Site icon Vistara News

Independence Day 2023 : 77ರ ಸ್ವಾತಂತ್ರ್ಯದಿನಕ್ಕೆ ಮಾಣಿಕ್‌ ಷಾ ಮೈದಾನ ಸಿದ್ಧ; ಇರಲಿದೆ ಸಾಹಸ ಪ್ರದರ್ಶನ

Independence Day 2023 Manikshah Maidan

ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆ (Independence Day 2023) ಸಮಾರಂಭಕ್ಕೆ ಫೀಲ್ಡ್ ಮಾರ್ಷಲ್ ಮಾಣಿಕ್‌ಷಾ ಪರೇಡ್ ಮೈದಾನ (Field Marshal Manikshah Parade Ground) ಸಿದ್ಧತೆಯು ಭರದಿಂದ ಸಾಗುತ್ತಿದೆ. ಆಗಸ್ಟ್ 15ರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಆಗಸ್ಟ್‌ 15ರ ಸಿದ್ಧತೆ ಕುರಿತು ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಆಯುಕ್ತರ ಜಂಟಿ ಸುದ್ದಿಗೋಷ್ಠಿ ಭಾನುವಾರ ನಡೆಸಲಾಯಿತು. ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಭಾಗಿಯಾಗಿದ್ದರು.

ಬೆಳಗ್ಗೆ 9 ಕ್ಕೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ

77ರ ಸ್ವಾತಂತ್ರ್ಯ ದಿನಾಚರಣೆಯಂದು ಆಗಸ್ಟ್‌ 15ರ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣದ ಬಳಿಕ ತೆರೆದ ಜೀಪಿನಲ್ಲಿ ಪೆರೇಡ್‌ ವೀಕ್ಷಣೆ ಮಾಡಲಿದ್ದಾರೆ. ಜತೆಗೆ ಗೌರವ ರಕ್ಷೆ ಸ್ವೀಕಾರ ನಂತರ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಲಿದ್ದಾರೆ.

ಇದನ್ನೂ ಓದಿ: Independence Day 2023: ತಿರಂಗಾವನ್ನು ಜಾಲತಾಣಗಳ ಡಿಪಿ ಇಟ್ಟು ದೇಶಪ್ರೇಮ ಮೆರೆಯಲು ಮೋದಿ ಕರೆ

ಮಕ್ಕಳ ನೃತ್ಯದ ಜತೆಗೆ ಸಾಹಸಿ ಪ್ರದರ್ಶನ

ಆಗಸ್ಟ್‌ 15ರಂದು ನಾಡಗೀತೆ, ರೈತಗೀತೆ ಬಳಿಕ ಬೆಂಗಳೂರು ದಕ್ಷಿಣ ವಲಯದ ಕರ್ನಾಟಕ ಪಬ್ಲಿಕ್‌ ಶಾಲೆಯ 750 ಮಕ್ಕಳಿಂದ ವೀರ ನಮನದ ನೃತ್ಯ ಇರಲಿದೆ. ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳಿಂದ ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ ಎಂಬ ನೃತ್ಯ ರೂಪಕ ಮಾಡಲಿದ್ದಾರೆ.

ಇದರೊಂದಿಗೆ ಬೆಳಗಾವಿಯ ಬೈಲಹೊಂಗಲದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 50 ಮಕ್ಕಳಿಂದ ರೋಪ್‌ ಸ್ಕಿಪಿಂಗ್‌ ಇರಲಿದೆ. ಎಂಇಜಿ ತಂಡದಿಂದ ಕಲಾರಿಪಯಟ್ಟು ಪ್ರದರ್ಶನ ಹಾಗೂ ಎಎಸ್‌ಸಿ ತಂಡದಿಂದ ಟೆಂಟ್‌ ಪೆಗ್ಗಿಂಗ್‌ ಹಾಗೂ ಮೋಟರ್‌ ಸೈಕಲ್‌ ಪ್ರದರ್ಶನ ಇರಲಿದೆ.

ಕವಾಯತ್ತಿನಲ್ಲಿ ಈ ಬಾರಿ ಗೋವಾ ಪೊಲೀಸರು ವಿಶೇಷವಾಗಿ ಭಾಗಿಯಾಗಲಿದ್ದಾರೆ. ಉಳಿದಂತೆ ಬಿಎಸ್ ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್ ಪಡೆ, ಟ್ರಾಫಿಕ್ ವಾರ್ಡ್‌ನ್, ಡಾಗ್ ಸ್ಕ್ವಾಡ್‌ಗಳು ಸೇರಿದಂತೆ 38 ತುಕಡಿಗಳಲ್ಲಿ 1.350 ಮಂದಿ ಭಾಗಿಯಾಗಲಿದ್ದಾರೆ.

100 ಸಿಸಿ ಕ್ಯಾಮೆರಾ ಅಳವಡಿಕೆ

ಸ್ವಾತಂತ್ರ್ಯ ದಿನದಂದು ಯಾವುದೇ ಅಹಿತಕರ ಘಟನೆ ನಡೆಯಬಾರೆಂದು ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 15ರಂದು ಪೆರೇಡ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮೈದಾನ ಸುತ್ತ ಸುರಕ್ಷತೆ ದೃಷ್ಠಿಯಿಂದ 100 ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ 2 ಬ್ಯಾಗೇಜ್‌ ಸ್ಕ್ಯಾನರ್‌ ಅಳವಡಿಕೆ ಮಾಡಲಾಗುತ್ತಿದೆ.

ಜತೆಗೆ ಆಂಬ್ಯುಲೆನ್ಸ್‌, ವೈದ್ಯಕೀಯ ವ್ಯವಸ್ಥೆಯೊಂದಿಗೆ ಅಗ್ನಿಶಾಮಕ ವಾಹನದೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್, ಅಗ್ನಿಶಾಮಕ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೇರಿದಂತೆ ಎಲ್ಲಾ ವಿಶೇಷ ತಂಡಗಳು ಇರಲಿವೆ ಎಂದು ತಿಳಿಸಿದರು. ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್ ಗ್ರೌಂಡ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾಸ್‌ ಮೇಲೆ ಯಾವ ಗೇಟ್‌ನಲ್ಲಿ ಪ್ರವೇಶ ಎಂದು ಇರುತ್ತದೆಯೋ ಆ ಗೇಟ್‌ನಿಂದಲೇ ಬರಬೇಕು. ಬೆಳಗ್ಗೆ 8.30ರ ಒಳಗೆ ಮೈದಾನದಲ್ಲಿ ಇರಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Independence Day 2023 : ಆಗಸ್ಟ್‌ 15ರಂದು ಕೆಂಪುಕೋಟೆಗೆ ಆಹ್ವಾನ; ಬಣವಿಕಲ್ಲು ದಂಪತಿ ಸಂತಸ

ಆಗಸ್ಟ್‌ 15 ರಂದು ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ

ಆಸಗ್ಟ್‌ 15ರಂದು ಸ್ವಾತಂತ್ರ್ಯ ದಿನದ ಅಂಗವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಕಬ್ಬನ್‌ಪಾರ್ಕ್‌ನಿಂದ ಬಿಆರ್‌ವಿ ಜಂಕ್ಷನ್‌, ಕಾಮರಾಜರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧ

1) ಸೆಂಟ್ರಲ್‌ ಸ್ಟ್ರೀಟ್‌
2) ಅನಿಲ್‌ ಕುಂಬ್ಳೆ ವೃತ್ತ
3) ಶಿವಾಜಿನಗರ ಬಸ್‌ ನಿಲ್ದಾಣ
4) ಕಬ್ಬನ್‌ ರಸ್ತೆ
5) ಸಿಟಿಓ ವೃತ್ತ
6) ಕೆಆರ್‌ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ
7) ಎಂಜಿ ರಸ್ತೆ
8) ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ

ಮೈದಾನದೊಳಗೆ ಇವುಗಳು ನಿಷಿದ್ಧ

ಸಿಗರೇಟ್, ಬೆಂಕಿ ಪೆಟ್ಟಿಗೆ , ಕರಪತ್ರಗಳು, ಬಣ್ಣದ ದ್ರಾವಣಗಳು, ನೀರಿನ ಬಾಟಲ್‌ಗಳು ಹಾಗೂ ಕ್ಯಾನ್‌ಗಳು ತರಲುವಂತಿಲ್ಲ. ಚಾಕು ಚೂರಿಗಳು, ಕಪ್ಪು ಕರವಸ್ತ್ರಗಳು ಸೇರಿ ತಿಂಡಿ, ತಿನಿಸುಗಳು, ಮದ್ಯದ ಬಾಟಲ್‌ಗಳು ತರುವಂತಿಲ್ಲ. ವಿಡಿಯೋ ಮತ್ತು ಸ್ಟಿಲ್ ಕ್ಯಾಮೆರಾಗಳು ಪಟಾಕಿ ಮತ್ತು ಸ್ಫೋಟಕ ವಸ್ತುಗಳು ನಿಷೇಧ ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version