳಿ ಇಲ್ಲ. ಖರ್ಗೆ ಅವರ ನಂಬರ್‌ ಇದ್ದರೆ ನಾನು ಬಾಯಿಗೆ ಬಂದ ಹಾಗೆ ಬಯ್ಯುತ್ತೇನೆ ಅಂತ ನಿನಗೆ ಹೇಳುತ್ತಿದ್ದೇನೆ” ಎಂದು ಉತ್ತರಿಸುತ್ತಾರೆ. ಈಗ ಈ ಆಡಿಯೊವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ.

Exit mobile version