Site icon Vistara News

Rahul Gandhi | ರಾಹುಲ್‌ ಗಾಂಧಿ ನೀಡಲು ಮುಂದಾದ ಖಡ್ಗ ನಿರಾಕರಿಸಿದ ಮಂತ್ರಾಲಯ ಶ್ರೀಗಳು

Rahul Gandhi Mantralaya

ಮಂತ್ರಾಲಯ: ಭಾರತ್‌ ಜೋಡೋ ಯಾತ್ರೆ ಮಧ್ಯೆಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಅವರು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಖಡ್ಗ ನೀಡಲು ಮುಂದಾಗಿದ್ದು, ಶ್ರೀಗಳು ಖಡ್ಗ ಸ್ವೀಕರಿಸಲು ನಿರಾಕರಿಸಿದ್ದಾರೆ.

ಗುರುವಾರ ಮಂತ್ರಾಲಯಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ, ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದರು. ಬಳಿಕ ರಾಯರ ದರ್ಶನ ಪಡೆದ ಅವರು ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಚನವನ್ನೂ ಪಡೆದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಂದ ಖಡ್ಗ ಪಡೆದ ರಾಹುಲ್‌ ಗಾಂಧಿ, ಶ್ರೀಗಳಿಗೆ ನೀಡಲು ಮುಂದಾದರು. ಆದರೆ, ದೂರದಿಂದಲೇ ಶ್ರೀಗಳು ಇದನ್ನು ನಿರಾಕರಿಸಿದರು.

ನೆಹರು-ಗಾಂಧಿ ವಂಶದ ಮೊದಲ ಕುಡಿ

ರಾಹುಲ್‌ ಗಾಂಧಿ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದ ನೆಹರು-ಗಾಂಧಿ ವಂಶದ ಮೊದಲ ಕುಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜವಾಹರ ಲಾಲ್‌ ನೆಹರು ಅವರಿಂದ ಹಿಡಿದು ಇದುವರೆಗೆ ಗಾಂಧಿ ಕುಟುಂಬದ ಯಾರೊಬ್ಬರೂ ರಾಯರ ಮಠಕ್ಕೆ ಭೇಟಿ ನೀಡಿರಲಿಲ್ಲ.

ರಾಹುಲ್‌ ಗಾಂಧಿ ಅವರಿಗೆ ಮಂತ್ರಾಲಯ ಶ್ರೀಗಳಿಂದ ಆಶೀರ್ವಾದ.

ಮಂತ್ರಾಲಯ ಹೊರವಲಯದಲ್ಲಿ ವಾಸ್ತವ್ಯ

ಮಂತ್ರಾಲಯ ಹೊರವಲಯದಲ್ಲಿಯೇ ರಾಹುಲ್‌ ಗಾಂಧಿ ಗುರುವಾರ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ ೬.೩೦ಕ್ಕೆ ಅವರು ರಾಯಚೂರಿನಲ್ಲಿ ಯಾತ್ರೆ ಆರಂಭಿಸಲಿದ್ದಾರೆ. ಮಂತ್ರಾಲಯ ಭೇಟಿ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಬ್ಯಾರಿಕೇಡ್‌ ಹಾಕಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ರಾಹುಲ್‌ ಗಾಂಧಿ ಅವರಿಗೆ ಡಿ.ಕೆ.ಶಿವಕುಮಾರ್‌, ರಣದೀಪ್‌ ಸುರ್ಜೇವಾಲಾ ಹಾಗೂ ಬಿ.ಕೆ.ಹರಿಪ್ರಸಾದ್‌ ಅವರು ಸಾಥ್‌ ನೀಡಿದರು.

ಇದನ್ನೂ ಓದಿ | Bharat jodo | ಬಳ್ಳಾರಿಯ ಜೀನ್ಸ್‌ ಉದ್ಯಮದ ನೋವು ನಲಿವು ಕೇಳಿಸಿಕೊಂಡ ರಾಹುಲ್‌ ಗಾಂಧಿ, ಸಿಕ್ಕಿತು ಕೆಲವು ಗಿಫ್ಟ್‌!

Exit mobile version