Site icon Vistara News

Mann ki Baat 2022 | ಕೋಲಾರದ ಬೃಹತ್‌ ರಾಷ್ಟ್ರಧ್ವಜ; ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಶಂಸೆ

ನವ ದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ ಬೃಹತ್‌ ರಾಷ್ಟ್ರಧ್ವಜ ಪ್ರಧಾನಿ ಮೋದಿಯವರ ಗಮನ ಸೆಳೆದಿದೆ.

ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಎಲ್ಲೆಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು ಎಂಬುದನ್ನು ತಮ್ಮ ಆಕಾಶವಾಣಿಯ ಮಾಸಿಕ ಕಾರ್ಯಕ್ರಮ “ಮನ್‌ ಕಿ ಬಾತ್‌ʼ (Mann ki Baat 2022)ನಲ್ಲಿ ವಿವರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೋಲಾರದ, ಲಿಮ್ಕಾ ದಾಖಲೆ ಬರೆದ ಬೃಹತ್‌ ರಾಷ್ಟ್ರಧ್ವಜದ ಪ್ರದರ್ಶನವನ್ನು ಉಲ್ಲೇಖಿಸಿದ್ದಾರೆ.

202 ಮೀ. ಅಗಲ ಹಾಗೂ 630 ಮೀ. ಉದ್ದದ ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯೋತ್ಸವದಂದು ಹಾರಿಸಲಾಗಿತ್ತು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಮೂಲಕ ಪುಷ್ಪ ವೃಷ್ಟಿಯನ್ನು ಮಾಡಲಾಗಿತ್ತು.

ಸಂಸದ ಎಸ್‌. ಮುನಿಸ್ವಾಮಿ ಶ್ರಮ ವಹಿಸಿ ಈ ರಾಷ್ಟ್ರಧ್ವಜ ನಿರ್ಮಾಣ ಮಾಡಿಸಿದ್ದರು. ಸುಮಾರು 12,800 ಮೀಟರ್‌ ಬಟ್ಟೆ ಬಳಸಿ ಸುಮಾರು 3,300 ಕೆಜಿ ತೂಕದ 203ಅಡಿ ಅಗಲ, 630 ಅಡಿ ಉದ್ದದ, ಬೃಹತ್‌ ರಾಷ್ಟ್ರಧ್ವಜ ನಿರ್ಮಾಣ ಮಾಡಲಾಗಿತ್ತು. 2 ಸಾವಿರ ವಿದ್ಯಾರ್ಥಿಗಳು ಈ ಧ್ವಜವನ್ನು ಹಿಡಿದು ಸಂಭ್ರಮಿಸಿದ್ದರು.

ಬೃಹತ್‌ ರಾಷ್ಟ್ರಧ್ವಜವನ್ನು ವಿದ್ಯಾರ್ಥಿಗಳು ಪ್ರದರ್ಶಿಸುತ್ತಿದ್ದಂತೆಯೇ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಿಸಿದ್ದು, ನೆರೆದಿದ್ದ ಸಹಸ್ರಾರು ಮಂದಿಯಲ್ಲಿ ರೋಮಾಂಚನವನ್ನುಂಟು ಮಾಡಿತ್ತು. ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಈ ಧ್ವಜವನ್ನು ಸಿದ್ಧಪಡಿಸಲಾಗಿದ್ದು, ಸುಮಾರು ಒಂದು ವಾರಗಳ ಕಾಲ ಇದರ ತಯಾರಿಗೆ ಹತ್ತಾರು ದರ್ಜಿಗಳು ಶ್ರಮಿಸಿದ್ದರು. ಅವರನ್ನು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಗೌರವಿಸಲಾಗಿತ್ತು.

ಇದನ್ನೂ ಓದಿ | ಮಧುವಿನಿಂದಲೇ ಬದುಕು ಕಟ್ಟುವ ಮಧುಕೇಶ್ವರ್‌ ಹೆಗಡೆ: ಮೋದಿ ಹೇಳಿದ ಈ ಸಾಹಸಿ ʻಜೇನುʼಗಾರ ಯಾರು?

Exit mobile version