ಪಣಂಬೂರು: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಇಂಟಕ್) ಜಿಲ್ಲಾ ಘಟಕವನ್ನು (Dakshina kannada INTUC) ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮನೋಹರ್ ಶೆಟ್ಟಿ ಅವರಿಗೆ ಮತ್ತೆ ಜಿಲ್ಲಾ ಘಟಕದ ಸಾರಥ್ಯ ನೀಡಲಾಗಿದೆ.
ಕಳೆದ ಒಂದೆರಡು ವಾರಗಳಲ್ಲಿ ನಡೆದ ಗೊಂದಲದ ಬೆಳವಣಿಗೆಯಿಂದ ತಾತ್ಕಾಲಿಕ ಸಮಿತಿಯು ಇಂಟಕ್
ಮುಖಂಡರೊಡನೆ ಚರ್ಚಿಸದೆ ಏಕಾಏಕಿ ಅಧ್ಯಕ್ಷರನ್ನು ಬದಲಾವಣೆ ಮಾಡಿತ್ತು. ಆದರೆ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರ ತೀವ್ರ ವಿರೋಧ, ಎಚ್ಚರಿಕೆಯ ಬಳಿಕ ಜಿಲ್ಲಾ ಇಂಟಕ್ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಅವರನ್ನು ಮುಂದುವರಿಸಿ ರಾಜ್ಯ ಘಟಕದ ಹಂಗಾಮಿ ಅಧ್ಯಕ್ಷ ಡಿ. ಲಕ್ಷ್ಮೀ ವೆಂಕಟೇಶ್ ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಇಂಟಕ್ ರಾಷ್ಟ್ರೀಯ ಅಧ್ಯಕ್ಷ ಸಂಜೀವರೆಡ್ಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅನುಮೋದನೆ ಮೇರೆಗೆ ಮನೋಹರ್ ಶೆಟ್ಟಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ನಿರ್ಧಾರದಿಂದ ಜಿಲ್ಲಾ ಇಂಟಕ್ ಪ್ರಮುಖರು, ಕಾರ್ಯಕರ್ತರು ಹಾಗೂ ವಿವಿಧ ಸಹ ಯೂನಿಯನ್‌ಗಳಲ್ಲಿ ಹರ್ಷ ವ್ಯಕ್ತವಾಗಿದೆ.
ಇದನ್ನೂ ಓದಿ | Karnataka Congress: ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಆಕ್ರೋಶ ಸ್ಫೋಟವಾಗುತ್ತದೆಯೇ?: ದೆಹಲಿಯಲ್ಲಿ ಕಾವೇರಿದ ಕರ್ನಾಟಕ ರಾಜಕೀಯ
ರಾಜ್ಯ ಇಂಟಕ್ ನಿರ್ಧಾರವನ್ನು ರಾಜ್ಯ ಕಾರ್ಯಾಧ್ಯಕ್ಷರೂ ಆಗಿರುವ ರಾಕೇಶ್ ಮಲ್ಲಿ ಅವರು ಸ್ವಾಗತಿಸಿ, ಮನೋಹರ್ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ ಹಾಗೂ ಮತ್ತೆ ಇಂಟಕ್ ಬಲಿಷ್ಠವಾಗಿ ಜಿಲ್ಲೆಯಲ್ಲಿ ಬೆಳೆಯಲಿ ಎಂದು ಹಾರೈಸಿದ್ದಾರೆ.