ಬೆಂಗಳೂರು: ಕೋಲ್ಕತ್ತಾ ಮೂಲದ ಎಎಂಆರ್‌ಐ (ಅಡ್ವಾನ್ಸ್‌ಡ್ ಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಆಸ್ಪತ್ರೆಗಳನ್ನು (AMRI hospitals) ಮಣಿಪಾಲ್ ಹಾಸ್ಪಿಟಲ್ಸ್ (Manipal Hospitals) ಸಂಸ್ಥೆ ಖರೀದಿಸಿದೆ. ಭಾರತದ ಎರಡನೇ ಅತಿದೊಡ್ಡ ಆರೋಗ್ಯ ಸಂಸ್ಥೆಯಾದ ಮಣಿಪಾಲ್ ಹಾಸ್ಪಿಟಲ್ಸ್, ಎಎಂಆರ್‌ಐ ಚೈನ್‌ನ ಶೇ. 84ರಷ್ಟು ಷೇರನ್ನು ಒಟ್ಟು 2,400 ಕೋಟಿ ರೂ.ಗೆ ಪಡೆದುಕೊಂಡಿದೆ.
ಇದರೊಂದಿಗೆ ಮಣಿಪಾಲ್ ಹಾಸ್ಪಿಟಲ್ಸ್ ಪೂರ್ವ ಭಾರತದ ಅತಿದೊಡ್ಡ ಆಸ್ಪತ್ರೆ ಸರಪಳಿಯಾಗಿ ಬೆಳೆದಿದೆ. ಪೂರ್ವ ಭಾರತದಲ್ಲಿ ಜಟಿಲವಾದ, ಅತ್ಯಾಧುನಿಕವಾದ ಮೂರನೇ ಮತ್ತು ನಾಲ್ಕನೇ ಹಂತದ ಆರೋಗ್ಯ ಸೇವೆ ಪೂರೈಸುವ ಅತಿ ದೊಡ್ಡ ಆರೋಗ್ಯ ಸಂಸ್ಥೆ ಮಣಿಪಾಲ್ ಹಾಸ್ಪಿಟಲ್ಸ್ ಆಗಿದೆ. ಇತ್ತೀಚೆಗೆ ಮಣಿಪಾಲ್ ಗ್ರೂಪ್, ವಿಕ್ರಮ್ ಆಸ್ಪತ್ರೆಯನ್ನೂ ಖರೀದಿಸಿತ್ತು.
ಎಎಂಆರ್‌ಐ ಹಾಸ್ಪಿಟಲ್ಸ್ ಅನ್ನು ಇಮಾಮಿ ಗ್ರೂಪ್ ಆರಂಭಿಸಿತ್ತು. ಎಫ್‌ಎಂಸಿಜಿ, ಖಾದ್ಯ ತೈಲ, ಕಾಗದ ಮತ್ತು ಇನ್ನಿತರ ಅನೇಕ ಉದ್ಯಮಗಳಲ್ಲಿ ಇಮಾಮಿ ಗ್ರೂಪ್ ತೊಡಗಿಸಿಕೊಂಡಿದೆ. ಎಎಂಆರ್‌ಐ ಆಸ್ಪತ್ರೆಗಳಲ್ಲಿ ಇಮಾಮಿ ಗ್ರೂಪ್ ಶೇಕಡಾ 98 ಪಾಲನ್ನು ಹಾಗೂ ಶೇಕಡಾ 2ರಷ್ಟು ಷೇರುಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಹೊಂದಿದ್ದವು. ಇನ್ನು ಮುಂದೆ ಎಎಂಆರ್‌ಐನಲ್ಲಿ ಇಮಾಮಿ ಗ್ರೂಪ್ ಶೇ. 15ರಷ್ಟನ್ನು ಪಾಲನ್ನು ಉಳಿಸಿಕೊಳ್ಳಲಿದೆ. ಪಶ್ಚಿಮ ಬಂಗಾಳ ಸರ್ಕಾರ ಶೇ. 1ರಷ್ಟು ಪಾಲನ್ನು ಹೊಂದಿರಲಿದೆ.
ಮಣಿಪಾಲ್ ಹಾಸ್ಪಿಟಲ್ಸ್ ಮತ್ತು ಇಮಾಮಿ ನಡುವಿನ ಸುದೀರ್ಘ ಕಾನೂನು ಹೋರಾಟದ ನಂತರ ಈ ಒಪ್ಪಂದ ಕಾರ್ಯರೂಪಕ್ಕೆ ಬಂದಿದೆ. ಯಾವುದೇ ಮೂರನೇ ವ್ಯಕ್ತಿಗೆ ಇಮಾಮಿ ತನ್ನ ಪಾಲನ್ನು ಮಾರಾಟ ಮಾಡದಂತೆ ತಡೆಯಲು ಮಣಿಪಾಲ್ ಹಾಸ್ಪಿಟಲ್ಸ್ ನ್ಯಾಯಾಲಯದ ಮೊರೆ ಹೋಗಿತ್ತು. ಕೊನೆಗೂ ಇಮಾಮಿಯ ಬಹುಪಾಲು ಮಣಿಪಾಲ್ ಪಾಲಾಗಿದೆ. ಇಮಾಮಿ ಮತ್ತು ಮಣಿಪಾಲ್ ನಡುವೆ ಕಳೆದೆರಡು ವರ್ಷಗಳಿಂದಲೇ ಖರೀದಿ ಮಾತುಕತೆ ನಡೆಯುತ್ತಿದ್ದವು. 1,500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಆಸ್ತಿಯನ್ನು ಖರೀದಿಸಲು ಮಣಿಪಾಲ್ ಹಾಸ್ಪಿಟಲ್ಸ್ ನಿರಾಕರಿಸಿದ್ದರೆ, ಇಮಾಮಿ ತನ್ನ ಆಸ್ತಿಗಳಿಗೆ ಭಾರೀ ಮೌಲ್ಯವನ್ನು ನಿಗದಿಪಡಿಸಿತ್ತು. ಇದರಿಂದಾಗಿ ಒಪ್ಪಂದವು ತೂಗುಯ್ಯಾಲೆಯಲ್ಲಿತ್ತು.
ಎಎಂಆರ್‌ಐ ನಾಲ್ಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿದ್ದು, ಮೂರು ಆಸ್ಪತ್ರೆಗಳು ಕೋಲ್ಕೊತ್ತಾದಲ್ಲಿವೆ. ಒಂದು ಆಸ್ಪತ್ರೆ ಭುವನೇಶ್ವರದಲ್ಲಿದೆ. ನಾಲ್ಕೂ ಆಸ್ಪತ್ರೆಗಳಲ್ಲಿ ಒಟ್ಟಾಗಿ 1,150 ಬೆಡ್‌ಗಳಿವೆ. ಕೋಲ್ಕೊತ್ತಾದಲ್ಲಿ ಡಯಾಗ್ನಾಸ್ಟಿಕ್ ಸೆಂಟರ್ ಅನ್ನೂ ಇಮಾಮಿ ಗ್ರೂಪ್ ಹೊಂದಿದೆ.
ಇದನ್ನೂ ಓದಿ: Manipal Hospitals : ಮಣಿಪಾಲ್ ಹಾಸ್ಪಿಟಲ್ಸ್ ಸರಣಿ ಆಸ್ಪತ್ರೆಗಳನ್ನು ಖರೀದಿಸಿದ ಸಿಂಗಾಪುರದ ಟೆಮಾಸೆಕ್ ಹೋಲ್ಡಿಂಗ್ಸ್: ವರದಿ